Advertisement

ಜಲಯಾನದ ಅವಕಾಶಗಳಿಗೆ ಮಂಗಳೂರು ತೆರೆದುಕೊಳ್ಳಲಿ

12:42 PM Dec 16, 2018 | |

ಸ್ಮಾರ್ಟ್‌ ನಗರಿಯಾಗಿರುವ ಮಂಗಳೂರಿನಲ್ಲಿ ಪ್ರವಾಸೋದ್ಯಮ ವಿಸ್ತರಣೆಗೆ ಸಾಕಷ್ಟು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಜಲಯಾನದ ಸಾಧ್ಯತೆಯತ್ತಲೂ ಗಮನಹರಿಸಿದರೆ ಮಂಗಳೂರಿನ ಆರ್ಥಿಕ ಅಭಿವೃದ್ಧಿಗೆ ಹೆಬ್ಬಾಗಿಲನ್ನು ತೆರೆದಂತಾಗುವುದು. ಮಂಗಳೂರಿನಿಂದ ಗೋವಾ, ಕಾರವಾರಕ್ಕೆ ಜಲಯಾನದ ಮೂಲಕ ಸಂಪರ್ಕ ಕಲ್ಪಿಸಲು ಇರುವ ಸಾಧ್ಯತೆಗಳತ್ತ ಯೋಜನೆ ರೂಪುಗೊಂಡರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ದೇಶದ, ಹೊರ ದೇಶಗಳ ಪ್ರವಾಸಿಗರಿಗೊಂದು ಸ್ಥಳ ವೀಕ್ಷ ಣೆಗೆ ಹೊಸ ಅವಕಾಶವನ್ನು ನೀಡಿದಂತಾಗುವುದು.

Advertisement

ಮಂಗಳೂರಿಗೆ ಸಾಗರ ಸಂಚಾರ ಪ್ರವಾಸಿಗರ ಆಗಮನ ಹೆಚ್ಚುತ್ತಿದೆ. ನವಮಂಗಳೂರು ಬಂದರಿಗೆ ಪ್ರಯಾಣಿಕ ಹಡಗುಗಳ ಮೂಲಕ ವಿದೇಶಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಂಗಳೂರು ಹಾಗೂ ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಎನ್‌ ಎಂಪಿಟಿ ಸರಕು ಹಡಗುಗಳ ಜತೆಗೆ ಪ್ರಯಾಣಿಕ ಹಡಗುಗಳ ಲ್ಯಾಂಡಿಂಗ್‌ ತಾಣವಾಗಿಯೂ ಗುರುತಿಸಿಕೊಳ್ಳುತ್ತಿದೆ. ಇದರ ವಿಸ್ತರಣೆಯಾಗಿ ಈ ಅವಕಾಶಗಳನ್ನು ಬಳಸಿಕೊಂಡು ಮಂಗಳೂರು ಜಲಯಾನ ಕೇಂದ್ರವಾಗಿ ರೂಪುಗೊಳ್ಳಲು ಕಾರ್ಯಯೋಜನೆಗಳು ಹಾಗೂ ಪ್ರೋತ್ಸಾಹಕ ಕ್ರಮಗಳ ಬಗ್ಗೆ ಚಿಂತನೆ ನಡೆಸಬಹುದಾಗಿದೆ.

