Advertisement

ರೈತರಿಗೆ ಬೆವರಿನ ಬದಲು ರಕ್ತ ಸುರಿಸುವ ದುಸ್ಥಿತಿ: ಕವಿತಾ

02:44 PM Mar 20, 2022 | Team Udayavani |

ಬಾಳೆಹೊನ್ನೂರು: ಮನೆಯಲ್ಲಿ ಅಕ್ಕಿ, ಬೇಳೆಯನ್ನು ಐದು ನಿಮಿಷಗಳಲ್ಲಿ ಬೇಯಿಸಬಹುದು. ಆದರೆ ಅದನ್ನು ಬೆಳೆಸಲು ರೈತರು ಬೆವರಿನ ಬದಲು ರಕ್ತ ಸುರಿಸುವ ಸ್ಥಿತಿ ಪ್ರಸ್ತುತ ನಮ್ಮ ಮುಂದಿದೆ ಎಂದು ರಾಯಚೂರಿನ ರಾಷ್ಟ್ರಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಅಭಿಪ್ರಾಯಪಟ್ಟರು.

Advertisement

ರಂಭಾಪುರಿ ಪೀಠದಲ್ಲಿ ನಡೆದ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಕೃಷಿ-ಸಂಸ್ಕೃತಿ ಗೋಷ್ಠಿಯ ಕೃಷಿ ಕ್ಷೇತ್ರದಲ್ಲಿ ‘ಮಹಿಳಾ ಸಬಲೀಕರಣ’ ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು. ಕೃಷಿ ಎಂಬ ಪದದಿಂದ ನಮ್ಮ ಬದುಕು ಸಾಗುತ್ತಿದೆ. ಆದರೆ ಕೃಷಿ ಕುಟುಂಬದವರ ಸ್ಥಿತಿ ಅವರಿಗೆ ಮಾತ್ರ ಅರ್ಥವಾಗುವ ಜೀವನ. ಕಂಪೆನಿಯ ನೆರಳಿನಲ್ಲಿ ಕುಳಿತು ಕೆಲಸ ನಿರ್ವಹಿಸುವವರಿಗೆ ಬದುಕಿನಲ್ಲಿ ನೆಮ್ಮದಿ ಇಲ್ಲ. ಆದರೆ ಬಿಸಿಲಲ್ಲಿ ಬೆಂದ ಒಕ್ಕಲಿಗರಿಗೆ ನೆಮ್ಮದಿ ಇದೆ. ಕೃಷಿ ಕುರಿತು ಮಹಿಳೆಯರು ಹೆಚ್ಚಿನ ಆಸಕ್ತಿ ವಹಿಸಬೇಕು. ಋತು ಆಧಾರಿತ ಬೆಳೆ ಬೆಳೆಸುವತ್ತ ಹೆಚ್ಚಿನ ಗಮನ ನೀಡಬೇಕು. ಜೀವನದಲ್ಲಿ ಎದ್ದು, ಬಿದ್ದಾಗ ಸುತ್ತಲಿನವರು ನಗುವುದು ಸಹಜ. ಆದರೆ ಬಿದ್ದವರು ಆತ್ಮವಿಶ್ವಾಸದಿಂದ ಮತ್ತೆ ಏಳಬೇಕು ಎಂದರು.

‘ಸಂಸ್ಕೃತಿ ಪೋಷಣೆಯಲ್ಲಿ ಮಹಿಳೆ’ ಎಂಬ ವಿಷಯದ ಕುರಿತು ಬೆಂಗಳೂರಿನ ಡಾ| ಎಚ್‌.ಎನ್‌. ಆರತಿ ಮಾತನಾಡಿ, ಮಹಿಳೆ ಸುಸಂಸ್ಕೃತಳಾದರೆ ಮಾತ್ರ ದೇಶದ ಉನ್ನತಿ ಸಾಧ್ಯ. ಭಾರತೀಯ ಸಂಸ್ಕೃತಿಗೆ ಮಹಿಳೆಯರು ನೀಡಿದ ಕೊಡುಗೆ ಅನನ್ಯ. ಸಂಸ್ಕೃತಿಯ ಮೌಲ್ಯಗಳ ಪರಿಮಿತಿ ಒಳಗೆ ನಾವು ಬದುಕು ಕಟ್ಟಿಕೊಳ್ಳಬೇಕು. ಆಗ ಮಾತ್ರ ಹೆಣ್ಣಿಗೆ ಗೌರವಯುತ ಸ್ಥಾನ ಲಭಿಸುತ್ತದೆ ಎಂದರು.

