ಮನೆ ಕಟ್ಟವವರಿಗೆ ಇದು ದುಬಾರಿ ದಿನಗಳೇ. ಬಹುತೇಕರು ಮುಂದೆ ಬೇಕಾಗುತ್ತೆ ಎಂದು ಯೋಚಿಸಿ, ಹೆಚ್ಚು ವಿಸ್ತೀರ್ಣವಾದ ಮನೆಯನ್ನು ಇಂದೇ ಕಟ್ಟಲು ಹೋಗಿ, ಯಥೇಚ್ಚ ಹಣ ಖರ್ಚು ಮಾಡಿಕೊಳ್ಳುತ್ತಾರೆ. ಇದರ ಬದಲು, ವಿನ್ಯಾಸವನ್ನು ಮಾಡಿಸಿ, ಬೇಕಾದಷ್ಟನ್ನು ಮಾತ್ರ ಈಗ ಕಟ್ಟಿಕೊಳ್ಳಬಹುದು. ಇದರಿಂದಾಗುವ ಮುಖ್ಯ ಲಾಭ- ಮನೆಯನ್ನು ಅನಗತ್ಯವಾಗಿ ಬೆಳೆಸಿಕೊಂಡು ಹೋಗದೆ, ಎಷ್ಟುಬೇಕೋ ಅಷ್ಟನ್ನು ಮಾತ್ರ ತಕ್ಷಣಕ್ಕೆ ಕಟ್ಟಿಕೊಂಡು, ಸಾಕಷ್ಟು ಹಣವನ್ನು ಉಳಿಸಬಹುದು.
Advertisement
ಜೊತೆಗೆ, ಅದರ ಮೇಂಟೆನನ್ಸ್ ಕೂಡ ಕಡಿಮೆಯೇ ಇರುತ್ತದೆ. ಕೆಲವೊಮ್ಮೆ ಅನಗತ್ಯವಾಗಿ ಹೆಚ್ಚು ಕೋಣೆಗಳನ್ನು ಕಟ್ಟಿಕೊಂಡರೆ, ಅವುಗಳನ್ನು ಬಳಸದೆ ಧೂಳು ಹಿಡಿಸಿಕೊಂಡು ಕೂರಬೇಕಾಗುತ್ತದೆ. ಮನೆಯನ್ನು ಹಂತಹಂತವಾಗಿ ಮುಂದಿನ ದಿನಗಳಲ್ಲಿ ನಮ್ಮ ಅಗತ್ಯ ಬೆಳೆದಂತೆ ವಿಸ್ತಾರ ಮಾಡಿಕೊಳ್ಳುತ್ತಾ ಹೋಗುವುದಕ್ಕೆ ಆಸ್ಪದ ಇರುವಂತೆ ಮೊದಲೇ ಇಡೀ ಮನೆಯ ಪ್ಲಾನ್ ಮಾಡಿಸುವುದು ಅತ್ಯಗತ್ಯ.
Related Articles
Advertisement
ಅಲ್ಲೇ ಕೂಡುವುದು ಹಾಗೂ ಊಟೋಪಚಾರಕ್ಕೆ ಬಳಸಲು ಸಾಕು ಎಂದಿದ್ದದ್ದು ನಂತರ ಒಂದು ಪ್ರತ್ಯೇಕ ಡೈನಿಂಗ್ ಇದ್ದರೆ ಉತ್ತಮವಾಗಿತ್ತು ಎಂದೆನಿಸಬಹುದು. ಆಗ ಹಾಲ್‌ಗೆ ಸೇರಿದಂತೆ ಒಂದು ಕೋಣೆಯನ್ನು ಕಟ್ಟಿಕೊಂಡು ಊಟದ ಮನೆಯಂತೆ ಉಪಯೋಗಿಸಲು ಸಾಧ್ಯವಿರುವಂತೆ ಮೊದಲೇ ವಿನ್ಯಾಸ ಮಾಡಿಕೊಂಡಿದ್ದರೆ ಉತ್ತಮ.
