ಮೈಸೂರು: ಮುಖ್ಯಮಂತ್ರಿ ಯಡಿಯೂರಪ್ಪ ಮಾತಿನ ಮೇಲೆ ನಿಂತ ನಾಯಕರಾಗಿದ್ದು, ಅವರು ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕಾರಣದಲ್ಲಿ ಕೊಟ್ಟ ಮಾತು ಉಳಿಸಿ ಕೊಂಡ ನಾಯಕ ಇದ್ದರೆ ಅದು ಬಿಎಸ್ ವೈ ಮಾತ್ರ. ಈ ಮಾತಿಗೆ ನೀವು ಅಪವಾದ ಆಗಬೇಡಿ. ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಹೇಳುತ್ತಿಲ್ಲ. ಅದು ನಿಮಗೆ ಬಿಟ್ಟ ವಿಚಾರ. ಆದರೆ ನನ್ನ ಅನುಭವ ಬಳಸಿಕೊಳ್ಳಿ ಎಂದು ಕೇಳುತ್ತಿದ್ದೇನೆ ಎಂದು ತಿಳಿಸಿದರು.
ಮಾತು ತಪ್ಪಬೇಡಿ: ದೇಶದ ರಾಜಕಾರಣ ನಡೆಯುತ್ತಿರುವುದು ಭಾವನೆ ಮತ್ತು ನಂಬಿಕೆ ಮೇಲೆ. ಆ ಎರಡೂ ಮುಗಿದು ಹೋದರೆ ರಾಜಕಾರಣ ಇರೋದೇ ಇಲ್ಲ. ಜನನಾಯಕರು ಈ ಭಾವನೆ ಮತ್ತು ನಂಬಿಕೆ ಉಳಿಸಿಕೊಳ್ಳಬೇಕಿದೆ. ಯಡಿಯೂರಪ್ಪನವರೇ ತಾವು ಮಾತು ತಪ್ಪದ ಮಗನಾಗಿ. ಮಾತು ತಪ್ಪಿದ ಮಗನಾಗಬಾರದು ಎಂಬುದು ಜನರ ಅಭಿಪ್ರಾಯ ಎಂದು ಹೇಳಿದರು.
ನನ್ನ ಆಶಯ: ನನಗೆ ಈಗಾಗಲೇ ಸಾಕಷ್ಟು ಅನುಭವ ಆಗಿದೆ. ಜನರು ನೆನಪಿಟ್ಟುಕೊಳ್ಳುವಂತಹ ಕೆಲಸಗಳನ್ನು ಮಾಡಿದ್ದೇನೆ. ಅಷ್ಟು ಸಾಕು. ನನಗೆ ಎಂಎಲ್ಸಿ ಸ್ಥಾನ ಸಿಕ್ಕಾಕ್ಷಣ ನನ್ನ ಕೀರ್ತಿ ಯೇನು ಅಟ್ಟಕ್ಕೇರುವುದಿಲ್ಲ. ಸ್ಥಾನ ಸಿಗದಾಕ್ಷಣ ನನಗೇನೂ ಬೇಸರವಾಗುವುದಿಲ್ಲ. ಆದರೆ ಅವರು ಕೊಟ್ಟ ಮಾತನ್ನು ಉಳಿಸಿ ಕೊಳ್ಳಲಿ, ಮಾತು ತಪ್ಪದ ಮಗನಾಗದಿರಲಿ ಎಂಬುದು ನನ್ನ ಆಶಯ ಎಂದು ಹೇಳಿದರು.