‘ಮಹಿಳೆ-ತಂತ್ರಜ್ಞಾನ’ ಗೋಷ್ಠಿಯಲ್ಲಿ ತಂತ್ರಜ್ಞಾನ, ಸಾಮಾಜಿಕ ಜಾಲತಾಣ ಮತ್ತು ಮಹಿಳೆ ಕುರಿತು ಬೆಂಗಳೂರಿನ ಡಾ| ಎಲ್‌.ಜಿ. ಮೀರಾ ಮಾತನಾಡಿ, ತಂತ್ರಜ್ಞಾನ ವಿಷಯದಲ್ಲಿ ಭಿನ್ನವಾದ ಆಲೋಚನೆ ನಮ್ಮದಾಗಬೇಕು. ಹೆಣ್ಣು ಮಕ್ಕಳು ಅಡುಗೆ ಮನೆಗೆ ಸೀಮಿತ ಎಂಬ ಮಾತು ಪ್ರಸ್ತುತ ಹುಸಿಯಾಗಿದೆ. ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ತಂತ್ರಜ್ಞಳಾಗುವ ಇಚ್ಛೆಯನ್ನು ಹುಟ್ಟು ಹಾಕುವಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ ಎಂದರು.

ಜಿಲ್ಲೆಯ ಮಹಿಳಾ ಸಾಧಕರು ವಿಷಯದ ಕುರಿತು ಕೊಪ್ಪ ಸಾಹಿತಿ ಚಂದ್ರಕಲಾ ವಿಷಯ ಮಂಡಿಸಿದರು. ಕವಿಗೋಷ್ಠಿಯಲ್ಲಿ ಸಾಹಿತಿ ಡಾ| ಸಬಿತಾ ಬನ್ನಾಡಿ ಮಾತನಾಡಿ, ಕುವೆಂಪು ಅಭಿಪ್ರಾಯಪಟ್ಟಂತೆ ಕಾವ್ಯ ಸಕಾಲಕ್ಕೂ, ತ್ರಿಕಾಲಕ್ಕೂ ಅನ್ವಯವಾಗುವಂತಿರಬೇಕು. ‘ತಲ್ಲಣಿಸದಿರು ಕಂಡ್ಯ ತಾಳು ಮನವೆ’ ಎಂದು ಆ ಕಾಲದಲ್ಲಿ ಹೇಳಿರುವುದು ಈ ಕಾಲಕ್ಕೂ ನಮ್ಮೊಳಗೆ ಪ್ರತಿಸ್ಪಂದನೆ ಉಂಟು ಮಾಡುತ್ತದೆ. ಎಲ್ಲರೂ ತಾಳಿಕೊಳ್ಳಬೇಕು, ಅಭದ್ರತೆ, ಕ್ರೌರ್ಯ ಎಲ್ಲದರಲ್ಲೂ ಪ್ರತಿಯೊಬ್ಬರೂ ತಾಳುವಿಕೆ ಕಂಡುಕೊಂಡರೆ ಜಗತ್ತಿನಲ್ಲಿ ತಲ್ಲಣ ಹೊರಟು ಹೋಗುತ್ತದೆ. ಅಕ್ರಮಕ್ಕೆ ಒಳಗಾಗುವುದು ಮತ್ತು ಮಾಡುವುದು ಎರಡೂ ನಿಲ್ಲಬೇಕು ಎಂದರು.

Advertisement

ಗೋಷ್ಠಿಗಳಲ್ಲಿ ಪ್ರೊ| ಜಿ.ಕೆ. ಭಾರತಿ, ರೇಖಾ ಹುಲಿಯಪ್ಪ ಗೌಡ, ಡಾಕಮ್ಮ, ಸೀತಾಲಕ್ಷ್ಮಿ , ಶೋಭಾ, ಮೀನಾಕ್ಷಿ ಕಾಂತರಾಜ್‌, ಶಿವನಿಯ ಹನುಮಕ್ಕ, ಶ್ಯಾಮಲಾ ಮಂಜುನಾಥ್‌, ಡಾ| ಸುಮಾ ಉಮೇಶ್‌, ಶೈಲಜಾ ರತ್ನಾಕರ ಹೆಗ್ಡೆ, ಡಾ| ಮಂಜುಳಾ ಹುಲ್ಲಳ್ಳಿ, ಸಮತಾ ಮಿಸ್ಕಿತ್‌, ಸುಮಿತ್ರಾ ಶಾಸ್ತ್ರಿ, ನಯನಾ ಭಟ್‌, ಪುಷ್ಪಾ ಲಕ್ಷ್ಮೀ ನಾರಾಯಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next