Advertisement

ಭಾರತ ಜೋಡೋ ಯಶಸ್ವಿಗೊಳಿಸೋಣ

02:43 PM Sep 19, 2022 | Team Udayavani |

ಬೆಳಗಾವಿ: ಭಾರತದ ಸಮಗ್ರತೆ ಮತ್ತು ಐಕ್ಯತೆ ಹಾಗೂ ನಮ್ಮ ಮುಂದಿನ ಪೀಳಿಗೆಗಳ ಉತ್ತಮ ಭವಿಷ್ಯಕ್ಕಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಪಾದಯಾತ್ರೆ (ಭಾರತ ಜೋಡೋ) ಯಲ್ಲಿ ನಾವೆಲ್ಲ ಹೆಜ್ಜೆ ಹಾಕಿ ಪಾದಯಾತ್ರೆ ಯಶಸ್ವಿಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್‌ ಜಾರಕಿಹೊಳಿ ಕರೆ ನೀಡಿದರು.

Advertisement

ನಗರದ ಕಾಂಗ್ರೆಸ್‌ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಘಟಕಗಳ ಭಾರತ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಜೋಡೋ ಪಾದಯಾತ್ರೆ ಈಗಾಗಲೇ ತಮಿಳುನಾಡು ಮತ್ತು ಕೇರಳದಲ್ಲಿ ಯಶಸ್ಸು ಕಂಡಿದೆ. ಅದೇ ಯಶಸ್ಸು ಕರ್ನಾಟಕದಲ್ಲಿ ಸಹ ಮುಂದುವರಿಯಬೇಕು ಎಂದರು.

ರಾಜ್ಯದಲ್ಲಿ ಸೆ. 30ರಿಂದ ಅ. 27ರ ವರೆಗೆ ಭಾರತ ಜೋಡೋ ಪಾದಯಾತ್ರೆ ನಡೆಯಲಿದ್ದು, ಬೆಳಗಾವಿ ಜಿಲ್ಲೆಯ 18 ಮತಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಮೂರು ವಿಭಾಗವಾಗಿ ಪಾದಯಾತ್ರೆಯಲ್ಲಿ ಭಾಗವಹಿಸಬೇಕು. ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಮೊಳಕಾಲ್ಮೂರು ಮತಕ್ಷೇತ್ರದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಬೇಕು ಎಂದು ಅವರು ಹೇಳಿದರು.

2023ರಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಈಗಾಗಲೇ ತಯಾರಿ ನಡೆದಿದೆ. ಕಾರಣ ಎಲ್ಲಾ ಮುಂಚೂಣಿ ಘಟಕದ ಪದಾಧಿಕಾರಿಗಳು ಪಕ್ಷ ಸಂಘಟನೆಗೆ ಸಮಯ ಮೀಸಲಿಡಬೇಕು. ಜಿಲ್ಲೆಯಲ್ಲಿ ಯಾರಾದರೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದರೆ ಅಂತಹವರನ್ನು ಒಂದೇ ಗಂಟೆಯಲ್ಲಿ ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಕಲ್ಪನಾ ಜೋಶಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ ಅವರು, ಕಲ್ಪನಾ ಜೋಶಿ ಅವರ ಪಕ್ಷ ನಿಷ್ಠೆಯಿಂದ ಅವರನ್ನು ಬೆಳಗಾವಿ ಕಾಂಗ್ರೆಸ್‌ ಗ್ರಾಮೀಣ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ನಿಮ್ಮ ತ್ಯಾಗದ ಅವಶ್ಯಕತೆ ಇದೆ. ಇದಕ್ಕಾಗಿ ನಿಮ್ಮ ಹೆಚ್ಚಿನ ಸಮಯವನ್ನು ಪಕ್ಷಕ್ಕೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.

Advertisement

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ ಮಾತನಾಡಿ, ಭಾರತ ಜೋಡೋ ಪಾದಯಾತ್ರೆಯಲ್ಲಿ ಭಾಗವಹಿಸುವ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಆಗಿರಬೇಕು ಎಂದು ಹೇಳಿದರು.

ಕಲ್ಪನಾ ಜೋಶಿ ಅವರು ಪಕ್ಷಕ್ಕಾಗಿ 22 ವರ್ಷ ಕೆಲಸ ಮಾಡಿದ್ದರಿಂದ ಇಂದು ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.

ಕಲ್ಪನಾ ಜೋಶಿ ಮಾತನಾಡಿ 22 ವರ್ಷಗಳ ನನ್ನ ರಾಜಕೀಯ ಜೀವನವನ್ನು ಗುರುತಿಸಿ ಪಕ್ಷ ಇಂದು ನನಗೆ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿದೆ. ಇದರಿಂದ ಪಕ್ಷದಲ್ಲಿ ನಿಷ್ಠೆಯಿಂದ ಇನ್ನಷ್ಟು ಕೆಲಸ ಮಾಡಲು ಹುಮ್ಮಸ್ಸು ಬಂದಿದೆ ಎಂದರು.

ಇದೇ ವೇಳೆ ಕೆಪಿಸಿಸಿಯ ನೂತನ ಸದಸ್ಯರನ್ನು ಸನ್ಮಾನಿಸಿ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್‌ ಹಣಮನ್ನವರ, ಮಹಾವೀರ ಮೋಹಿತೆ, ಕೆಪಿಸಿಸಿ ಎಸ್ಸಿ ಘಟಕದ ಅಧ್ಯಕ್ಷ ಎಸ್‌ .ಎಫ್‌. ಜಕ್ಕಪ್ಪನವರ್‌, ಗಜಾನನ ಮಂಗಸೂಳಿ, ಸದಾಶಿವ ಬೂಟಾಳಿ, ಸುನೀಲ್‌ ಸಂಕ್‌, ಶ್ಯಾಮ್‌ ಪೂಜಾರಿ, ಮಾಜಿ ಶಾಸಕರಾದ ರಮೇಶ ಕುಡಚಿ, ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಎಂ.ಜೆ, ಕಿರಣ ಸಾಧುನವರ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಪಾಟೀಲ್‌ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next