ಎನ್‌ಎಂಪಿಟಿಗೆ ಡಿ. 11 ಹಾಗೂ ಡಿ. 12ರಂದು ಎರಡು ದಿನಗಳಲ್ಲೇ 3,566 ವಿದೇಶಿ ಪ್ರಯಾಣಿಕರು ಹಡಗುಗಳ ಮೂಲಕ ಆಗಮಿಸಿದ್ದಾರೆ. ಇಟೆಲಿಯ ಕೊಸ್ತಾ ನೋರಿವಿಯಾ ಮತ್ತು ಮರ್ಮ ಗೋವಾ ಬಂದರಿನಿಂದ ಮರೆಲ್ಲಾ ಡಿಸ್ಕವರಿ ಹಡಗುಗಳಲ್ಲಿ ಬಂದ ವಿದೇಶಿ ಪ್ರಯಾಣಿಕರು ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ತೆರಳಿದ್ದಾರೆ. ಕಳೆದ ವರ್ಷ 22 ಹಡಗುಗಳ ಮೂಲಕ 24,255 ಪ್ರವಾಸಿಗರು ಎನ್‌ಎಂಪಿಟಿ ಮೂಲಕ ಮಂಗಳೂರು ನಗರಕ್ಕೆ ಆಗಮಿಸಿದ್ದರು. ಈ ವರ್ಷದ ಮಳೆಗಾಲ ಋತು ಆರಂಭವಾಗುವ ಮೊದಲು ವರ್ಷದ ಪ್ರವಾಸಿ ಅವಧಿ ಕೊನೆಗೊಳ್ಳುವ ಮೇ 7ರೊಳಗೆ 32 ಹಡಗುಗಳು ಬರುವ ನಿರೀಕ್ಷೆ ಇದ್ದು, ಸುಮಾರು 40,000 ಪ್ರವಾಸಿಗರು ಎನ್‌ಪಿಂಟಿಗೆ ಆಗಮಿಸಬಹುದು ಎಂದು ಅಂದಾಜಿಸಲಾಗಿದೆ.

ಇಮಿಗ್ರೇಷನ್‌ ಸೆಂಟರ್‌ನ ಅನುಕೂಲತೆ
ನವಮಂಗಳೂರು ಬಂದರಿನಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಇಮಿಗ್ರೇಶನ್‌ ಸೆಂಟರ್‌ ಕಾರ್ಯಾಚರಿಸುತ್ತಿದೆ. ಮಂಗಳೂರಿನಿಂದ ಹಡಗು ಪ್ರಯಾಣ ಆರಂಭಿಸಲು ಇದು ಸಹಾಯಕವಾಗಿದೆ. ಹಡಗಿನಲ್ಲಿ ಬರುವ ಪ್ರವಾಸಿಗರು ಮಂಗಳೂರಿನಲ್ಲಿ ಇಳಿದು ಇಮಿಗ್ರೇಶನ್‌ ಪ್ರಕ್ರಿಯೆಗಳನ್ನು ನಡೆಸಿ ನಿಗದಿತ ದಿನಗಳವರೆಗೆ ನಗರದಲ್ಲಿ ಉಳಿದುಕೊಳ್ಳಬಹುದು. ನಗರದಲ್ಲಿ ಸುತ್ತಾಡಿ ಬಳಿಕ ಇಲ್ಲಿಂದ ಮುಂದಕ್ಕೆ ಪ್ರಯಾಣ ಮುಂದುವರಿಸಬಹುದು. ಮಂಗಳೂರಿನಿಂದ ಮುಂಬಯಿ ಅಥವಾ ಗೋವಾಕ್ಕೆ ಹಡಗು ಸಂಚಾರ ವ್ಯವಸ್ಥೆ ಇದ್ದರೆ ವಿದೇಶಿ ಪ್ರವಾಸಿಗರು ಮಂಗಳೂರು ಹಾಗೂ ಸುತ್ತಮುತ್ತಲ ಪ್ರವಾಸಿ ತಾಣಗಳಲ್ಲಿ ಕೆಲವು ದಿನ ಇದ್ದು ತೆರಳಲು ಅವಕಾಶವಾಗುತ್ತದೆ. ಇದು ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗುತ್ತದೆ.

ಲಘು ಹಡಗುಗಳ ಸಂಚಾರ
ಸಾಗರಯಾನ ಕರಾವಳಿ ಕರ್ನಾಟಕ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಜನರಿಗೆ ಸಾಗರ ಪಯಣದೊಂದಿಗೆ ಪ್ರಕೃತಿ ಸೊಬಗನ್ನು ಸವಿಯುವ ಅಪೂರ್ವ ಅವಕಾಶ. ಮಂಗಳೂರಿನಿಂದ ಮುಂಬಯಿ, ಗೋವಾ, ಕೊಚ್ಚಿ, ಸಿಂಗಾಪೂರ ಮುಂತಾದೆಡೆಗಳಿಗೆ ಆರಂಭಿಕವಾಗಿ ಸಾಗರಯಾನ ಸೌಲಭ್ಯವನ್ನು ಆರಂಭಿಸಬಹುದಾಗಿದೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುವವರೆಗೆ 200ರಿಂದ 300 ಪ್ರಯಾಣಿಕರ ಸಾಮರ್ಥ್ಯದ ಸಣ್ಣ ಹಡಗುಗಳ ಸಂಚಾರ ಆರಂಭಿಸಬಹುದು.ಮುಂಬಯಿ ಹಾಗೂ ಗೋವಾಕ್ಕೆ ಮೊದಲು ಹಡಗುಗಳ ಸಂಚಾರ ಆರಂಭಿಸಿ ಬಳಿಕ ಇತರ ದೇಶಗಳತ್ತ ಗಮನ ಹರಿಸಬಹುದಾಗಿದೆ.  

