Advertisement
ಮೊಬೈಲ್ ಫೋನು ಇಂದು ಬಹುತೇಕ ಜನರ ಅವಿಭಾಜ್ಯ ಅಂಗವಾಗಿದೆ. ಪ್ರಾಥಮಿಕವಾಗಿ ಕರೆ ಮಾಡಿ ಮಾತನಾಡಲು ಇದ್ದ ಮೊಬೈಲ್ ಫೋನು ಈಗ ಕರೆಗಿಂತ ಹೆಚ್ಚಾಗಿ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಈ ದಿನಗಳಲ್ಲಿ ಯಾರಾದರೂ ಕರೆ ಮಾಡಿದರೆ ಸ್ವೀಕರಿಸಿ ಅವರಿಗೆ ಉತ್ತರ ನೀಡುವುದಕ್ಕೂ ನಮಗೆ ಸಮಯ ಸಾಲದಂತಾಗಿದೆ. ಮೊಬೈಲ್ ನಲ್ಲಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ, ಅವರು ಬ್ಯುಸಿಯಿದ್ದಾಗ ಪರವಾಗಿಲ್ಲ, ಬಿಡುವಾದ ನಂತರವಾದರೂ ವಾಪಸ್ ಕರೆ ಮಾಡುವುದಿಲ್ಲ ಎಂಬ ದೂರುಗಳನ್ನು ಕೇಳುತ್ತಲೇ ಇರುತ್ತೇವೆ.
Related Articles
Advertisement
ಇದು ಕರೆ ಸ್ವೀಕರಿಸುವವರ ವಿಷಯವಾದರೆ, ಕರೆ ಮಾಡುವವರಿಗೂ ಕೆಲವು ಅಶಿಸ್ತುಗಳಿರುತ್ತವೆ. ಆ ಕಡೆ ಕರೆ ಸ್ವೀಕರಿಸುವವರು ಯಾವ ಪರಿಸ್ಥಿತಿಯಲ್ಲಿರುತ್ತಾರೆ ಎಂಬ ಬಗ್ಗೆ ಚಿಂತಿಸುವುದೇ ಇಲ್ಲ. ಇವರು ಕರೆ ಮಾಡಿದ ವ್ಯಕ್ತಿ ಕೆಲಸದಲ್ಲಿ ಅತ್ಯಂತ ಬ್ಯುಸಿಯಾಗಿರುತ್ತಾನೆ. ಈ ಕಡೆ ಇರುವವರು ಅತ್ಯಂತ ಆರಾಮವಾಗಿ ಕುಳಿತಿರುತ್ತಾರೆ. ತಮ್ಮಂತೆ ಆತನೂ ಆರಾಮಾಗಿ ಕುಳಿತಿರುತ್ತಾನೆ ಎಂಬ ಭಾವದಿಂದ, ” ಏನಯ್ನಾ ಸಮಾಚಾರ? ಊಟ ಆಯ್ತಾ? ತಿಂಡಿ ಆಯ್ತಾ?’ ಅಂತ ಶುರುಮಾಡಿ, ತಮ್ಮ ಪ್ರವರಗಳನ್ನು ಒದರಲು ಶುರುಮಾಡುತ್ತಾರೆ. ಆ ಕಡೆಯಿರುವವ ಕೆಲಸದ ಅವಸರದಲ್ಲಿರುತ್ತಾನೆ. ತನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ಸುಮ್ಮನೆ ಮಾತನಾಡುತ್ತಿದ್ದಾನಲ್ಲ ಎಂದು ಉರಿದು ಹೋಗುತ್ತದೆ. ಕರೆ ಕಟ್ ಮಾಡಿದರೆ ಬೇಜಾರು ಮಾಡಿಕೊಳ್ಳುತ್ತಾರೆ ಎಂಬ ಸಂದಿಗ್ಧತೆ ಉಂಟಾಗುತ್ತದೆ. ಹಾಗಾಗಿ ಯಾರಿಗೇ ಆಗಲಿ, ಕರೆ ಮಾಡಿದಾಗ ಈಗ ಫ್ರೀ ಇದ್ದೀರಾ? ಐದು ನಿಮಿಷ ಮಾತನಾಡಬಹುದೇ? ಅಂತ ಹೇಳಿ ಮುಂದುವರಿಯಿರಿ. ಅನವಶ್ಯಕವಾಗಿ ಕರೆ ಮಾಡಲು ಹೋಗಬೇಡಿ. ಇದರಿಂದ ನಿಮ್ಮ ಮತ್ತು ಅವರ ಸಮಯ ಹಾಳು.
