ಯಾವುದೋ ಕುಂಟು ನೆಪ ಹೇಳಿ ನೀನು ನನ್ನನ್ನು ತಿರುಗಿಯೂ ನೋಡದೆ ಹೋಗಿಬಿಟ್ಟೆ ಅಂದ್ಕೋ, ಆನಂತರ ಕೂಡ ನಾನು ಬದುಕಿರ್ತೀನಿ. ಅದೃಷ್ಟ ನನ್ನ ಕಡೇಗಿದ್ರೆ ಚೆನ್ನಾಗೂ ಇರ್ತೀನಿ. ಆದರೆ ಯಾವ ವಿಷಯದಲ್ಲೂ ಗ್ಯಾರಂಟಿ ಕೊಡಲಾರೆ…
ಬದುಕೆಂಬ ಪುಟ್ಟ ನದಿಯಲ್ಲಿ ಅದೆಷ್ಟು ಬದಲಾವಣೆಗಳು, ಬವಣೆಗಳು, ಪುಟ್ಟ ಕನಸ ಹೊತ್ತು ಬರುವ ಹಡಗುಗಳು, ಆಸೆಯ ಬಲೆಗಳು, ಮೋಸದ ಗಾಳಗಳು ಅಲ್ಲವಾ?? ಮುಳುಗೇಳುವ ಈ ಬದುಕು ಚಿರಂತನ, ಚಿತ್ರವಿಚಿತ್ರ ಮಂಥನ. ಬದುಕು ಯಾವತ್ತೂ ನಿಂತಲ್ಲೇ ನಿಲ್ಲುವುದಿಲ್ಲ. ನೆನಪು ಮಾಡ್ಕೋ: ವರ್ಷದ ಹಿಂದೆ ನೀನು ಕೇವಲ ಗೆಳೆಯನಾಗಿದ್ದೆ. ನಂತರದ ದಿನಗಳಲ್ಲಿ ಇನಿಯನಾದೆ. ಆದರೀಗ ನಿನ್ನಿಂದಲೇ ಬಾಳು ಪ್ರಳಯ ಎಂದು ಸಂಕಟ ಪಡುವಂತಾಗಿದೆ. ಏನಿದು ಲವ್ ಲೆಟರ್‌ನಲ್ಲಿ ಫಿಲಾಸಫಿ ಅನ್ಕೋತಿದೀಯ? ಪ್ರೀತಿಯಲ್ಲಿ ಸೋತಾಗ ಹುಟ್ಟಿದ ಫಿಲಾಸಫಿಗಳು ಎಂದೆಂದಿಗೂ ಶಾಶ್ವತವಾಗಿ ಉಳೀತವೆ ಕಣೋ…
ಪ್ರೀತಿಯ ವಿಷಯಕ್ಕೆ ಬಂದಾಗ, ಹೃದಯದ ಮಾತಿಗಿಂತ ಮೆದುಳಿನ ಮಾತನ್ನು ಕೇಳಬೇಕೆನ್ನುತ್ತಾರೆ. ಆದರೆ ನಾನು ಅವೆರಡರ ಜೊತೆ ನನ್ನಅನುಭವದ ಮನುಷ್ಯನ ಸೈಕಾಲಜಿಯನ್ನೆಲ್ಲಾ ಅಳೆದು ತೂಗಿ ನೋಡಿ, ಆಮೇಲಷ್ಟೇ ಪ್ರೀತಿಗೆ ಒಪ್ಪಿಗೆ ಇತ್ತೆ. ಮೊದಮೊದಲು ಈ ಪ್ರಪಂಚದ ಸುಖವೆಲ್ಲಾ ನಿನ್ನ ತೋಳ ರೆಕ್ಕೆಯ ಸಾನ್ನಿಧ್ಯದಲ್ಲಿದೆ ಎನಿಸಿತು. ಆ ಪ್ರತಿಕ್ಷಣದ ಒಡನಾಟ, ಕಾತರ, ಎದೆಯ ಝಲಕ್ ಎಲ್ಲವೂ ಸುಖಮಯವೇ ಮಂಜಿನ ಮುಸುಕಿನಲ್ಲಿ. ಪ್ರೀತಿಯಲ್ಲಿ ಮೆದುಳು ಸಹ ತಪ್ಪು ಹೆಜ್ಜೆ ಹಾಕುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ. ನನಗೆ ಜೊತೆಯಾದ ನೋವೇ ಸಾಕ್ಷಿ.
ಪುಟ್ಟ ಹೆಜ್ಜೆ ಇಡುವಾಗ ತಪ್ಪಿದರೆ, ಎಡವಿದರೆ ಎದ್ದೇಳಬಹುದು. ಆದರೆ, ಒಲವಿನ ಹಾದಿಯಲ್ಲಿ ಹೆಜ್ಜೆ ತಪ್ಪಬಾರದು. ಅದು ಇಮ್ಮೆಚೂರಿಟಿಯಾ, ಲಜ್ಜೆಗೇಡಿತನವಾ, ಸಾಮಾಜಿಕ ಭೀತಿಯಾ, ಸಂಬಂಧಗಳ ಸೆಂಟಿಮೆಂಟಾ? ವಾಟೆವರ್, ನಾವಿಬ್ಬರೂ ಪ್ರೀತಿಯಲ್ಲಿ ಸೋತದ್ದಂತೂ ಸತ್ಯ. ಆ ಒಂದು ಪುಟ್ಟ ಸೋಲಿನ ನೋವು ಬದುಕಿನುದ್ದಕ್ಕೂ ಕೊರಗುವಂತೆ ಹೈರಾಣು ಮಾಡಿಬಿಡುತ್ತದೆ. ಕಾಡಿನ ಕತ್ತಲಲ್ಲಿ ದಿಕ್ಕು ತಪ್ಪಿರುವೆ. ಮುಂದೇನಿದ್ದರೂ ಕಷ್ಟವಾದರೂ ಸರಿ ಮತ್ತೂಂದು ದಾರಿ ಹುಡುಕಿ ತಲುಪಬೇಕಾದ ಗಮ್ಯವನ್ನು ಸೇರಬೇಕಷ್ಟೆ. ಆದ್ರೂ ನೀನಂದ್ರೆ ಇಷ್ಟಾ ಕಣೋ. ಇರುವುದೊಂದೇ ಜೀವನ ನಿನಗಲ್ಲದೆ ಇನ್ನಾರಿಗೆ ನೀಡಲಿ ನನ್ನ ಸರ್ವಸ್ವವನ್ನು? ಸವಾಲುಗಳನ್ನು ಎದುರಿಸಿ ಬದುಕಲು ನೀನು ಧೈರ್ಯ ಮಾಡಬೇಕಷ್ಟೆ. ಅಕಸ್ಮಾತ್ ಹಾಗೆ ಮಾಡಲು ನೀನು ಹಿಂದೇಟು ಹಾಕಿ ನನ್ನನ್ನು ನಡುನೀರಿನಲ್ಲಿ ಕೈ ಬಿಟ್ಟೆ ಅಂದ್ಕೋ, ಆಗಲೂ ನನ್ನ ಜೀವನ ಸಾಗುತ್ತದೆ ಮುಳ್ಳಿನ ಮೇಲೆ ಅಥವಾ ನಿನ್ನ ನಿನಪಿನಲ್ಲಿ ಎಂದೆಂದಿಗೂ..
ಇಂತಿ ನಿನ್ನವಳು
ಪಲ್ಲವಿ