Advertisement

ಕನಡ ಭಾಷಾ ಸಂಗೋಪನೆ ಆಗಲಿ: ಮಲ್ಲೇಪುರಂ

04:13 PM Jun 06, 2017 | |

ಕಲಬುರಗಿ: ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಮಾನ್ಯತೆ ಸಿಕ್ಕಿದೆ ಎನ್ನುವುದನ್ನು ಬಿಟ್ಟರೆ ನಮಗೆ ಇನ್ನೂ ಭಾಷಾ ವಿಸ್ತಾರದ ಕಸುವು ಸಾಕಾರವಾಗಿಲ್ಲ. ಆ ನಿಟ್ಟಿನಲ್ಲಿ ಭಾಷಾ ಸಂಗೋಪನೆ ಆಗಬೇಕಿದೆ. ಇದಕ್ಕಾಗಿ ಅಧಿಕಾರ ವರ್ಗವೂ ಸೇರಿದಂತೆ ರಾಜಕಾರಣಿಗಳು, ಸಾರ್ವಜನಿಕರು ಒತ್ತಾಸೆಯಾಗಬೇಕು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ ಅಭಿಪ್ರಾಯಪಟ್ಟರು. 

Advertisement

ನಗರದ ಐಡಿಯಲ್‌ ಫೈಲ್‌ ಆರ್ಟ್‌ ಸಂಸ್ಥೆಯ ಅನಿಕೇತನ ಸಭಾಂಗಣದಲ್ಲಿ ಪ್ರೊ| ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆರನೇ ವರ್ಷದ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಸಂವಾದ ಸಮಾರಂಭದಲ್ಲಿ ಐವರು ಸಾಧಕರ ಪ್ರಶ್ನೆಗಳಿಗೆ ಉತ್ತರ ನೀಡಿ ಅವರು ಮಾತನಾಡಿದರು. 

ನಮ್ಮಲ್ಲಿ ಭಾಷೆ ಸಂಗೋಪನೆ ಬಗ್ಗೆ ಯಾರೂ ಹೇಳುತ್ತಿಲ್ಲ. ಮಾತೃಭಾಷೆ ಎಂಬುದು ಮೋಕ್ಷದ ಸಾಧನೆ ಎನ್ನುವಂತಾಗಬೇಕು. ಅದನ್ನು ಬಿಟ್ಟು ಕೇವಲ ಕಮರ್ಷಿಯಲ್‌ ಯತ್ನಗಳು ನಡೆದರೆ ಆ ಪ್ರಯತ್ನ ಪ್ರಾಣಘಾತುಕ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು. ನಮ್ಮಲ್ಲಿ ಸಮಗ್ರ ಕಲ್ಪನೆಯ ಅಥವಾ ಕೆಲಸದ ಕೊರತೆ ಇದೆ.

ಆದರೆ, ನಮ್ಮಲ್ಲಿ ಬಿಡಿಬಿಡಿಯಾಗಿ ನಾವು ಪ್ರಯತ್ನಗಳನ್ನು ಮಾಡಲು ಹೆಣಗುತ್ತಿದ್ದೇವೆ. ಆದರೆ, ಇಂತಹ ಪ್ರಯತ್ನಗಳು ಲಾಭದಾಯಕವಲ್ಲ ಎನ್ನುವುದು ಅರ್ಥ ಮಾಡಿಕೊಂಡು ಸಮಗ್ರ ಚಿಂತನೆಯಿಂದ ಆಯಾ ನೆಲದ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಎದ್ದು ನಿಲ್ಲಬೇಕು. ಇಂಗ್ಲಿಷ್‌ ಈಗ ವ್ಯವಹಾರಿಕ ಭಾಷೆ. 

ನಾಯಿಕೊಡೆಗಳಂತೆ ಹುಟ್ಟಿಕೊಳ್ಳುವ ಶಾಲೆಗಳಿಂದ ಮತ್ತು ಅದರ ಪರಿಸರದಿಂದ ಕೃತಕವಾದ ಸಮಾಜ ನಿರ್ಮಾಣವಾಗುತ್ತಿದೆ. ಇದು ಅಪಾಯಕಾರಿ ಎನ್ನುವುದನ್ನು ನಾವು ಅರ್ಥ ಮಾಡಿಕೊಂಡು ನಮ್ಮ ಭಾಷೆ ಮುನ್ನಡೆಸುವ ಹೊಣೆ ಹೊರಬೇಕು. ನಮ್ಮಲ್ಲಿ ಅತ್ಯುಗ್ರವಾದ ಅಭಿಮಾನದ ಕೊರತೆ ಇದೆ ಎಂದು ಹೇಳಿದರು. 

