Advertisement

ಜಾಗತಿಕ ಮಟ್ಟದಲ್ಲಿ ಭಾರತಕ್ಕಿರುವ ಗೌರವ ಹೆಚ್ಚಿಸೋಣ

10:53 AM Apr 04, 2020 | Sriram |

ಕೋಟ: ಭಾರತದಲ್ಲಿ ಕೋವಿಡ್ 19 ಸೋಂಕು ಹೆಚ್ಚುತ್ತಿರುವಂತೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಎದೆಬಡಿತ ಕೂಡ ಹೆಚ್ಚುತ್ತಿದೆ. ತಾಯ್ನಾಡು ಕ್ಷೇಮವಾಗಿರಲಿ ಎಂಬ ಪ್ರಾರ್ಥನೆಯನ್ನು ಅನವರತ ಮಾಡುತ್ತಿದ್ದಾರೆ.

Advertisement

ಕೋವಿಡ್ 19 ನಿಯಂತ್ರಣದ ವಿಚಾರ ದಲ್ಲಿ ಜಗತ್ತಿನ ಇತರ ರಾಷ್ಟ್ರಗಳು ಭಾರತವನ್ನು ಗೌರವದಿಂದ ಕಾಣುತ್ತಿದ್ದು ನೀವು ಸ್ವಯಂ ನಿಯಂತ್ರಣದ ಮೂಲಕ ಸೋಂಕನ್ನು ದೂರ ಮಾಡಿಕೊಂಡು ದೇಶದ ಗೌರವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಯುಕೆಯ ಲಂಡನ್‌ ನಗರದಲ್ಲಿ ನೆಲೆಸಿರುವ ಕೋಟ ಸಮೀಪ ಅಚ್ಲಾಡಿ ಮೂಲದ ಬಾಲಕೃಷ್ಣ ಶೆಟ್ಟಿ ಮನವಿ ಮಾಡಿದ್ದಾರೆ.

ನಾವು ಸದ್ಯ ಕ್ಷೇಮವಾಗಿದ್ದೇವೆ. ಆದರೆ ಇಲ್ಲಿನ ಪರಿಸ್ಥಿತಿ ದಿನೇದಿನೆ ಕೈ ಮೀರುತ್ತಿದೆ. ಇಂಗ್ಲೆಂಡ್‌ನ‌ಲ್ಲಿ ಈಗಾಗಲೇ ಸುಮಾರು 38,168 ಪ್ರಕರಣಗಳು ದೃಢಪಟ್ಟಿದ್ದು 3,605 ಮಂದಿ ಮೃತಪಟ್ಟಿದ್ದಾರೆ. ನಾವಿಲ್ಲಿ ಸಂಪೂರ್ಣ ಲಾಕ್‌ಡೌನ್‌ ಆಗಿದ್ದೇವೆ. ತಾಯ್ನಾಡಿನಲ್ಲಿ ಒಂದೊಂದು ಪ್ರಕರಣ ಹೆಚ್ಚಿದಂತೆ ನಮ್ಮ ಹೃದಯಬಡಿತ ಹೆಚ್ಚುತ್ತಿದೆ. ದೇಶದ ಭವಿಷ್ಯದ ಬಗ್ಗೆ ಭಯವಾಗುತ್ತದೆ ಎನ್ನುತ್ತಾರೆ ಅವರು.

ದೇಶದ ಸಂದಿಗ್ಧ ಸ್ಥಿತಿ ನಮಗೆ ಅರ್ಥವಾಗುತ್ತದೆ. ಆದ್ದರಿಂದ ವಿದೇಶದಲ್ಲಿರುವ ನಮ್ಮಂಥವರನ್ನು ವಾಪಸು ಕರೆಸಿಕೊಳ್ಳುತ್ತಿಲ್ಲ, ಆ ಬಗ್ಗೆ ಯುಕೆಯಲ್ಲಿರುವ ನಮ್ಮವರಾರಿಗೂ ನೋವಿಲ್ಲ. ದೇಶ ಸುರಕ್ಷಿತವಾಗಿದ್ದರೆ ಯಾವಾಗ ಬೇಕಿದ್ದರೂ ಊರಿಗೆ ಬರಬಹುದು. ಯುಕೆಯಲ್ಲಿ ಸರಕಾರದ ನಿರ್ಧಾರವನ್ನು ನಾಗರಿಕರು ಚಾಚೂ ತಪ್ಪದೆ ಪಾಲಿಸುತ್ತಾರೆ. ಒಮ್ಮೆ ಲಾಕ್‌ಡೌನ್‌ ಆದೇಶವಾದ ಮೇಲೆ ಪುನಃ ಹೊರಬರುವಂತೆ ತಿಳಿಸುವ ತನಕ ಯಾರೂ ಹೊರ ಬರುವುದಿಲ್ಲ. ಭಾರತದ ಜನತೆ ಇದೇ ರೀತಿ ನಡೆದುಕೊಂಡು ಕೋವಿಡ್ 19 ಸೋಂಕನ್ನು ದೇಶದಿಂದ ಹೊಡೆ ದೋಡಿಸಬೇಕು ಎಂದು ಮನವಿ ಮಾಡಿದ್ದಾರೆ ಅವರು.