ಇಲ್ಲಿ ಇನ್ನೊಂದು ವಿಷಯ ಪ್ರಸ್ತಾಪಿಸಬೇಕು. ಇಬ್ಬರು ಗೆಳೆಯರು ಆರಾಮಾಗಿ ಹರಟುತ್ತಿರುತ್ತೀರಿ. ಹರಟೆ ಹೊಡೆಯಬೇಡಿ ಎಂದು ಹೇಳುತ್ತಿಲ್ಲ. ಸಮಯವಿದ್ದರೆ ಎಷ್ಟಾದರೂ ಹರಟಿ. ಬೆಳಿಗ್ಗೆ ಏನು ತಿಂಡಿ? ಇಡ್ಲಿ ಎಷ್ಟು ತಿಂದೆ? ಎಂದು ಶುರುವಾದ ಹರಟೆ, ಮೋದಿ, ರಾಹುಲ್‌ಗಾಂಧಿಯಿಂದ ಹೊರಟು, ವಿರಾಟ್ ಕೊಹ್ಲಿ, ದೀಪಿಕಾ, ದಿಶಾ ಪಟಾಣಿ, ಶ್ರದ್ಧಾ ಕಪೂರ್ ಮೂಲಕ ಹಾದು ಫೇಸ್‌ಬುಕ್, ವಾಟ್ಸಪ್ ಇತ್ಯಾದಿಗಳತ್ತ ಹೊರಟು ಸಾಗುತ್ತಲೇ ಇರುತ್ತದೆ. ಅಂತಹ ಸಮಯದಲ್ಲಿ ಯಾರಾದರೂ ಪದೇ ಪದೇ ಕಾಲ್ ಮಾಡುತ್ತಿದ್ದರೆ, ಕಾಲ್ ವೇಟಿಂಗ್ ತೋರಿಸುತ್ತದೆ. ಆಗ ಗೆಳೆಯನಿಗೆ ಹೇಳಿ ಕರೆ ತುಂಡರಿಸಿ, ಪದೇ ಪದೇ ಕಾಲ್ ಮಾಡುತ್ತಿದ್ದವರನ್ನು ವಿಚಾರಿಸಿ. ಮುಖ್ಯವಾಗಿದ್ದರೆ ಮಾತಾಡಿ. ಅಮುಖ್ಯವಾಗಿದ್ದರೆ, ಅನಂತರ ಮಾತನಾಡುತ್ತೇನೆ ಎಂದು ಹೇಳಿ.
ಹೀಗೊಮ್ಮೆ ಚೆಕ್ ಮಾಡಿ…ಟಿಪ್ಸ್: ನಿಮ್ಮ ಮೊಬೈಲ್‌ನಲ್ಲಿ ಕಾಲ್ ವೇಟಿಂಗ್ ಆಪ್ಷನ್ ಆನ್ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಅದು ಆನ್ ಆಗಿರದಿದ್ದರೆ ಇನ್ನೊಂದು ಕರೆಯಲ್ಲಿದ್ದಾಗ, ಬೇರೊಬ್ಬರು ಕರೆ ಮಾಡಿದರೆ ಗೊತ್ತಾಗುವುದಿಲ್ಲ. ಆಗವರು ನನ್ನ ಕರೆ ಬಂದರೂ ನೀವು ನಂತರ ಕರೆ ಮಾಡಲಿಲ್ಲ ಎಂದು ಆಕ್ಷೇಪಿಸುತ್ತಾರೆ. ಕಾಲ್ ವೇಟಿಂಗ್ ಆನ್ ಮಾಡುವುದು ಹೀಗೆ. ಸೆಟ್ಟಿಂಗ್‌ಗೆ ಹೋಗಿ, ವೈರ್‌ಲೆಸ್ ಅಂಡ್ ನೆಟ್‌ವರ್ಕ್ ಆಯ್ಕೆ ಒತ್ತಿ, ಅನಂತರ ಕಾಲ್ ಸೆಟ್ಟಿಂಗ್‌ಗೆ ಹೋಗಿ ಅದನ್ನು ಒತ್ತಿ, ನಂತರ ಅದರಲ್ಲಿ ಅಡಿಷನಲ್ ಸೆಟ್ಟಿಂಗ್ ಹೋಗಿ ಅದನ್ನು ಒತ್ತಿ, ಅಲ್ಲಿ ಕಾಲ್ ವೇಟಿಂಗ್ ಆನ್ ಅಗಿದೆಯಾ ಚೆಕ್ ಮಾಡಿ. ಆನ್ ಆಗಿರದಿದ್ದರೆ ಆನ್ ಮಾಡಿಕೊಳ್ಳಿ. – ಕೆ.ಎಸ್. ಬನಶಂಕರ ಆರಾಧ್ಯ