ಆಳಂದ: ಅಸಮಾನತೆಯಿಂದ ಕೂಡಿದ ಸ್ವಾತಂತ್ರ್ಯ ಭಾರತದಲ್ಲಿ ಎಲ್ಲ ರಂಗದಲ್ಲೂ ಸಮಾನತೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಯಬೇಕಾಗಿದೆ ಎಂದು ಶಾಸಕ ಬಿ.ಆರ್.ಪಾಟೀಲ ಹೇಳಿದರು. ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಮಂಗಳವಾರ ತಾಲೂಕು ಆಡಳಿತ ಏರ್ಪಡಿಸಿದ್ದ 71ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶ ಸ್ವಾತಂತ್ರ್ಯವಾದ ಮೇಲೆ ವಿಜ್ಞಾನ, ತಂತ್ರಜ್ಞಾನ ಆರ್ಥಿಕ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಹೀಗೆ ಸಾಧನೆ ಸಾಕಷ್ಟಾಗಿದ್ದರೂ ಸಾಧಿ ಸಬೇಕಾಗಿರುವುದು ಇನ್ನೂ ಬಹಳಷ್ಟಿದೆ ಎಂದರು. ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ, ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ, ಉಪಾಧ್ಯಕ್ಷ ಅಜಗರ ಅಲಿ ಹವಾಲ್ದಾರ, ಡಿಎಸ್‌ಪಿ ಚೌಧರಿ, ಎಪಿಎಂಸಿ ಅಧ್ಯಕ್ಷ ಶರಣು ಭೂಸನೂರ, ಕೆಎಂಎಫ್ ನಿರ್ದೇಶಕ ಚಂದ್ರಕಾಂತ ಭೂಸನೂರ ಕಡಗಂಚಿ, ಶಿವುಪುತ್ರ ಪಾಟೀಲ, ಅಬ್ದುಲ್ ಸಲಾಂ ಸಗರಿ, ಗ್ರೇಡ್-2 ತಹಶೀಲ್ದಾರ
ಬಿ.ಜಿ. ಕುದರಿ, ತಾಪಂ ಇಒ ಡಾ| ಸಂಜಯ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿ ಕಾರಿ ಗುರಣ್ಣಾ ಗುಂಡಗುರತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸವರಾಜ ಪಾಟೀಲ ಹಾಜರಿದ್ದರು. ಪ್ರಲ್ಹಾದ ಶಿಂಧೆ ನಿರೂಪಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಪಡೆದ ಸರ್ಕಾರಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಕೊಡಮಾಡುವ ಲ್ಯಾಪ್ ಟಾಪ್‌ನ್ನು ಶಾಸಕರು ವಿತರಿಸಿದರು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಾಫರ್ ಅನ್ಸಾರಿ ವಂದಿಸಿದರು. 19ರಂದು ಪರಿಸರ ಆಂದೋಲನ:
ಪಟ್ಟಣದ ಜೂನಿಯರ್ ಕಾಲೇಜು ಮೃದಾನದಲ್ಲಿ ಆ.19ರಂದು ಐದು ಸಾವಿರ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಸಿಗಳನ್ನು ವಿತರಿಸಿ ಪರಿಸರ ಸಂರಕ್ಷಣೆ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ಬಿ.ಆರ್. ಪಾಟೀಲ ಇದೇ ಸಂದರ್ಭದಲ್ಲಿ ತಿಳಿಸಿದರು.