Advertisement

ಸಾಗರ ಯಾನದ ವಿಶೇಷತೆಯೆಂದರೆ ಪ್ರವಾಸದೊಂದಿಗೆ ರಜೆಯ ಸದುಪಯೋಗ. ಹಡಗು ಏರಿದ ಕೂಡಲೇ ಪ್ರವಾಸ ಆರಂಭಗೊಳ್ಳುತ್ತದೆ. ಹಡಗಿನೊಳಗೆ ಸಾಕಷ್ಟು ಮನೋರಂಜನೆಗಳಿಗೆ ಅವಕಾಶವಿರುತ್ತದೆ. ಜತೆಗೆ ಸಾಗರ ವೀಕ್ಷಣೆಯು ಸಾಧ್ಯವಾಗುತ್ತದೆ ಎಂದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಯತೀಶ್‌ ಬೈಕಂಪಾಡಿ ಅವರು ವಿವರಿಸುತ್ತಾರೆ. ರಾಜ್ಯದಲ್ಲಿ ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಕ್ಕೆ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ. ಇದರ ಜತೆಗೆ ಮಂಗಳೂರಿನಿಂದ ಸಾಗರಯಾನ ಸೌಲಭ್ಯವನ್ನು ಕೂಡ ಆರಂಭಿಸಲು ಪ್ರೋತ್ಸಾಹ ನೀಡುವ ಯೋಜನೆಗಳ ಬಗ್ಗೆಯೂ ಚಿಂತನೆ ನಡೆಸಬಹುದಾಗಿದೆ. ಸಾಗರದ ಮೂಲಕ ಪ್ರವಾಸ ಪ್ಯಾಕೇಜ್‌ ಗಳನ್ನು ಆರಂಭಿಸಲು ಆಸಕ್ತರನ್ನು ಆಕರ್ಷಿಸುವತ್ತಲೂ ಗಮನ ಹರಿಸಬಹುದು. ಒಂದೊಮ್ಮೆ ಸಾಗರ ಯಾನ ಸೌಲಭ್ಯ ಆರಂಭಗೊಂಡು ಆದು ಯಶಸ್ವಿಯಾದರೆ ಮುಂದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇದರತ್ತ ಆಕರ್ಷಿತರಾಗುವ ಸಾಧ್ಯತೆಗಳಿವೆ. 

ಮುಂಬಯಿ-ಗೋವಾ ಸಂಚಾರ ಮಂಗಳೂರಿಗೂ ವಿಸ್ತರಣೆಗೆ ಅವಕಾಶ
ದೇಶದ ಪ್ರಥಮ ಆಂತರಿಕ ಪ್ರಯಾಣಿಕ ಹಡಗು ಸಂಚಾರ ಮುಂಬಯಿ – ಗೋವಾ ನಡುವೆ ಆರಂಭಗೊಂಂಡಿದೆ. ಮುಂಬಯಿ ಪೋರ್ಟ್‌ ಟ್ರಸ್ಟ್‌ ಹಾಗೂ ಆ್ಯಂಗ್ರಿಯಾ ಸೀ ಈಗಲ್‌ ಪ್ರೈ.ಲಿ. ಸಂಸ್ಥೆಯ ಜಂಟಿ ಯೋಜನೆ ಇದಾಗಿದ್ದು, ಮುಂಬಯಿಯಿಂದ ಮರ್ಮಗೋವಾದ ತನಕ ಡಿಗಿ, ಹರಿಹರೇಶ್ವರ, ಜೈ ಘರ್‌, ರತ್ನಗಿರಿ, ದೇವಘರ್‌, ವೆಂಗುರ್ಲಾ, ತಿರಾಕೋಲ್‌, ಪಣಜಿಯಾಗಿ ಸಂಚರಿಸುತ್ತದೆ. ಇದನ್ನು ಮುಂದುವರಿಸಿ ಕಾರವಾರ ಮೂಲಕ ಮಂಗಳೂರಿಗೆ ವಿಸ್ತರಿಸಬಹುದಾಗಿದೆ. ಸುಮಾರು 400 ಪ್ರಯಾಣಿಕರಿಗೆ ಇದರಲ್ಲಿ ಅವಕಾಶವಿದ್ದು, 14 ತಾಸುಗಳಲ್ಲಿ ಮರ್ಮಗೋವಾಕ್ಕೆ ತಲುತ್ತದೆ. ಮಲ್ಟಿಕ್ಯೂಶನ್‌ ರೆಸ್ಟೋರೆಂಟ್‌, 24 ತಾಸುಗಳ ಕಾಫಿ  ರೆಸ್ಟೋರೆಂಟ್‌, ಬಾರ್‌, ಸ್ಪಾ , ಕಾನ್ಫರೆನ್ಸ್‌ ಹಾಲ್‌, ಕಾರ್ಪೊರೇಟ್‌ ಮೀಟಿಂಗ್‌ ಹಾಲ್‌, ಸಮುದ್ರ ವೀಕ್ಷಣೆಗೆ ಒಪನ್‌ ಡೆಕ್‌ ಮುಂತಾದ ಸೌಲಭ್ಯಗಳಿದ್ದು, ಪ್ರಯಾಣದ ಜತೆಗೆ ರಜೆಯ ಮಜಾ ಅನುಭವಿಸಲು ಪ್ರಶಸ್ತವಾಗಿದೆ.

ಜಲಯಾನಕ್ಕೆ ಶತಮಾನಗಳ ಇತಿಹಾಸ
ಮಂಗಳೂರು ಶತಮಾನಗಳ ಹಿಂದೆಯೇ ಜಲಯಾನ ತಾಣವಾಗಿ ಗುರುತಿಸಿಕೊಂಡಿತ್ತು. ಮಂಗಳೂರು ಹಳೆ ಬಂದರಿಗೆ ಕೊಲ್ಲಿ ರಾಷ್ಟ್ರಗಳು, ಪರ್ಷಿಯಾ ಮುಂತಾದ ರಾಷ್ಟ್ರಗಳಿಂದ ವ್ಯಾಪಾರಸ್ಥರು ಹಡಗುಗಳ ಮೂಲಕ ಬರುತ್ತಿದ್ದರು. ಮಂಗಳೂರು ಹಳೆ ಬಂದರು ಗೋವಾ, ಮುಂಬಯಿಗಳಿಗೆ ಪ್ರಮುಖ ಪ್ರಯಾಣ ಮಾರ್ಗವಾಗಿತ್ತು. 1965ರವರೆಗೂ ಇದು ಅವ್ಯಾಹತವಾಗಿ ಮುಂದುವರಿದಿತ್ತು. ಮುಂಬಯಿಯಿಂದ ಬಂದ ಹಡಗುಗಳು ಮಂಗಳೂರು ಹಳೆ ಬಂದರು ಬಳಿ ಸಮುದ್ರದಲ್ಲಿ ನಿಲ್ಲುತ್ತಿದ್ದವು. ಹಳೆ ಬಂದರಿನಿಂದ ಪ್ರಯಾಣಿಕರನ್ನು ದೋಣಿಗಳ ಮೂಲಕ ಸಮುದ್ರಕ್ಕೆ ಕರದೊಯ್ದು ಅಲ್ಲಿ ಹಡಗಿಗೆ ಹತ್ತಿಸಲಾಗುತ್ತಿತ್ತು. ಮುಂಬಯಿಗೆ ರಸ್ತೆ ಮಾರ್ಗ ಮತ್ತು ರೈಲು ಸಂಚಾರ ಅಭಿವೃದ್ಧಿಯಾದ ಬಳಿಕ ಹಡಗುಗಳ ಸಂಚಾರ ಸ್ಥಗಿತವಾಯಿತು.

 ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next