ನೋವಿನಲ್ಲೂ ಹೆಮ್ಮೆ
ಚೀನ, ಅಮೆರಿಕದಂತಹ ಮುಂದು ವರಿದ ರಾಷ್ಟ್ರಗಳು ಕೂಡ ಕೋವಿಡ್ 19 ನಿಯಂತ್ರಣ ಅಸಾಧ್ಯವಾಗಿ ಕೈಚೆಲ್ಲಿರು ವಾಗ ನಮ್ಮ ಭಾರತದಲ್ಲಿ ಸೋಂಕಿತರ ಸಂಖ್ಯೆ 2 ಸಾವಿರದೊಳಗಿದೆ ಎನ್ನುವುದೇ ಅತ್ಯಂತ ಸಮಾಧಾನದ ಸಂಗತಿ. ಲಂಡನ್‌ನಲ್ಲಿರುವ ಸಾಕಷ್ಟು ವಿದೇಶದ ನನ್ನ ಮಿತ್ರರು ಕರೆ ಮಾಡಿ ಭಾರತದಂತಹ ದೊಡ್ಡ ಜನಸಂಖ್ಯೆ ಇರುವ ದೇಶದಲ್ಲಿ ಈ ರೀತಿಯಲ್ಲಿ ನಿಯಂತ್ರಣ ಹೇಗೆ ಸಾಧ್ಯವಾಯಿತು; ಅಲ್ಲಿ ಅದಕ್ಕಾಗಿ ಕೈಗೊಂಡ ಕ್ರಮಗಳೇನು? ಎಂದು ಪ್ರಶ್ನಿಸುತ್ತಾರೆ. ಜತೆಗೆ ನಿಜಕ್ಕೂ ಭಾರತ ಗ್ರೇಟ್‌ ಎನ್ನುವ ಮಾತು ಅವರ ಬಾಯಿಯಿಂದ ಕೇಳು ವಾಗ ತುಂಬಾ ಹೆಮ್ಮೆ ಎನಿಸುತ್ತದೆ ಎಂದು ಬಾಲಕೃಷ್ಣ ಸಂತಸ ಪಡುತ್ತಾರೆ.

Advertisement

ಆರ್ತರಿಗೆ ನೆರವಾಗೋಣ
ಲಂಡನ್‌ನಲ್ಲಿರುವ ಹಿರಿಯರು, ಅಶಕ್ತರ ನೆರವಿಗೆಯುವಕರು, ಸಂಘ-ಸಂಸ್ಥೆಗಳು ಮುಂಚೂಣಿ ಯಲ್ಲಿ ನಿಂತಿದ್ದಾರೆ. ಅದೇ ರೀತಿ ಭಾರತದಲ್ಲೂ ದೊಡ್ಡ ಸಂಖ್ಯೆಯಲ್ಲಿ ನೊಂದವರ ನೆರವಿಗೆ ಧಾವಿಸಬೇಕಿದೆ.

ನನ್ನ ದೇಶ ಸೋಲದಿರಲಿ
ಕೋವಿಡ್ 19 ಮಹಾಮಾರಿಯ ವಿರುದ್ಧದ ಹೋರಾಟವೆಂದರೆ ಯುದ್ಧಕ್ಕಿಂತಲೂ ಕಠಿಣ. ಇಂತಹ ಸಂದರ್ಭದಲ್ಲಿ ಭಾರತದ ಸಹೋ ದರರಲ್ಲಿ ನಮ್ಮದೊಂದೇ ವಿನಂತಿ ಏನೆಂದರೆ… “ಸರಕಾರದ ಪ್ರತಿ ಆದೇಶವನ್ನೂ ಚಾಚೂತಪ್ಪದೆ ಪಾಲಿಸಿ. ಈ ಮೂಲಕ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ದೇಶ ವನ್ನು ಗೆಲ್ಲಿಸಿ; ಯಾವುದೇ ಕಾರಣಕ್ಕೆ ನನ್ನ ದೇಶ ಸೋಲದಿರಲಿ.’
– ಬಾಲಕೃಷ್ಣ ಶೆಟ್ಟಿ, ಲಂಡನ್‌

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next