Advertisement
ಮಂಗಳೂರು ನಗರ ಒಂದೆಡೆ ಸ್ಮಾರ್ಟ್ ಸಿಟಿಯಾಗಲು ಹೊರಟಿದೆ. ಇನ್ನೊಂದಡೆ ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿ ಗುರುತಿಸಿಕೊಂಡಿದೆ. ಶೈಕ್ಷಣಿಕ ಹಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ನಗರಕ್ಕೆ ಇನ್ನೂ ಕೂಡ ಶಾಶ್ವತ ಕೇಂದ್ರ ಬಸ್‌ನಿಲ್ದಾಣ ಹೊಂದಲು ಸಾಧ್ಯವಾಗಿಲ್ಲ . ಪ್ರಸ್ತುತ ಸ್ಟೇಟ್ ಬ್ಯಾಂಕ್ ಬಳಿ ಇರುವ ತಾತ್ಕಾಲಿಕ ಕೇಂದ್ರ ಬಸ್ ನಿಲ್ದಾಣ ಬಸ್‌ಗಳಿಂದ ತುಂಬಿ ತುಳುಕುತ್ತಿವೆ. ಬಸ್‌ಗಳಿಗೆ ನಿಲ್ಲಲು ಜಾಗವಿಲ್ಲದೆ ಪಕ್ಕದ ರಸ್ತೆಗಳನ್ನು ಆಕ್ರಮಿಸಿಕೊಂಡಿವೆ.
Related Articles
ಮಂಗಳೂರು ನಗರ ಅತಿಯಾದ ವಾಹನ ದಟ್ಟಣೆ ಎದುರಿಸುತ್ತಿದೆ. ಸಿಟಿ ಬಸ್, ಸರ್ವಿಸ್ ಬಸ್, ಎಕ್ಸ್‌ಪ್ರೆಸ್ ಬಸ್‌ಗಳು, ಟೂರಿಸ್ಟ್ ಬಸ್‌ಗಳು, ಅಂತಾರಾಜ್ಯ ಪರವಾನಿಗೆಯ ಬಸ್‌ಗಳು, ಶಾಲಾಕಾಲೇಜುಗಳ ಬಸ್‌ಗಳು ಸೇರಿದಂತೆ ಸುಮಾರು 4 ಸಾವಿರಕ್ಕೆ ಅಧಿಕ ಬಸ್‌ಗಳು ಇವೆ.
Advertisement
ಹಂಪನಕಟ್ಟೆ ಪ್ರದೇಶದಲ್ಲಿ ದಿನವೊಂದಕ್ಕೆ ಸಾವಿರಾರು ಬಸ್‌ಗಳು ಬರುತ್ತಿರುವುದರಿಂದ ಮಿತಿಮೀರಿದ ವಾಹನ ದಟ್ಟಣೆ ಸಮಸ್ಯೆ ಕಾಡುತ್ತಿದೆ. ಬಸ್‌ಗಳಿಗೆ ಹಂಪನಕಟ್ಟೆ ಪ್ರದೇಶಕ್ಕೆ ಪ್ರವೇಶಿಸಲು ಹೊಸದಾಗಿ ಪರವಾನಿಗೆ ಸಿಗುವುದಿಲ್ಲ.
