Advertisement

ಒನಕೆ ಓಬವ್ವ ಸ್ಮಾರಕ ನಿರ್ಮಾಣವಾಗಲಿ

04:02 PM Nov 12, 2018 | |

ಚಿತ್ರದುರ್ಗ: ದುರ್ಗದ ಕಲ್ಲಿನ ಕೋಟೆಯಲ್ಲಿನ ಓಬವ್ವ ಕಿಂಡಿ ಅಜರಾಮರವಾಗಲು ವೀರವನಿತೆ ಒನಕೆ ಓಬವ್ವ ಕಾರಣ ಎಂದು ವೀರವನಿತೆ ಒನಕೆ ಓಬವ್ವ ಸಂರಕ್ಷಣಾ ಸಮಿತಿ ಸದಸ್ಯೆ ಹಾಗೂ ಕಾನೂನು ವಿದ್ಯಾರ್ಥಿನಿ ಎನ್‌.ಬಿ. ಭಾರ್ಗವಿ ದ್ರಾವಿಡ್‌ ಹೇಳಿದರು.

Advertisement

ಇಲ್ಲಿನ ಕಲ್ಲಿನ ಕೋಟೆಯಲ್ಲಿರುವ ವೀರವನಿತೆ ಒನಕೆ ಓಬವ್ವ ಸಮಾಧಿಯಬಳಿ ಭಾನುವಾರ ಹಮ್ಮಿಕೊಂಡಿದ್ದ ಓಬವ್ವ ಜಯಂತ್ಯುತ್ಸವ ಹಾಗೂ ಸಮಾಧಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿತ್ರದುರ್ಗದ ಚರಿತ್ರೆ, ಇತಿಹಾಸವನ್ನು ವಿಶ್ವವಿಖ್ಯಾತಗೊಳಿಸಿದ ಕೀರ್ತಿ ಓಬವ್ವಗೆ ಸಲ್ಲುತ್ತದೆ. ಸಮಾಧಿ ದುರಸ್ತಿ ಹಾಗೂ ನಾಮಫಲಕ ಅಳವಡಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಆದರೂ ಆ ಕೆಲಸ ಆಗಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಓಬವ್ವ ಸ್ಮಾರಕ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಚಿತ್ರದುರ್ಗದಿಂದ ಸಾವಿರಾರು ಮಹಿಳೆಯರು ಒನಕೆ ಹಿಡಿದು “ವಿಧಾನಸೌಧ
ಚಲೋ’ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರ ಅನೇಕ ಜಯಂತಿಗಳನ್ನು ಆಚರಿಸುತ್ತಿದೆ. ಆದರೆ ಒನಕೆ ಓಬವ್ವ ಜಯಂತಿ ಆಚರಿಸುತ್ತಿಲ್ಲ. ಜಿಲ್ಲಾ ಪೊಲೀಸ್‌
ಓಬವ್ವ ಪಡೆ ಹೆಸರಿನಲ್ಲಿ ಮಹಿಳೆಯರ ರಕ್ಷಣೆ ಮಾಡುತ್ತಿರುವುದು ಸಂತಸದ ವಿಷಯ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಮಾಲತೇಶ್‌ ಅರಸ್‌ ಮಾತನಾಡಿ, ಸರ್ಕಾರ ವೀರವನಿತೆ ಒನಕೆ ಓಬವ್ವ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಇದರಿಂದ ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. 