7 ಪುಸ್ತಕ ಬರೆದಿದ್ದೇನೆ: ನಾನು ಸಾಹಿತಿಯೂ ಹೌದು, ರಾಜಕಾರಣಿಯೂ ಹೌದು. 7 ಪುಸ್ತಕಗಳನ್ನು ಬರೆದಿದ್ದೇನೆ. ಚುನಾವಣೆ ವಿಡಂಬನೆ, ತುರ್ತು ಪರಿಸ್ಥಿತಿ ಬಗ್ಗೆಯೂ ಬರೆದಿದ್ದೇನೆ. ಚಾಣಕ್ಯನ ಕಾಲದಲ್ಲಿ ಹೇಗೆಲ್ಲ ಚುನಾವಣೆ ನಡೆ ಯುತ್ತಿತ್ತು ಎಂಬುದನ್ನು ಉಲ್ಲೇಖೀಸಿದ್ದೇನೆ ಎಂದು ಹೇಳಿದರು. ನಾನು ಮತ್ತೂಂದು ರಾಜಕೀಯ ಪುಸ್ತಕ ಬರೆಯಲು ಮುಂದಾಗಿ ದ್ದೇನೆ. ಆ ಪುಸ್ತಕಕ್ಕೆ “ದಿ ಬಾಂಬೆ ಡೇಸ್’ ಎಂದು ಹೆಸರು ಕೊಟ್ಟಿದ್ದೇನೆ. ಈ ಪುಸ್ತಕ ಮೂರು ಭಾಷೆಯಲ್ಲಿರಲಿದ್ದು, ದೆಹಲಿಯಲ್ಲಿ ಬಿಡುಗಡೆ ಮಾಡುತ್ತೆನೆ. ಬಾಂಬೆಯಲ್ಲಿ ಏನಾಯಿತು, ಅದೆಲ್ಲವನ್ನು ಬರೆಯುತ್ತಿದ್ದೇನೆ. ಒಂದು ಸರ್ಕಾರ ಹೋಗಿ ಮತ್ತೂಂದು ಸರ್ಕಾರ ಬರಲೇಬೇಕಿದೆ. ಜನ ತಂತ್ರ ವ್ಯವಸ್ಥೆ ಯಲ್ಲಿ ಭಾವನೆ, ನಂಬಿಕೆ ಮೇಲಿನ ತಲ್ಲಣ ವೇನು. ಇದೆಲ್ಲ ವನ್ನು ಅಕ್ಷರದ ಮೂಲಕ ಜನರಿಗೆ ತಿಳಿಸು ತ್ತೇನೆ ಎಂದು ಹೇಳಿದರು.
ಕುಮಾರಸ್ವಾಮಿ ವಿರುದ್ಧ ವ್ಯಂಗ್ಯ: ನಾನು ಯಾವ ಪಕ್ಷದಲ್ಲೇ ಇದ್ದರು ಆ ಪಕ್ಷವನ್ನ ಪ್ರೀತಿ ಮಾಡುತ್ತೇನೆ. ಪಕ್ಷದ ನಾಯಕತ್ವದ ನಡವಳಿಕೆ ವಿರುದ್ಧವೂ ದಂಗೆ ಎದ್ದಿದ್ದೇನೆ. ಬಂಗಾರಪ್ಪ, ವೀರಪ್ಪ ಮೊಯ್ಲಿ ಹಾಗೂ ನಾವೇ ಕರೆತಂದ ಸಿದ್ದರಾಮಯ್ಯನ ವಿರುದ್ಧವೂ ದಂಗೆ ಎದ್ದಿದ್ದೆ. ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ ವಿರುದ್ಧ ದಂಗೆ ಎದ್ದವನು ನಾನು. ಈ ಎಲ್ಲ ಸಂಗತಿಗಳಿಗೆ ಪುಸ್ತಕ ರೂಪ ನೀಡಲು ಅಣಿಯಾಗುತ್ತಿದ್ದೇನೆ ಎಂದು ವಿಶ್ವನಾಥ್ ಹೇಳಿದರು. 2006ರಲ್ಲಿ ಕುಮಾರಸ್ವಾಮಿ ಅವರು ಧರ್ಮ ಸಿಂಗ್ ಸರ್ಕಾರ ಬೀಳಿಸಿದ್ದು ಕ್ಷಿಪ್ರ ಕ್ರಾಂತಿಯಂತೆ. ಆದರೆ, ಈಗ ನಾವು ಮಾಡಿದ್ದು ಪಕ್ಷಕ್ಕೆ ದ್ರೋಹ ಅಂತೆ ಎಂದು ಮಾಜಿ ಸಿಎಂ ಎಚ್‌ಡಿಕೆ ವಿರುದ್ಧ ಕಿಡಿಕಾರಿದರು.
ಸಾರಾ ಹೇಳಿಕೆಗೆ ತಿರುಗೇಟು: ವಿಶ್ವನಾಥ್ ಅಧ್ಯಾಯ ಮುಗಿಯಿತು ಎಂಬ ಸಾ.ರಾ.ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನು ಯಾರಿಗೂ ಉತ್ತರ ಕೊಡಬೇಕಿಲ್ಲ. ಅವರ್ಯಾರೂ ನನ್ನ ಮಟ್ಟ ಅಲ್ಲ. ಅವರು ಗ್ರಾಮ ಪಂಚಾಯತಿ ಮಟ್ಟದವರು. ಅದಕ್ಕೆ ನಾನು ಉತ್ತರ ಕೊಡಬೇಕಿಲ್ಲ ಎಂದು ತಿರುಗೇಟು ನೀಡಿದರು.