Advertisement

ಸಿನಿಮಾ ನೋಡೋಣ ಬನ್ನಿ!

06:49 AM Feb 23, 2019 | |

ಸಿನಿಮಾ ಮೈ ಡಾರ್ಲಿಂಗ್‌ ಎನ್ನುವವರು ಮತ್ತು ಮನಸೋ ಇಚ್ಛೆ ದೇಶ ವಿದೇಶದ ಸಿನಿಮಾ ನೋಡುವವರ ಮನ ತಣಿಸಲು 11ನೇ ಬೆಂಗಳೂರು ಚಿತ್ರೋತ್ಸವ ಬಂದಿದೆ. ಒಟ್ಟು 11 ಸ್ಕ್ರೀನ್‌ಗಳಲ್ಲಿ ಸಿನಿಮಾಗಳು ತೆರೆಕಾಣುತ್ತಿವೆ. ಈಗಾಗಲೇ ಶುರುವಾಗಿರುವ ಚಿತ್ರೋತ್ಸವ ಫೆಬ್ರವರಿ 28ರ ತನಕವೂ ನಡೆಯಲಿದೆ. ಚಿತ್ರೋತ್ಸವ ದಲ್ಲಿರುವ ಸಿನಿಮಾಗಳಲ್ಲಿ ನೋಡಬೇಕಾದ 7 ಸಿನಿಮಾಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಉಳಿದಿರುವ ಎಲ್ಲವೂ ಚೆನ್ನಾಗಿವೆ, ಆದರೆ ನೋಡಲು ಸಮಯ ಬೇಕಷ್ಟೆ. ಎಲ್ಲಿ?: ಒರಾಯನ್‌ ಮಾಲ್‌, ರಾಜಾಜಿನಗರ ಯಾವಾಗ?: ಫೆಬ್ರವರಿ 23- 28
ಹೆಚ್ಚಿನ ಮಾಹಿತಿಗೆ:  +91 7090999550 ವೇಳಾಪಟ್ಟಿ: bit.ly/2sRpS5i

Advertisement

ಅಂತ
ವಾರಪತ್ರಿಕೆಯ ಧಾರಾವಾಹಿ ರೂಪದಲ್ಲಿ ಓದುಗ ವರ್ಗವನ್ನು ರೋಮಾಂಚನದಂಚಿಗೆ ತಳ್ಳಿದ್ದು ಎಚ್‌. ಕೆ. ಅನಂತರಾವ್‌ ರಚಿತ “ಅಂತ’. ಮುಂದೆ ಸಿನಿಮಾ ಆದಾಗಲಂತೂ ಅಪಾರ ಜನಪ್ರಿಯತೆ ಗಳಿಸಿಕೊಂಡುಬಿಟ್ಟಿತು. ಕಿರುತೆರೆಯಲ್ಲಿ ಆಗಾಗ್ಗೆ ಪ್ರಸಾರವಾಗುವ ಈ ಸಿನಿಮಾವನ್ನು ಹಿರಿತೆರೆಯಲ್ಲಿ ನೋಡುವ ಸೊಗಸೇ ಬೇರೆ. 
ನಿರ್ದೇಶಕ: ರಾಜೇಂದ್ರ ಸಿಂಗ್‌  ಬಾಬು ಸಮಯ: 143 ನಿಮಿಷ ಯಾವಾಗ?: ಫೆ. 23, ಬೆಳಗ್ಗೆ 11.30

ಅಮ್ಮಚ್ಚಿ ಎಂಬ ನೆನಪು
ಕರಾವಳಿ ಪ್ರಾಂತ್ಯದ ಸೊಗಡನ್ನು ಹೊಂದಿರುವ ಸಿನಿಮಾ ‘ಅಮ್ಮಚ್ಚಿ ಎಂಬ ನೆನಪು’. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಹೆಸರಾಂತ ಲೇಖಕಿ ಡಾ.ವೈದೇಹಿಯವರ ಮೂರು ಕಥೆಗಳನ್ನು ಆಧರಿಸಿದೆ ಈ ಚಿತ್ರ. ಗಟ್ಟಿಯಾದ ಕಥೆ, ಸೂಕ್ಷ್ಮ ಗ್ರಹಿಕೆ,ತೀವ್ರ ಸಂವೇದನೆ ಮತ್ತು ಕರ್ನಾಟಕದ ಕರಾವಳಿಯ ವಿಶಿಷ್ಟ ಪ್ರಾದೇಶಿಕ ಉಪಭಾಷೆಯ ಸಂಭಾಷಣೆ ಇಲ್ಲಿನ ವಿಶೇಷ.
ನಿರ್ದೇಶಕಿ : ಚಂಪಾ ಬಿ.ಶೆಟ್ಟಿ ದೇಶ: ಭಾರತ | ಸಮಯ : 132 ನಿಮಿಷ  ಯಾವಾಗ?: ಫೆ.23, ಮಧ್ಯಾಹ್ನ 3.15

