ಆನಂದಪುರ: ಒಡೆದು ಬಾಳಿದರೆ ಸಮಾಜವಾಗುವುದಿಲ್ಲ. ಪರೋಪಕಾರಕ್ಕಾಗಿ ಬದುಕಬೇಕು. ಎಲ್ಲಾ ಜಾತಿಯ ಮನುಷ್ಯರಲ್ಲಿ ಹರಿಯುವುದು ಒಂದೇ ರಕ್ತ. ಕಷ್ಟದಲ್ಲಿ ನೆನಪಾಗದ ಜಾತಿ ಸುಖದಲ್ಲಿ ನೆನಪಾಗುವುದು ಏಕೆ ಎಂದು ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆಯ ಚನ್ನಬಸವ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಬಸವನ ಬೀದಿಯ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕಾಗಿದೆ. ಇಲ್ಲವಾದರೆ ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುವ ಸಂಸ್ಕೃತಿ ಬೆಳೆಯುತ್ತದೆ. ನಮ್ಮನ್ನು ಹೆತ್ತು ಹೊತ್ತು ಪ್ರೀತಿಯಿಂದ ಸಾಕಿದ ತಂದೆತಾಯಿಗಳನ್ನು ಅವರ ಕೊನೆಯ ಕ್ಷಣದವರಗೆ ನೋಡಿಕೊಳ್ಳುವಂತಾಗಬೇಕು ಎಂದರು.
ಆರ್ಯ ಈಡಿಗ ಸಂಸ್ಥಾನ ಮಠದ ಶ್ರೀ ರೇಣುಕಾನಂದ ಮಹಾಸ್ವಾಮಿಗಳು ಮಾತನಾಡಿ, ಅಂತರಂಗದ ಆತ್ಮ ಶುದ್ಧಿ ಮಾಡಿಕೊಳ್ಳಲು ದೇವಸ್ಥಾನ ಹಾಗೂ ಗುರುಗಳ ಸಾನ್ನಿಧ್ಯ ಬೇಕಾಗುತ್ತದೆ. ದೇಹ ನಶ್ವರ. ಆದರೆ ಮಾಡಿದ ಸೇವೆ ಅಮರ. ಪುಣ್ಯದ ಕೆಲಸಕ್ಕೆ ಮನಃಪೂರ್ವಕವಾಗಿ ನಿಮ್ಮನ್ನು ನೀವು ಅರ್ಪಿಸಿಕೊಳ್ಳಿ ಎಂದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗ್ರಾಮದಲ್ಲಿ ವಿಶೇಷ ಸಾಧನೆ ಮಾಡಿದ ಮಧುಸೂಧನ್, ನರ್ಮದಾ ಅವರನ್ನು ಸನ್ಮಾನಿಸಲಾಯಿತು. ವೀರಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷ ಹಾಲಪ್ಪ, ಕಾರ್ಯದರ್ಶಿ ಜಗನ್ನಾಥ್, ಹೊಸಗುಂದ ಶ್ರೀ ಉಮಾಮಹೇಶ್ವರ ದೇವಾಲಯದ ಅಧ್ಯಕ್ಷ ಸಿ.ಎಂ.ಎನ್. ನಾರಾಯಣ ಶಾಸ್ತ್ರಿ, ಬೆಂಗಳೂರಿನ ಚಂದ್ರಶೇಖರ್, ರಾಜಶೇಖರ್, ಕೃಷಿಕರಾದ ಪ್ರಕಾಶ್ ನಾಯಕ್, ಮಾರಿಕಾಂಬ ದೇವಾಲಯದ ಕಾರ್ಯದರ್ಶಿ ಉಮೇಶ್, ಗೌತಮಪುರ ಗ್ರಾಪಂ ಸದಸ್ಯ ಮಂಜುನಾಥ ದಾಸನ್, ಸಾಗರ ಬಿಎಸ್‌ಎನ್‌ಎಲ್,ಇಲಾಖೆಯ ಗಣೇಶ್ ಮೂರ್ತಿ ರಾವ್, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಜಿಪಂ ಸದಸ್ಯೆ ಅನಿತಾಕುಮಾರಿ, ತಾಪಂ ಸದಸ್ಯೆ ಆನಂದಿ ಲಿಂಗರಾಜ್ ಮತ್ತಿತರರು ಇದ್ದರು. ಸಭೆಯ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.