ಹರಿಹರ: ಸಾಲ ಪಡೆದ ಹಣವನ್ನು ಬಂಡವಾಳವಾಗಿ ಹೂಡಿಕೆ ಮಾಡುವ ಮೂಲಕ ಆದಾಯ ವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಬಿ. ರಾಘವೇಂದ್ರ ಕರೆ ನೀಡಿದರು.
ತಾಲೂಕಿನ ಹನಗವಾಡಿ ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾಲದೊಂದಿಗೆ ಆ ಹಣವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಬಾಧ್ಯತೆಯೂ ಬರುವುದರಿಂದ ಸಾಲ ತೀರಿಸಲು, ಮದುವೆ-ಮುಂಜಿ, ಹಬ್ಬ-ಹರಿದಿನಗಳಿಗೆಂದು ಸಾಲ ಮಾಡುವ ಪದ್ಧತಿ ಸರಿಯಲ್ಲ ಎಂದರು.
ತಾಲೂಕಿನಲ್ಲಿ ಸಂಸ್ಥೆಯು 3137 ಸಂಘಗಳನ್ನು ರಚಿಸಿ, 27,604 ಸದಸ್ಯರು ಸಂಸ್ಥೆಯಲ್ಲಿ ಉಳಿತಾಯ ಮಾಡುವುದರ ಜೊತೆಗೆ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಯೂನಿಯನ್ ಬ್ಯಾಂಕ್‌ನಲ್ಲಿ ಸಾಲವನ್ನು ಸಹ ಪಡೆದಿದ್ದು, ಈ ಹಣದಲ್ಲಿ ವಿವಿಧ ಬಗೆಯ ಉದ್ಯೋಗ, ಉದ್ಯಮ ಆರಂಭಿಸಿ ಜೀವನದಲ್ಲಿ ಪ್ರಗತಿ ಸಾಧಿಸಬೇಕು ಎಂಬುದು ಸಂಸ್ಥೆಯ ಧ್ಯೇಯವಾಗಿದೆ ಎಂದರು.
ತಾಲೂಕಿನ ರಾಜನಹಳ್ಳಿ, ಬನ್ನಿಕೋಡು, ಹನಗವಾಡಿ, ಶಂಷೀಪುರ, ಕೆ.ಬೇವಿನಹಳ್ಳಿ, ಕಡ್ಲೆಗೊಂದಿ ಹಾಗೂ ಸಾಲಕಟ್ಟೆ
ಗ್ರಾಮಗಳಲ್ಲಿ 27 ಹೊಸ ಸ್ವಸಹಾಯ ಸಂಘಗಳು ಸೇರಿಕೊಳ್ಳುತ್ತಿವೆ. ಹೊಸದಾಗಿ ಸೇರಿಕೊಳ್ಳುತ್ತಿರುವವರು ಸಂಘದಲ್ಲಿನ ನೀತಿ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದರು.
ಪತ್ರಕರ್ತ ಪ್ರವೀಣ್ ಹನಗವಾಡಿ ಮಾತನಾಡಿ, ರಾಜ್ಯದ ಸಹಕಾರಿ ಸಂಸ್ಥೆಗಳಲ್ಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅತ್ಯಧಿಕ ಸಾಲ ನೀಡಿದ್ದಲ್ಲದೆ ಸಕಾಲಕ್ಕೆ ಮರುಪಾವತಿ ಸಹ ಆಗುತ್ತಿದೆ ಎಂದರು. ಗ್ರಾಪಂ ಅಧ್ಯಕ್ಷ ಪ್ರಮೋದ್ ಬಣಕಾರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಯಾವುದೇ ಆಮಿಷಗಳಿಗೆ ಒಳಗಾಗುವುದಿಲ್ಲ ಎಂಬುದು ಸ್ವತಃ ನನ್ನ ಅನುಭವಕ್ಕೆ ಬಂದಿದೆ ಎಂದರು.
ವಲಯ ಮೇಲ್ವಿಚಾರಕಿ ಮಂಜುಳ .ಪಿ, ಸೇವಾ ಪ್ರತಿನಿಧಿಗಳಾದ ಭಾರತಿ, ಪ್ರೇಮಲೀಲ, ಒಕ್ಕೂಟಗಳ ಅಧ್ಯಕ್ಷ ಪಾಲಾಕ್ಷಪ್ಪ ಕೆ, ಶಿವಕುಮಾರ್, ಚೇತನ್, ಕಾರ್ಯದರ್ಶಿ ಮಹೇಶ್ ಬಣಕಾರ್ ಮತ್ತಿತರರಿದ್ದರು.