ಅಡಿಷನ್ ಮಾಡುವುದು ಹೇಗೆ?: ತಾಂತ್ರಿಕವಾಗಿ ಯಾವುದಾದರೂ ಕಟ್ಟಡವನ್ನು ಎಕ್ಸ್‌ಟೆಂಡ್ ಮಾಡಬೇಕೆಂದರೆ, ಈಗಿರುವ ಗೋಡೆ, ಪಾಯ, ಮುಖ್ಯವಾಗಿ ಸೂರು ಒಂದಕ್ಕೊಂದು ಬೆಸೆದುಕೊಳ್ಳುವುದು ಅತ್ಯಗತ್ಯ. ಹಾಗಾಗಿ ಸೂರಿನಲ್ಲಿ ಕಂಬಿ ಬಿಟ್ಟುಕೊಳ್ಳಬೇಕಾಗಬಹುದು. ಆದರೆ ಹೀಗೆ ಕಂಬಿ ಬಿಟ್ಟರೆ ನಾವು ಮನೆಯನ್ನು ಹಿರಿದು ಮಾಡುವವರೆಗೂ ಕಟ್ಟುವ ಕ್ರಿಯೆ ಮುಗಿದೇ ಇಲ್ಲವೇನೋ ಎಂಬಂತೆ ಇರುತ್ತದೆ.
ಹೀಗಾಗುವುದನ್ನು ತಡೆಯಲು, ಸೂರಿನ ಕಂಬಿಗಳನ್ನು ಪ್ಯಾರಾಪೆಟ್‌ನಂತೆ ಮೇಲಕ್ಕೆ ಬಗ್ಗಿಸಿ, ಮೆಶ್ ಗೋಡೆ ಕಟ್ಟಿಕೊಳ್ಳಬಹುದು. ನಮಗೆ ಬೇಕಾದಾಗ, ಈ ಕಂಬಿಗಳನ್ನು ಬಿಡಿಸಿ, ಸೂರಿಗೆ ಸೇರಿಸಿಕೊಳ್ಳಬಹುದು. ಅದೇ ರೀತಿಯಲ್ಲಿ ಗೋಡೆಗಳಿಗೆ ವಿನ್ಯಾಸ ಮಾಡಿರುವಂತೆ ಕೆಲವೊಂದು ಕಡೆ, ಮುಖ್ಯವಾಗಿ ಪ್ಲಿಂತ್ ಹಾಗೂ ಲಿಂಟಲ್ ಮಟ್ಟದಲ್ಲಿ ಕಂಬಿಗಳನ್ನು ಕಾಂಕ್ರಿಟ್‌ನಿಂದ ಮುಚ್ಚಿ, ಒಂದು ಅಡಿಯಷ್ಟು ಹೊರಚಾಚಿದಂತೆ ಮಾಡಿ, ಅದನ್ನು ಸಣ್ಣ ಪೆರಗೋಲ ನಂತೆಯೂ ಬಳಸಬಹುದು.
ಸಂದಿಗಳ ಬಗ್ಗೆ ಎಚ್ಚರ: ಯಾವುದೇ ಕಟ್ಟಡ “ಸೆಟಲ್’ ಅಂದರೆ ತನ್ನ ಬಾರಕ್ಕೆ ಸರಿಸಮನಾಗಿ ಮಣ್ಣಿನ ಮೇಲುಮುಖದ ಒತ್ತಡಕ್ಕೆ ಹೊಂದಿಕೊಳ್ಳಲು ಕೆಲವಾರು ವರ್ಷಗಳು ಬೇಕಾಗುತ್ತದೆ. ಹಾಗಾಗಿ ನಾವು ಹೊಸದಾಗಿ ಕಟ್ಟಿದ ಭಾಗವೂ ಒಂದೆರಡು ವರ್ಷ ಒಂದೆರಡು ಮಿಲಿಮೀಟರ್ ಕೆಳಗಿಳಿಯುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಈ ಸೆಟಲ್‌ಮೆಂಟ್ ಮೂಲಕವೇ ಸಣ್ಣ ಬಿರುಕುಗಳು ಬಿಟ್ಟು ಜಾಯಿಂಟ್‌ಗಳಲ್ಲಿ ಸೋರುವ ಸಾಧ್ಯತೆಗಳು ಇರುತ್ತದೆ.
