2020ಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷವೆಂದಾಕ್ಷಣ ಸಹಜವಾಗಿಯೇ ಅನೇಕರು ತಮ್ಮ ಬದುಕಲ್ಲಿ ಹೊಸತನವನ್ನು ಕಾಣವಲು ಬಯಸುತ್ತಾರೆ. ನ್ಯೂ ಇಯರ್ ರೆಸಲ್ಯೂಷನ್ ಎನ್ನುವ ಹೆಸರಲ್ಲಿ ತಾವು ಈ ವರ್ಷದಲ್ಲಿ ತಮ್ಮ ಜೀವನದಲ್ಲಿ ತರಲು ಬಯಸುವ ಬದಲಾವಣೆಗಳ ಕುರಿತು ಸಂಕಲ್ಪ ಮಾಡುತ್ತಾರೆ. ಬದಲಾವಣೆಗೆ ಎಲ್ಲಾ ದಿನಗಳೂ ಸೂಕ್ತವೇ, ಹಾಗೆಯೇ ಜನವರಿ 1ರಿಂದಲೇ ಬದುಕು ಬದಲಿಸಿಕೊಳ್ಳುತ್ತೇನೆ ಎಂದು ನಿರ್ಧರಿಸುವುದೂ ಒಳ್ಳೆಯದೇ. ಕೆಲವರು ತಮ್ಮ ಸಂಕಲ್ಪಗಳನ್ನು ಈಡೇರಿಸಿಕೊಳ್ಳಲು ಸಫಲರಾದರೆ, ಉಳಿದವರು ಆ ಪ್ರಯತ್ನವನ್ನೇ ಬಿಟ್ಟು ಕೈಚೆಲ್ಲುವುದು ಅಥವಾ ವಿಫಲವಾಗುವುದುಂಟು.
ಹಾಗೆಂದು, ಬದುಕು ಬದಲಾಗಲು ಸಾಧ್ಯವೇ ಇಲ್ಲ ಎಂಬ ನಿರಾಶಾವಾದಿಗಳಾಗುವುದು ಖಂಡಿತ ಬೇಡ. ಮುಖ್ಯವಾಗಿ ಈ ವರ್ಷದಲ್ಲಿ ನಮ್ಮ ಬದುಕು ಹೇಗಿರುತ್ತದೋ ಎಂಬ ಭಯ-ಕುತೂಹಲಕ್ಕಿಂತ, ಹೇಗಿರಬೇಕು ಎಂಬ ನಿಶ್ಚಯ ಮುಖ್ಯವಾದಾಗ ಮಾತ್ರ ಬದುಕು ಬದಲಾಗುತ್ತದೆ.
ಸಂಯಮ, ಸಹನೆ, ಸಮಯ ಪಾಲನೆ, ಸಂಬಂಧಗಳ ವೃದ್ಧಿ, ಸಹಬಾಳ್ವೆಗೆ ಆದ್ಯತೆ ಕೊಡಲಾರಂಭಿಸಿ. ನಿಮ್ಮ ಮತ್ತು ಮನೆಯವರ ದೇಹಾರೋಗ್ಯಕ್ಕೆ ಕೊಡುವಷ್ಟೇ ಗಮನವನ್ನು ಮಾನಸಿಕ ಆರೋಗ್ಯಕ್ಕೂ ಕೊಡಿ. ಮನೆಯವರೊಂದಿಗೆ ಹೆಚ್ಚು ಸಮಯ ಕಳೆಯಿರಿ, ಹೊಸ ಜಾಗಗಳಿಗೆ ಸುತ್ತಾಡಿ, ಪುಸ್ತಕಗಳನ್ನು ಓದಿ, ಹೊಸ ಸ್ನೇಹಿತರನ್ನು ಸಂಪಾದಿಸಿ, ಸಾಮಾಜಿಕ ಮಾಧ್ಯಮಗಳಿಂದ ಆದಷ್ಟೂ ದೂರವಿರಿ, ನಿಮ್ಮ ಬಗ್ಗೆ ನೀವು ಕಾಳಜಿ ಮಾಡಿ ಕೊಳ್ಳಿ(ಇದು ಸ್ವಾರ್ಥವಂತೂ ಖಂಡಿತ ಅಲ್ಲ), ಹಣ ಉಳಿತಾಯ ಮಾಡಿ. ನನ್ನ ಹಣೆಬರಹವೇ ಇಷ್ಟು ಎಂಬ ಕೀಳರಿಮೆಯು ನಿಮ್ಮನ್ನು ಮತ್ತಷ್ಟು ಕುಬjರಾಗಿಸುತ್ತಲೇ ಹೋಗುತ್ತದೆ. ಹೀಗಾಗಿ, ಕೀಳರಿಮೆಯ ಸಂಕೋಲೆಗಳನ್ನು ಕಿತ್ತೆಸೆದು ಮುನ್ನುಗ್ಗಿ. ನೀವು ನೆಮ್ಮದಿಯಿಂದ, ಸಂತೋಷದಿಂದ ಇದ್ದಾಗ ಮಾತ್ರವೇ ಅಲ್ಲವೇ ಸುತ್ತಲಿರುವವರನ್ನೂ ನೆಮ್ಮದಿಯಿಂದ ಇಡಬಲ್ಲಿರಿ, ಸಂತೋಷವನ್ನು ಹಂಚಬಲ್ಲಿರಿ?