ಜಾಗ ಇದೆ..ಜಾರಿಯಾಗುತ್ತಿಲ್ಲ ಹಲವಾರು ಪ್ರದೇಶಗಳು ಪ್ರಸ್ತಾಪಕ್ಕೆ ಬಂದು ಕಡೆಗೆ ಪಂಪ್‌ವೆಲ್‌ನಲ್ಲಿ ಸ್ಥಳ ಆಯ್ಕೆಯಾಯಿತು. ವಿಸ್ತಾರವಾದ ಹಾಗೂ ಸರ್ವಸಜ್ಜಿತ ಬಸ್‌ನಿಲ್ದಾಣಕ್ಕೆ ಒಟ್ಟು 17.5 ಎಕ್ರೆ ಜಾಗವನ್ನು ಅಂದಾಜಿಸಲಾಯಿತು. ರಾಷ್ಟ್ರೀಯ ಹೆದ್ದಾರಿ 66ಕ್ಕೆ ತಾಗಿಕೊಂಡಂತೆ ಪ್ರಥಮ ಹಂತದಲ್ಲಿ ಸುಮಾರು 8 ಎಕ್ರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಇದರಲ್ಲಿ ಪ್ರಸ್ತುತ ಉಳಿದುಕೊಂಡಿರುವ 7.33 ಎಕ್ರೆ ಪ್ರದೇಶಕ್ಕೆ ಮಣ್ಣುತುಂಬಿಸುವ ಕಾರ್ಯ ನಡೆದು 3 ವರ್ಷಗಳಾಗುತ್ತಾ ಬಂದಿವೆೆ. ಲಭ್ಯವಿರುವ 7.33 ಎಕ್ರೆ ಜಾಗವನ್ನು ಇಟ್ಟುಕೊಂಡು ಯಾವ ರೀತಿ ಸುಸಜಿcತ ಬಸ್‌ನಿಲ್ದಾಣ ನಿರ್ಮಿಸಬಹುದು ಎಂಬ ಬಗ್ಗೆ ಸಾಧ್ಯತಾ ವರದಿ ಹಾಗೂ ನಕ್ಷೆ ಸಿದ್ಧಗೊಂಡಿತ್ತು. ಈ ನಡುವೆ ಇಲ್ಲಿ ಇಂಟರ್‌ಲಾಕ್ ಅಳವಡಿಸಿ ತಾತ್ಕಾಲಿಕವಾಗಿ ಪ್ರಾಯೋಗಿಕ ನೆಲೆಯಲ್ಲಿ ಸರ್ವಿಸ್ ಬಸ್‌ನಿಲ್ದಾಣವನ್ನು ಸ್ಥಳಾಂತರಿಸುವ ಬಗ್ಗೆಯೂ ಪ್ರಸ್ತಾವಿಸಲಾಗಿತ್ತು¤. ಮುಖ್ಯಮಂತ್ರಿಯ ಎರಡನೇ ಹಂತದ ವಿಶೇಷ 100 ಕೋಟಿ ರೂ. ಅನುದಾನದಲ್ಲಿ ನಿರ್ದಿಷ್ಟ ಮೊತ್ತವನ್ನು ನೂತನ ಬಸ್ ನಿಲ್ದಾಣದ ಅಭಿವೃದ್ಧಿಗೆ ವಿನಿಯೋಗಿಸುವ ಬಗ್ಗೆ ತೀರ್ಮಾನವಾಗಿತ್ತು. ಆದರೆ ಯಾವುದೂ ಕಾರ್ಯರೂಪಕ್ಕೆ ಬರಲಿಲ್ಲ. ಪಂಪ್‌ವೆಲ್‌ನಲ್ಲಿ ಫ್ಲೈಓವರ್ ನಿರ್ಮಾಣವಾಗುತ್ತಿದೆ. ಈ ಹಂತದಲ್ಲಿ ಇಲ್ಲಿ ಬಸ್ ನಿಲ್ದಾಣ ನಿರ್ಮಾಣವಾದರೆ ಸಂಚಾರ ವ್ಯವಸ್ಥೆ ಬಾಧಿತವಾಗಲಿದೆ. ತಾಂತ್ರಿಕ ಸಮಸ್ಯೆಗಳು ಉದ್ಬವವಾಗಲಿವೆ. ನಿಲ್ದಾಣಕ್ಕೆ ಬಸ್‌ಗಳ ಆಗಮನ ನಿರ್ಗಮನಕ್ಕೆ ಸಮಸ್ಯೆಯಾಗಲಿದೆ ಎಂಬ ವಾದವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಂದಿಡುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಾದವನ್ನು ಬೆನ್ನಟ್ಟಿಕೊಂಡೇ ಪ್ರಾರಂಭವಾದ ಈ ಯೋಜನೆ ಇನ್ನೂ ಇದರಿಂದ ಮುಕ್ತವಾಗಿಲ್ಲ. ಈಗ ಈ ಯೋಜನೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕೈಗೆತ್ತಿಗೊಳ್ಳಲು ನಿರ್ಧರಿಸಲಾಗಿದೆ. ಆದರೆ ಪಂಪ್‌ವೆಲ್ ಬದಲು ನಗರ ಬೇರೆ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಚಿಂತನೆ ಆರಂಭವಾಗಿದೆ. ಪಡೀಲ್ ಅಥವಾ ಕೊಟ್ಟಾರ ಚೌಕಿ ಬಳಿ ನೂತನ ಬಸ್ ನಿಲ್ದಾಣ ನಿರ್ಮಿಸುವ ಪ್ರಸ್ತಾವನೆ ಕೇಳಿ ಬರುತ್ತಿದೆ. ಇದಕ್ಕಾಗಿ ಮತ್ತೆ ಆರಂಭದಿಂದಲೇ ಎಲ್ಲ ಪ್ರಕ್ರಿಯೆಗಳು ನಡೆಯಬೇಕಾಗಿದೆ. ಇದು ಮತ್ತಷ್ಟು ಕಾಲಾವಕಾಶವನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ನೂತನ ಕೇಂದ್ರ ಬಸ್ ನಿಲ್ದಾಣ ಪ್ರಸ್ತಾವನೆ ರೂಪುಗೊಂಡು ಬಹಳಷ್ಟು ವರ್ಷಗಳಾಗಿವೆ. ಪ್ರಸ್ತಾವನೆ ಯೋಜನೆಯಾಗಿ ಅನುಷ್ಠಾನದ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ. ಜಾಗ ಗುರುತಿಸುವುದರಲ್ಲೇ ಕಾಲಹರಣ ಮಾಡದೆ ಅನುಷ್ಠಾನಕ್ಕೆ ವೇಗವನ್ನು ನೀಡುವ ಕಾರ್ಯ ನಡೆಯಬೇಕಾಗಿದೆ. ಯೋಜನೆಯಾಗಿಯೇ ಉಳಿದಿದೆ
ಮಂಗಳೂರು ನಗರಕ್ಕೆ ಸುಸಜ್ಜಿತ ಬಸ್ ನಿಲ್ದಾಣ ಪ್ರಸ್ತಾವಕ್ಕೆ ಮೂರು ದಶಕಗಳ ಇತಿಹಾಸವಿದೆ. ಬಸ್ ನಿಲ್ದಾಣವನ್ನು ನೆಹರೂ ಮೈದಾನದ ಹಾಕಿ ಕ್ರೀಡಾಂಗಣಕ್ಕೆ ತಾತ್ಕಾಲಿಕ ನೆಲೆಯಲ್ಲಿ ಸ್ಥಳಾಂತರ ಮಾಡುವಾಗಲೇ ಸೂಕ್ತ ಪ್ರದೇಶದಲ್ಲಿ ವಿಶಾಲ ಮತ್ತು ಸುಸಜ್ಜಿತ ಬಸ್‌ನಿಲ್ದಾಣವನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಭರತ್‌ಲಾಲ್ ಮೀನ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ಒಂದಷ್ಟು ಪ್ರಕ್ರಿಯೆಗಳು ಕೂಡ ನಡೆದಿತ್ತು. ಆದರೆ ಅವರು ಜಿಲ್ಲೆಯಿಂದ ವರ್ಗಾವಣೆಯಾದ ಬಳಿಕ ಅದು ನನೆಗುದಿಯಲ್ಲಿ ಬಿತ್ತು. ಹೊಸ ಬಸ್ ನಿಲ್ದಾಣ ನಿರ್ಮಾಣ ಅಂದಿನಿಂದ ಇಂದಿನವರೆಗೆ ಬರೇ ಯೋಜನೆಯಾಗಿಯೇ ಉಳಿದುಕೊಂಡಿದೆ ವಿನ ಅನುಷ್ಠಾನಕ್ಕೆ ಬಂದಿಲ್ಲ. – ಕೇಶವ ಕುಂದರ್