Advertisement

ಅಲ್ಲದೆ ಸೂಕ್ತ ಸಂರಕ್ಷಣೆ ಮಾಡುವ ಕೆಲಸವೂ ಆಗಬೇಕು. ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಜಾತ್ಯತೀತವಾಗಿ
ಆಚರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮದಕರಿ ನಾಯಕ, ಒನಕೆ ಓಬವ್ವ ಸೇರಿದಂತೆ ಮತ್ತಿತರ ಸಾಧಕರ ಅಧ್ಯಯನ ಮತ್ತು ಸಂಶೋಧನೆ ಮಾಡಲು ಅಧ್ಯಯನ ಕೇಂದ್ರ ಆರಂಭವಾಗಬೇಕು. ಸರ್ಕಾರ ಚಿತ್ರದುರ್ಗದ ಕೋಟೆ ಅಭಿವೃದ್ಧಿಪಡಿಸುವ ಜತೆಗೆ ಸಮಾಧಿಯನ್ನು ಸ್ಮಾರಕವಾಗಿಸಿ ಎಲ್ಲರಿಗೂ ತಿಳಿಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮ ಆಯೋಜಕ ಎಚ್‌.ಡಿ. ನವೀನ್‌ ಮಾತನಾಡಿ, ಕೋಟೆ ಮೇಲ್ಭಾಗದಲ್ಲಿ ಓಬವ್ವ ಸ್ಮಾರಕ ನಿರ್ಮಿಸಿ ವಿವಿಧ
ಸಂಘಟನೆಗಳ ಆಶ್ರಯಲ್ಲಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ. ಜಿಲ್ಲಾಧಿಕಾರಿ ಕಚೇರಿ ಸಮೀಪ ಇರುವ ಓಬವ್ವಳ ಪುತ್ಥಳಿ ಎದುರು ಸಮಾರಂಭ ಆಯೋಜಿಸೋಣ ಎಂದರು.

ಒನಕೆ ಓಬವ್ವಳ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸಿಹಿ ವಿತರಿಸಲಾಯಿತು. ನಂತರ ಅಭಿಮಾನಿಗಳು ರಾಜವೀರ
ಮದಕರಿ ನಾಯಕ ಹಾಗೂ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿಯ ಒನಕೆ ಓಬವ್ವ ವೃತ್ತದಲ್ಲಿರುವ ಓಬವ್ವ ಪುತ್ಥಳಿಯನ್ನು ಸ್ವತ್ಛಗೊಳಿಸಿ ಮಾಲಾರ್ಪಣೆ ಮಾಡಲಾಯಿತು. ವೀರವನಿತೆ ಓಬವ್ವ ಸಮಿತಿ ಮುಖಂಡರಾದ ಭೂತೇಶ್‌, ಕೃಷ್ಣಮೂರ್ತಿ, ಛಲವಾದಿ ಮಹಾಸಭಾ ಸಮಿತಿ ಮುಖಂಡ ಅಣ್ಣಪ್ಪ ಸ್ವಾಮಿ, ಶ್ರೀನಿವಾಸಬಾಬು, ಧರ್ಮ ಜಾಗೃತಿ ಸಮಿತಿಯ ಪ್ರಸನ್ನ, ಹನುಮಂತರಾಯ, ನಿಷಾ, ನೀತು, ಕಾವ್ಯ, ಓಬವ್ವ ಯುವಕ ಸಂಘದ ಮುರಳೀಧರ,
ಶಿವಕುಮಾರ್‌ ಮತ್ತಿತರರು ಇದ್ದರು. 

ಶತ್ರುಗಳಿಂದ ಕೋಟೆ ರಕ್ಷಣೆ ಮಾಡಿದ ಓಬವ್ವಳ ಸಮಾಧಿ ಕೋಟೆಯಲ್ಲಿ ಎಲ್ಲಿದೆ ಎಂದು ಹುಡುಕಬೇಕಾದ ದುಸ್ಥಿತಿ ಬಂದಿದೆ.
ವೀರ ಮರಣ ಹೊಂದಿದ ಸ್ಥಳದಲ್ಲಿ ಒನಕೆ ಓಬವ್ವ ಸಮಾಧಿ ಎಂದು ನಾಮಫಲಕ ಹಾಕಲಿ. ಅಧಿಕಾರಿಗಳು ಈ ಕೆಲಸ ಮಾಡದಿದ್ದರೆ ಅಭಿಮಾನಿಗಳಾದ ನಾವೇ ಅದನ್ನು ಮಾಡುತ್ತೇವೆ.
 ಗೋವರ್ಧನ್‌ ಪಿಲಾಲಿ, ನ್ಯಾಯವಾದಿ.

Advertisement

Udayavani is now on Telegram. Click here to join our channel and stay updated with the latest news.

Next