ಆದುದರಿಂದ, ನಾವು ಈ ಹೊಂದಾಣಿಕೆಯ ಬಿರುಕುಗಳನ್ನು ಗಮನಿಸಿ, ಅವು ಕೂದಲೆಳೆಯಷ್ಟು ದಪ್ಪನಾಗಿ ಬೆಳೆದರೂ ಅದಕ್ಕೆ ಸೂಕ್ತ ಫಿಲ್ಲಿಂಗ್ -ಸಿಮೆಂಟ್ ಇಲ್ಲವೇ ರಾಸಾಯನಿಕ ಬಳಸಿ ತುಂಬುವುದು ಅತ್ಯಗತ್ಯ. ಬಿರುಕಿನ ತೊಂದರೆ ಸೂರಿನಲ್ಲಿಯೇ ಹೆಚ್ಚಾಗುವ ಕಾರಣ, ಇಲ್ಲಿ ವಿಶೇವಾಗಿ ಕಾಳಜಿವಹಿಸಬೇಕಾಗುತ್ತದೆ. ನಾವು ಮಾಡುವ ಮಾಮೂಲಿ ನೀರು ನಿರೋಧಕ ಪದರದ ಮೇಲೆ ಹೆಚ್ಚುವರಿಯಾಗಿ ಒಂದು ಪದರ ಜೇಡಿ ಮಣ್ಣಿನ ಸುಟ್ಟ ಬಿಲ್ಲೇಕಲ್ಲುಗಳನ್ನು ಹಾಕುವುದರಿಂದಲೂ ಬಿರುಕುಗಳಿಂದ ನೀರು ಸೋರುವುದನ್ನು ತಡೆಯಬಹುದು.
ನಾವು ಇಡೀ ಮನೆಗೆ ಇಲ್ಲ ಎಕ್ಸ್‌ಟೆಂಡ್ ಮಾಡಿದ ಭಾಗಕ್ಕೆ ಈ ಕ್ಲೇ ಟೈಲ್ಸ್ ಹಾಕಲು ಇಚ್ಛಿಸದಿದ್ದರೆ, ಕಡೇಪಕ್ಷ ಒಂದು ಸಾಲು ಟೈಲ್ಸ್ ಹಾಕಿದರೂ ನಡೆಯುತ್ತದೆ. ಆದರೆ, ಹೀಗೆ ಹಾಕುವ ಸಾಲು, ನೀರು ಹರಿದು ಹೋಗುವ ಕಣಿವೆಯಲ್ಲಿ ಬರಬಾರದು. ಹಾಗೇನಾದರೂ ಬಂದರೆ, ಮಳೆ ನೀರು ಸರಾಗವಾಗಿ ಸೂರಿನ ಮೇಲೆ ಹರಿದು ಹೋಗಲು ತೊಂದರೆಯಾಗುತ್ತದೆ.
ಕಿಟಕಿ ಬಾಗಿಲಿನ ಲೆಕ್ಕಾಚಾರ: ಹಳೆಯ ಭಾಗ ಹಾಗೂ ಹೊಸಭಾಗ ಒಂದಕ್ಕೊಂದು ಹೊಂದಿಕೊಂಡು ಹೋಗುವಂತೆ ಮಾಡಲು ಅದೇ ವಸ್ತು ಹಾಗೂ ವಿನ್ಯಾಸವನ್ನು ಬಳಸಬಹುದು. ಆದರೆ ನಮಗೇನಾದರೂ ಕಾಂಟ್ರಾಸ್ಟ್ ಬೇಕು ಎಂದಿದ್ದರೆ, ಇಲ್ಲವೇ ಹಳೆಯ ಮನೆಯಲ್ಲಿ ಮರದ ಕಿಟಕಿ ಬಳಸಿದ್ದರೂ, ಈಗ ಮರ ದುಬಾರಿ, ಅಲ್ಯೂಮಿನಿಯಮ್ ಕಿಟಕಿ ಬಳಸಬೇಕು ಎಂದಿದ್ದರೆ, ಈ ರೀತಿಯ ವಿಭಿನ್ನ ವಸ್ತುಗಳು ಒಂದಕ್ಕೊಂದು ಬೆಸೆದುಕೊಳ್ಳುವಂತೆ ಎಲಿವೇಷನ್ ಇತರೆ ಪರಿಕರಗಳು ಮ್ಯಾಚ್ ಆಗುವಂತೆ ನೋಡಿಕೊಳ್ಳಿ. ಪ್ಯಾರಾಪೆಟ್, ಸಜ್ಜಾ ಇತರೆ ವಿನ್ಯಾಸಗಳು ಹಳೆಯದರಲ್ಲಿ ಹಾಗೂ ಹೊಸದರಲ್ಲಿ ಇರುವಂತಿದ್ದರೆ, ಒಂದೆರಡು ಬದಲಾದರೂ, ಇತರೆ ರೀತಿಯಲ್ಲಿ ಒಂದೇ ಆಗಿರುವುದರಿಂದ, ನಮಗೆ ಹೆಚ್ಚು ವ್ಯತ್ಯಾಸ ಗೊತ್ತಾಗುವುದಿಲ್ಲ.
ಹೆಚ್ಚಿನ ಮಾಹಿತಿಗೆ: 98441 32826
* ಆರ್ಕಿಟೆಕ್ಟ್ ಕೆ. ಜಯರಾಮ್