Advertisement

ಸಾಹಿತಿಗಳು ಹಂಗು ತೊರೆದು ಸಾಹಿತ್ಯ ರಚಿಸಲಿ

07:52 AM Mar 11, 2019 | Team Udayavani |

ರಾಯಚೂರು: ಸಾಹಿತಿಗಳು ನಿರ್ದಿಷ್ಟ ವಿಚಾರ ಬರೆಯಬೇಕು ಎಂಬ ನಿಯಮ ರೂಪಿಸುವ ವರ್ಗವೊಂದು ಸದಾ ಸಕ್ರಿಯವಾಗಿರುತ್ತದೆ. ಆದರೆ, ಬರಹಗಾರ ಯಾರ ಹಂಗಿಗೂ ಸಿಲುಕದೆ ಮುಕ್ತವಾಗಿ ತಮ್ಮ ವಿಚಾರ ಪ್ರಸ್ತುತಪಡಿಸಬೇಕು ಎಂದು ಹಿರಿಯ ಸಾಹಿತಿ ಡಾ| ಎಚ್‌. ನಾಗವೇಣಿ ತಿಳಿಸಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ರವಿವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿ| ರಾಜಲಕ್ಷ್ಮೀ ಬರಗೂರು ರಾಮಚಂದ್ರಪ್ಪ ದತ್ತಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಬುದ್ಧಿವಂತರ ನಾಡು ಎನಿಸಿಕೊಳ್ಳುವ ದಕ್ಷಿಣ ಕರ್ನಾಟಕ ಭಾಗದಲ್ಲೇ ಈಗ ಜಾತಿ ಧರ್ಮಗಳ ಸಂಘರ್ಷ ಹೆಚ್ಚಿದೆ. ಸತ್ಯವನ್ನು ಸ್ವೀಕರಿಸುವ ಮನೋಭಾವ ಆ ಭಾಗದಲ್ಲಿಲ್ಲ. ಆದರೆ, ಎಲ್ಲಿ ವಿರೋಧವಿರುವುದೋ ಪ್ರತಿರೋಧ ಶಕ್ತಿಯೂ ಇರುತ್ತದೆ. ಅದರ ಆಧಾರದ ಮೇಲೆಯೇ ಹೆಚ್ಚು ಸಾಹಿತ್ಯ ರಚನೆಯಾಗುತ್ತದೆ ಎಂದು ವಿವರಿಸಿದರು.

ಸಾಹಿತಿ ಅಮರೇಶ ನುಗಡೋಣಿ ಅಭಿನಂದನಾ ನುಡಿಯಲ್ಲಿ, ತಾವು ಜನಿಸಿದ ಸ್ತರದ ಕೆಳಲೋಕವನ್ನು ಸಾಹಿತ್ಯಕ್ಕೆ ಆಯ್ದುಕೊಂಡ ಲೇಖಕರಲ್ಲಿ ಎಚ್‌.ನಾಗವೇಣಿ ಅವರು ಕೂಡ ಇದ್ದಾರೆ. ದೊಡ್ಡದು ಸಣ್ಣದು ಎನ್ನದೇ ಎಲ್ಲ ಸಮುದಾಯಗಳ ಜಾತಿವಾದ ವಿರೋಧಿ ಸಿದ ಅವರು, ತಮ್ಮ ಬರಹಗಳಲ್ಲಿ ಅದನ್ನು ಉಲ್ಲೇಖೀಸುತ್ತಲೇ ಸಾಗುತ್ತಾರೆ. ಸ್ತ್ರೀವಾದಿ ಮನೋಧರ್ಮವುಳ್ಳ ಲೇಖಕಿ ಅವರು ಎಂದು ಬಣ್ಣಿಸಿದರು.