ಕಳೆದ ಒಂದು ದಶಕದಲ್ಲಿ ಆದ ಸಾಮಾಜಿಕ ಮಾಧ್ಯಮ ಕ್ರಾಂತಿಯಿಂದಾಗಿ ಇಂದು ನಾವು ಬದುಕುವ- ಯೋಚಿಸುವ ರೀತಿಯೇ ಬದಲಾಗಿದೆ. ನಿರಂತರ ಮಾಹಿತಿಯ ಪ್ರವಾಹವು ಸಾಗರೋಪಾದಿಯಲ್ಲಿ ನಮ್ಮನ್ನು ಬಂದಪ್ಪಳಿಸುತ್ತಲೇ ಇದೆ. ದೇಹಕ್ಕೆ ಹೇಗೆ ಹಸಿವು ಇರುತ್ತದೋ, ಅದೇ ರೀತಿಯಲ್ಲೇ ಮನಸ್ಸಿಗೂ “ಮಾಹಿತಿ’ಯ ಹಸಿವು ಇದ್ದೇ ಇರುತ್ತದೆ. ಹಾಗೆಂದು, ಅನವಶ್ಯಕ ಮಾಹಿತಿಯನ್ನು-ಸುದ್ದಿಗಳನ್ನು ಎಡೆಬಿಡದೆ ಜಂಕ್ ಫುಡ್‌ಗಳ ರೀತಿಯಲ್ಲಿ ಸೇವಿಸಿದರೆ, ನಮ್ಮ ಮನಸ್ಥಿತಿ ಮತ್ತಷ್ಟು ಹದಗೆಡುತ್ತದಷ್ಟೆ. ಯಾವ ಮಾಹಿತಿಯು ನಿಮ್ಮ ಬೆಳವಣಿಗೆಗೆ, ಸುಖ-ಶಾಂತಿಗೆ ಪೂರಕವಾಗಬಲ್ಲದೋ ಅದನ್ನಷ್ಟೇ ಸೇವಿಸಿ. ಜಗತ್ತು ಮುಂದೋಡುತ್ತಿದೆ ನಾವು ಹಿಂದುಳಿದುಬಿಡುತ್ತೇವೆ ಎಂಬ ಅನವಶ್ಯಕ ಭಯಕ್ಕೆ ಬಿದ್ದು ಹುಚ್ಚರಂತೆ ಅದರೊಟ್ಟಿಗೆ ಓಡುವುದು ಬೇಡ. ನಿಲ್ಲಿ, ದಣಿವಾರಿಸಿಕೊಳ್ಳಿ. ನೀವು ಮಾನಸಿಕವಾಗಿ-ದೈಹಿಕವಾಗಿ ಸುಸ್ಥಿತಿಯಲ್ಲಿರುವುದು ಬಹಳ ಮುಖ್ಯ. ಲಾಗಿನ್ ಆಗುವುದಕ್ಕಿಂತ, ಲಾಗ್ ಔಟ್ ಆಗುವುದು ಈಗಿನ ಅಗತ್ಯ ಎನ್ನುವುದನ್ನು ಮರೆಯದಿರಿ. ಹೊಸ ವರ್ಷದ ಶುಭಾಶಯಗಳು. ನಿಮ್ಮ ಸಂಕಲ್ಪಗಳೆಲ್ಲ ಈಡೇರಲಿ.