Advertisement

ಸಿಬೆಲ್‌
ಹಳ್ಳಿಯೊಂದರಲ್ಲಿ ತಂದೆ ಹಾಗೂ ಸಹೋದರಿ ಇರುತ್ತಾರೆ. ಸಿಬೆಲ್‌ ಮೂಗಿ. ಶಿಳ್ಳೆಯ ಮೂಲಕ ಆಕೆ ಸಂವಹಿಸುತ್ತಿರುತ್ತಾಳೆ. ಹಳ್ಳಿಯಲ್ಲಿರುವ ಮಹಿಳೆಯರ ಆತಂಕಕ್ಕೆ ಕಾರಣವಾಗಿದ್ದ ತೋಳವೊಂದು ಪಕ್ಕದ ಕಾಡಿನಲ್ಲಿದ್ದುಕೊಂಡು ಜನರಿಗೆ ಕಾಟ ಕೊಡುತ್ತಿರುತ್ತದೆ. ಹಳ್ಳಿಯ ಜನರ ವಿರೋಧದ ನಡುವೆಯೂ ಸಿಬೆಲ್‌ ಏಕಾಂಗಿಯಾಗಿ ತೋಳದ ಬೇಟೆಯಲ್ಲಿದ್ದಾಳೆ. 
ನಿರ್ದೇಶಕ: ಕಾಗ್ಲಾ ದೇಶ: ಟರ್ಕಿ | ಸಮಯ: 95 ನಿಮಿಷ ಯಾವಾಗ?: ಫೆ. 23, ಮಧ್ಯಾಹ್ನ 1.20

ಶಾಪ್‌ಲಿಫ್ಟರ್
ಟೋಕಿಯೋದ ಗಡಿಯೊಂದರ ಸಣ್ಣ ಊರಿನಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುವುದನ್ನೇ ಪ್ರವೃತ್ತಿಯನ್ನಾಗಿಸಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬವೊಂದಿರುತ್ತದೆ. ಈ ಕುಟುಂಬದ ಮನಕಲಕುವ ಕಥೆಯೇ ಈ ಚಿತ್ರದ ಹೂರಣ. ಕಳ್ಳರ ಕುಟುಂಬದ ಪುಟ್ಟ ಬಾಲಕನೊಬ್ಬನ ಬಂಧನದೊಂದಿಗೆ ರಹಸ್ಯವೊಂದು ಹೊರಬೀಳುತ್ತದೆ. ಸಂಬಂಧ ಎನ್ನುವುದು ಎಲ್ಲವನ್ನೂ ಮೀರಿದ್ದು ಎನ್ನುವುದು ಚಿತ್ರದ ಕಥಾವಸ್ತು.  
ನಿರ್ದೇಶಕ: ಹಿರೋಕಝು ಕೋರೆ ದೇಶ: ಜಪಾನ್‌ | ಸಮಯ: 121 ನಿಮಿಷ ಯಾವಾಗ?: ಫೆ. 23, ಸಂಜೆ 5.45

ಅಸಂಧಿಮಿತ್ತ
ಪ್ರಖ್ಯಾತ ಚಲನಚಿತ್ರ ನಿರ್ದೇಶಕನಿಗೆ ಮಧ್ಯರಾತ್ರಿಯಲ್ಲಿ ತನ್ನ ಕಾಲೇಜಿನ ಹಳೆಯ ಗೆಳತಿ ಅಸಂಧಿಮಿತ್ತ‌ಳ ದೂರವಾಣಿ ಕರೆ ಬರುತ್ತದೆ. ಅವಳು ತನ್ನ ಜೀವನಕತೆ ಆಧರಿಸಿ ಚಲನಚಿತ್ರ ನಿರ್ಮಿಸಬೇಕೆಂದು ಬೇಡಿಕೆ ಇಡುತ್ತಾಳೆ. ಅಲ್ಲದೆ, ತಾನು ಈಗಾಗಲೇ ಮೂರು ಮಹಿಳೆಯರನ್ನು ಕೊಂದಿದ್ದು, ಸದ್ಯದಲ್ಲೇ ಬಂಧನವಾಗುವ ಸಾಧ್ಯತೆ ಇದೆ ಎಂದು ಹೇಳುತ್ತಾಳೆ. ಆಮೇಲೆ?
ನಿರ್ದೇಶಕ: ಅಸೋಕಾ ಹಂದಗಾಮಾ ದೇಶ: ಶ್ರೀಲಂಕಾ ಸಮಯ: 98 ನಿಮಿಷ ಯಾವಾಗ?: ಫೆ. 24, ಸಂಜೆ 5′

