ಮಾಗಡಿ: ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಬಹಳ ಮುಖ್ಯ ಎಂದು ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ. ಎಚ್.ಬಸವರಾಜು ಅಭಿಪ್ರಾಯಪಟ್ಟರು.
ಪಟ್ಟಣದ ಕಲ್ಯಾ ಗೇಟ್‌ನ ಬಿಕೆ ರಸ್ತೆ ಸಮೀಪದಲ್ಲಿರುವ ಕನ್ನಡನಾಡು ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸಂಘದ ಕಚೇರಿಯಲ್ಲಿ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾರ್ಮಿಕರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದೆ. ಕೋವಿಡ್ ಸಂಕಷ್ಟದಲ್ಲಿದ್ದ ಕಾರ್ಮಿಕರ ಕುಟುಂಬಕ್ಕೆ ಕಾರ್ಮಿಕ ಇಲಾಖೆ ಮೂಲಕ 4 ಸಾವಿರ ರೂ. ಮೊತ್ತದ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.
ಸರ್ಕಾರ ನೀಡಿದ ಕಿಟ್ ಮೇಲೆ ಜೆಡಿಎಸ್‌ನವರು ಲೇಬಲ್ ಬದಲಾಯಿಸಿ ತಮ್ಮ ಚಿತ್ರ ಹಾಕಿಸಿಕೊಂಡು ಹಂಚಿದ್ದಾರೆ. ಹಂಚುವ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ, ದುರ್ಬಳಕೆ ಸರಿಯಲ್ಲ. ಶಾಸಕರು ತಮ್ಮ ಸ್ವಂತ ಹಣದಿಂದ ಅಹಾರ ಕಿಟ್ ವಿತರಿಸಬೇಕಿತ್ತು ಎಂದು ಹೇಳಿದರು.
ಕಾರ್ಮಿಕರ ಸಂಘದಿಂದ ಸಭೆ: ಕಾರ್ಮಿಕರ ಕುಟುಂಬದ ನಿರ್ವಹಣೆಗೆ 5 ಸಾವಿರ ರೂ. ಸಹಾಯಧನ, ಮಕ್ಕಳ ಶೈಕ್ಷಣಿಕ ಪ್ರಗತಿಗೆ 2 ಲಕ್ಷ ರೂ. ವರೆಗೆ ಪ್ರೋತ್ಸಾಹ ಧನ, ಮಕ್ಕಳ ಮದುವೆಗೆ 50 ಸಾವಿರ ರೂ. ಸೇರಿದಂತೆ ಅನೇಕ ಸಲತ್ತುಗಳನ್ನು ನೀಡುವ ಮೂಲಕ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಪ್ರೋತ್ಸಾಹಿಸಲಾಗುತ್ತಿದೆ. ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಂಡು ಸಲತ್ತು ಪಡೆದುಕೊಳ್ಳಬೇಕು. ಈ ಸಂಬಂಧ ಕಾರ್ಮಿಕರ ಸಂಘ ಸಭೆ ನಡೆಸಿ ಜಾಗೃತಿಗೊಳಿಸಬೇಕು ಎಂದರು.
ಆಡಳಿತಕ್ಕೆ ಚುರುಕು: ಪಟ್ಟಣದ ಪುರಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನುಮೂರನೇ ಸ್ಥಾನದಲ್ಲಿ ಕೂರಿಸಿದ್ದಾರೆ. ಹೀಗಾಗಿ ನಾವು ವಿರೋಧ ಪಕ್ಷದಲ್ಲಿ ಕುಳಿತು ಆಡಳಿತಕ್ಕೆ ಎಚ್ಚರಿಕೆ ನೀಡುತ್ತಾ ಅಭಿವೃದ್ಧಿಗೆ ಸಹಕರಿಸುತ್ತೇವೆ. ಅವಕಾಶ ಸಿಕ್ಕರೆ, ಉಪಾಧ್ಯಕ್ಷ ಸ್ಥಾನಕ್ಕೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು. 6 ಸ್ಥಾನ ಬಿಜೆಪಿಗೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿಪುಟ್ಟಣ್ಣ ಜಯ ಸಾಧಿಸಲಿದ್ದು, 6 ವಿಧಾನ ಪರಿಷತ್, 2 ವಿಧಾನ ಸಭೆ ಉಪ ಚುನಾವಣೆ ಸೇರಿದಂತೆ ಒಟ್ಟು 6 ಸ್ಥಾನಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡ ನಾಡು ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಶಂಕರ್, ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಹುಚ್ಚಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎಂ.ಧನಂಜಯ, ಜಿಲ್ಲಾ ಕಾರ್ಯದರ್ಶಿ ರಾಜೇಶ್, ಯುವ ಮೋರ್ಚಾಧ್ಯಕ್ಷ ಶಂಕರ್, ಕಾರ್ಯ ದರ್ಶಿ ಎಂ.ಆರ್.ರಾಘವೇಂದ್ರ, ಆನಂದ್, ಟಿ.ಆರ್ .ದಯಾನಂದ್, ತಾ.ಒಬಿಸಿ ಅಧ್ಯಕ್ಷ ಮಾರಪ್ಪ, ಎಸ್ಸಿ, ಎಸ್ಟಿ ಅಧ್ಯಕ್ಷ ಶಶಿಧರ್, ಕುಮಾರ್, ಮೂರ್ತಿ, ಪುರಸಭಾ ಮಾಜಿ ಅಧ್ಯಕ್ಷ ರೂಪೇಶ್ ಕುಮಾರ್, ಜಯಕುಮಾರ್, ಜ್ಯೊತಿ ನಗರದ ಧನಂಜಯ, ರವಿಕುಮಾರ್ ಮತ್ತಿತರರು ಇದ್ದರು.