ಮೊದಲ ದತ್ತಿ ಪ್ರಶಸ್ತಿಯನ್ನು ದಕ್ಷಿಣ ಭಾಗದ ಸಾಹಿತಿಗಳಿಗೆ ನೀಡುವ ಮೂಲಕ ಉತ್ತರ ಭಾಗದ ಸಾಹಿತ್ಯಪ್ರಿಯರು ಉದಾರತೆ ಮರೆದಿದ್ದಾರೆ. ಬಹುಶಃ ಅವರ ಆಯ್ಕೆ ಸಮರ್ಥವಾಗಿದೆ. ಕನ್ನಡ ವಿವಿಗೆ ತೆರಳಿ ಅಲ್ಲಿನ ಗ್ರಂಥಾಲಯ ನೋಡಿದರೆ ನಾಗವೇಣಿ ಅವರ ಪುಸ್ತಕ ಪ್ರೀತಿ ಎಂಥದ್ದು ಎಂದು ಅರಿವಾಗುತ್ತದೆ. ಕರಾವಳಿಯ ಬದುಕು ಕಂಡ ಅವರು, ಕಾರಂತರನ್ನು ಬಿಟ್ಟು ಕುವೆಂಪು ಅವರನ್ನು ಅನುಸರಿಸಿದ್ದು ಬರಹಗಳಲ್ಲಿ ಕಂಡು ಬರುತ್ತದೆ. ಮಹಾನ್‌ ಸಾಹಿತಿಗಳು ಬರೆದು ಬಿಟ್ಟ ಕ್ಷೇತ್ರಗಳಲ್ಲೇ ಅಪರೂಪ ಎನಿಸುವ ಕೃತಿಗಳನ್ನು
ಅವರು ರಚಿಸಿರುವುದು ಅವರ ಬರಹ ಶಕ್ತಿಗೆ ಸಾಕ್ಷಿ ಎಂದರು.

ಶಿಕ್ಷಣಾಧಿಕಾರಿ ಆರ್‌.ಇಂದಿರಾ, ಕಸಾಪ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ ಬೆಟ್ಟದೂರು ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಜೆ.ಎಲ್‌.ಈರಣ್ಣ ಪ್ರಾಸ್ತಾವಿಕ ಮಾತನಾಡಿದರು. ಭೀಮನಗೌಡ ಇಟಗಿ, ಜಿಲ್ಲಾ ಪರಿಷತ್‌ ಖಜಾಂಚಿ ಮಹಾದೇವಪ್ಪ, ಸಾಹಿತಿ ಜಯಲಕ್ಷ್ಮೀ ಮಂಗಳಮೂರ್ತಿ, ಮುಖಂಡರಾದ ದರೂರು ಬಸವರಾಜ, ಡಾ| ಅನಂತರೆಡ್ಡಿ ಇತರರಿದ್ದರು. ಕಸಾಪ ತಾಲೂಕು ಅಧ್ಯಕ್ಷೆ ಗಿರಿಜಾ ಸ್ವಾಗತಿಸಿದರು.

Advertisement

ವಸ್ತುನಿಷ್ಠ ಬರವಣಿಗೆ ಹೆಚ್ಚು ಮೌಲ್ಯ ಪಡೆಯುತ್ತದೆ. ಆದರೆ, ಅದನ್ನು ಬರೆಯಲು ಕೆಲ ಶಕ್ತಿಗಳು ವಿರೋಧಿಸುತ್ತವೆ. ಆದರೆ, ಬರಹಗಾರರು ಅಂಥ ಯಾವ ಶಕ್ತಿಗಳಿಗೂ ಸೊಪ್ಪು ಹಾಕದೆ ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲಬೇಕು. ಅಂದಾಗಲೇ ಸಾಹಿತ್ಯದ ಮೌಲ್ಯ ಹೆಚ್ಚಲಿದೆ.
  ಡಾ| ಎಚ್‌. ನಾಗವೇಣಿ ಹಿರಿಯ ಸಾಹಿತಿ 

Advertisement

Udayavani is now on Telegram. Click here to join our channel and stay updated with the latest news.

Next