ಹೋಟೆಲ್‌ ಬೈ ದ ರಿವರ್‌
ಒಂದು ನದಿ. ಅದರ ತಟದಲ್ಲಿ ಒಂದು ಹೋಟೆಲ್‌. ಅಲ್ಲಿ ಒಂದು ರೂಮು ಪಡೆದು ವಾಸ್ತವ್ಯ ಹೂಡುವ ತೊಂಬತ್ತು ವರ್ಷ ವಯಸ್ಸಿನ ಕವಿ, ತನ್ನ ಇಬ್ಬರು ಪುತ್ರರನ್ನು ಬರಹೇಳುತ್ತಾನೆ. ಅವರಿಬ್ಬರಿಗೂ ವಿದಾಯ ಹೇಳುವುದು ಅವನ ಉದ್ದೇಶ. ಅದೇ ಸಮಯದಲ್ಲಿ ಹೋಟೆಲಿಗೆ ಬರುವ ಮಹಿಳೆ ರೂಮು ಪಡೆದು ಸ್ನೇಹಿತೆಯನ್ನು ಕರೆಯುತ್ತಾಳೆ. ಅವರು ಮನಸಾರೆ ಹರಟುತ್ತಾ, ಲವಲವಿಕೆಯಿಂದ ಓಡಾಡುತ್ತಾರೆ. ಈ ದೃಶ್ಯ ಕವಿಯ ಕಣ್ಣಿಗೂ ಬೀಳುತ್ತದೆ. ಆದರಲ್ಲಿ ಆತ ಜೀವನದ ಸಾರ ಕಾಣುತ್ತಾನೆ.
ನಿರ್ದೇಶಕ: ಸಾಂಗ್‌ ಸೂ ಹಾಂಗ್‌ ದೇಶ : ದಕ್ಷಿಣ ಕೊರಿಯ | ಸಮಯ: 96 ನಿಮಿಷ ಯಾವಾಗ?: ಫೆ. 23, ಮಧ್ಯಾಹ್ನ 12

ರೋಮಾ
ರೋಮಾ ಎಂಬುದು ಮೆಕ್ಸಿಕೋದ ಪ್ರದೇಶ. ಅಲ್ಲಿ ಮಧ್ಯಮವರ್ಗದ ಕುಟುಂಬದ ಒಡತಿಗೆ, ಸಹಾಯಕಿಯಾಗಿ ಮನೆಗೆಲಸ ಮಾಡಿಕೊಂಡಿರುವ ತರುಣಿ ಕ್ಲಿಯೊಳ ಕತೆಯೇ ಈ ಸಿನಿಮಾ. 1970ರಲ್ಲಿ ನಡೆದ ರಾಜಕೀಯ ಅರಾಜಕತೆ ಜನರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಮಾಡಿತು. ಅಂತಹ ಸಮಯದಲ್ಲಿ ಭಾವನಾತ್ಮಕ ನೆನಪುಗಳ ಜೊತೆ ಸಂಬಂಧ ಬೆಸೆಯುತ್ತದೆ ಈ ಸಿನಿಮಾ, 
ನಿರ್ದೇಶಕ: ಅಲ್ಫೋನ್ಸೋ ಕುರಾನ ದೇಶ: ಮೆಕ್ಸಿಕೊ | ಸಮಯ: 135 ನಿಮಿಷ ಯಾವಾಗ?: ಫೆ. 24, ಮಧ್ಯಾಹ್ನ 5.30

ಬರ್ನಿಂಗ್‌
ಈ ಸಿನಿಮಾ ಮೂರು ಯುವ ಮನಸ್ಸುಗಳ ಸಂಕೀರ್ಣ ಸಂಬಂಧಗಳನ್ನು ದುರಂತದ ಛಾಯೆಯಲ್ಲಿ ಪ್ರತಿಬಿಂಬಿಸುತ್ತದೆ. ಮಳಿಗೆಯೊಂದರಲ್ಲಿ ಕೆಲಸ ಮಾಡುವ ಹಯೋಮಿ ಡೆಲಿವರಿಬಾಯ್‌ ಜೋಂಗುವನ್ನು ಭೇಟಿಯಾಗುತ್ತಾಳೆ. ಒಮ್ಮೆ ಆಫ್ರಿಕಾಗೆ ತೆರಳಿದ ಹಯೋಮಿ ಜೊಂಗುÕಗೆ ತನ್ನ ಬೆಕ್ಕನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿ ತೆರಳಿರುತ್ತಾಳೆ. ರಹಸ್ಯ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. 
ನಿರ್ದೇಶಕ: ಲೀ ಚಾಂಗ್‌ ಡಾಂಗ್‌ ದೇಶ: ದಕ್ಷಿಣ ಕೊರಿಯ | ಸಮಯ: 148 ನಿಮಿಷ ಯಾವಾಗ?: ಫೆ. 23, ಮಧ್ಯಾಹ್ನ 2.30

Advertisement

Udayavani is now on Telegram. Click here to join our channel and stay updated with the latest news.

Next