Advertisement

ಕಾರ್ಯಕ್ರಮ ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಇವತ್ತು ನಮ್ಮ ರಾಜಕಾರಣಿಗಳೇ ಸ್ವಂತ ಹೆಸರಿನಲ್ಲಿಯೇ ವೈಭವದ ಮತ್ತು ಇಂಗ್ಲಿಷ್‌ ಶಾಲೆಗಳನ್ನು ಆರಂಭಿಸಿ ಕನ್ನಡದ ಅವಸಾನಕ್ಕೆ ಯೋಗದಾನ ನೀಡಿದ್ದಾರೆ. 

ಯೂರೋಪ್‌ ಖಂಡದ ಪುಟ್ಟ ಪುಟ್ಟ ದೇಶಗಳು ತಮ್ಮ ತಮ್ಮ ಮಾತೃಭಾಷೆಯಲ್ಲಿಯೇ ತಂತ್ರಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರದಂತಹ ಕಷ್ಟದ ವಿಷಯ ಬೋಧಿಸುತ್ತವೆ. ಅದನ್ನು ನೋಡಿ ನಾವು ಕಲಿಯಬೇಕಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಕಾರ್ಯಕ್ರಮ ಸಂಯೋಜಕ ಪ್ರೊ| ಎಚ್‌.ಟಿ. ಪೋತೆ ಮತ್ತು ಅಂತಾರಾಷ್ಟ್ರೀಯ ಚಿತ್ರಕಲಾವಿದ ಡಾ| ವಿ.ಜಿ. ಅಂದಾನಿ ಮಾತನಾಡಿದರು.  

ಪ್ರಶಸ್ತಿ ಪ್ರದಾನ: ಡಾ| ನೀಲಗಿರಿ ತಳವಾರ ಅವರಿಗೆ ಜೀವಮಾನ ಸಾಧನೆಗಾಗಿ ಪ್ರೊ| ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ, ಡಾ| ಶಿವಾನಂದ ಕೆಳಗಿನಮನಿ ಅವರಿಗೆ ಬಿ. ಶ್ಯಾಮಸುಂದರ ಪುಸ್ತಕ ಬಹುಮಾನ (ಕನಕದಾಸರ ಕೀರ್ತನೆಗಳ ಸಾಂಸ್ಕೃತಿಕ ಅನನ್ಯತೆ), ನಾಗೇಶ ತಳವಾರ ಅವರಿಗೆ ಶರಣ ಉರಿಲಿಂಗ ಪೆದ್ದಿ ಪುಸ್ತಕ ಬಹುಮಾನ (ಅವ್ವ ಮತ್ತು ಸೈಕಲ್‌ ಕಥಾ ಸಂಕಲನ),

-ಪ್ರೇಮಾ ಹೂಗಾರ ಅವರಿಗೆ ರಮಾಬಾಯಿ ಅಂಬೇಡ್ಕರ್‌ ಪುಸ್ತಕ ಬಹುಮಾನ (ಗಜಲ್‌ ಸಂಕಲನ) ಹಾಗೂ ಡಾ| ಜಗನ್ನಾಥ ಸಿಂಧೆ ಅವರಿಗೆ ಜ್ಯೋತಿಬಾ ಫುಲೆ ಪುರಸ್ಕಾರ (ಸಾಮಾಜಿಕ ಹಾಗೂ ಸಾಹಿತ್ಯಿಕ ಸೇವೆ) ನೀಡಿ ಸನ್ಮಾನಿಸಲಾಯಿತು. ಡಾ| ಎಂ.ಬಿ.ಕಟ್ಟಿ ಸ್ವಾಗತಿಸಿದರು. ಡಾ| ವಸಂತ ನಾಸಿ ನಿರೂಪಿಸಿದರು. ರೇವಣಸಿದ್ದಪ್ಪ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next