Advertisement

ಗ್ರಾಮ ಒನ್‌ ಕೇಂದ್ರ ಸದ್ಬಳಕೆಯಾಗಲಿ

03:09 PM Feb 20, 2022 | Shwetha M |

ವಿಜಯಪುರ: ಗ್ರಾಮೀಣ ಪ್ರದೇಶದ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮ್‌ ಒನ್‌ ಕೇಂದ್ರ ಸ್ಥಾಪಿಸಿದೆ. ಗ್ರಾಮಸ್ಥರು ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸಲಹೆ ನೀಡಿದರು.

Advertisement

ಶನಿವಾರ ಜಿಲ್ಲೆಯ ಸಿಂದಗಿ ತಾಲೂಕಿನ ಮಲಘಾಣ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮ್‌ ಒನ್‌ ಕೇಂದ್ರದ ಅಡಿ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಅನೇಕ ಸೇವೆ ಕಲ್ಪಿಸಲಾಗುತ್ತಿದ್ದು, ಅವರ ಮನೆ ಬಾಗಿಲಿಗೆ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸರ್ಕಾರದ ಇಂಥ ಯೋಜನೆಗಳ ಸದ್ಬಳಕೆ ಆಗಲಿ ಎಂದರು. ರೈತರಿಗೆ ಪಹಣಿ ಒದಗಿಸುವ ಕಾರ್ಯದಲ್ಲಿ ರಾಜ್ಯ ಗಣನೀಯ ಸಾಧನೆ ಮಾಡಿದೆ. ಆದರೂ ಕೆಲ ತಂತ್ರಾಂಶದ ತಾಂತ್ರಿಕ ಕಾರಣಗಳಿಂದ ಜಿಲ್ಲೆಯ ರೈತರಿಗೂ ತೊಂದರೆ ಉಂಟಾಗಿದೆ. ಅವುಗಳನ್ನು ಖುದ್ದಾಗಿ ಪರಿಶೀಲಿಸಿ, ತೊಂದರೆ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರೈತರ ಜಮೀನಿನ ಕಾಲುದಾರಿ, ಬಂಡಿದಾರಿ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಹಳ್ಳಿಗಳ ಮುಖಂಡರು, ರೈತರು ಸಹಕರಿಸಬೇಕು. ಪಡಿತರ ಚೀಟಿಗೆ ಸಂಬಂಧಿಸಿದ ಸಮಸ್ಯೆ ಪರಿಶೀಲಿಸಿ ಪರಿಹರಿಸುವ ಭರವಸೆ ನೀಡಿದರು.

ನವೋದಯ ತಂತ್ರಾಂಶದ ಮೂಲಕ ಮನೆ ಬಾಗಿಲಿಗೆ ಕಲ್ಪಿಸುತ್ತಿರುವ ಪಿಂಚಣಿ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಬೇಕು. ಸಮಸ್ಯೆಗಳಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಡಿಸಿ, ನಂತರ ಗ್ರಾಮದ ಐತಿಹಾಸಿಕ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನ ಹಾಗೂ ಜಕಣೇಶ್ವರ ಬಾವಿಯ ನಿರ್ವಹಣೆ ಬಗ್ಗೆ ಪರಿಶೀಲನೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

Advertisement

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಗ್ರಾಮದ ಚರಂಡಿ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮದ ಪರಿಶಿಷ್ಟರ ಕಾಲೋನಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸ್ಥಳೀಯರ ಸಮಸ್ಯೆ ಆಲಿಸಿದರು. ಕುಡಿಯುವ ನೀರು ಸಮಸ್ಯೆ, ಅಂಬೇಡ್ಕರ್‌ ಭವನ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯವಸ್ಥೆ ಸುಧಾರಣೆ ಕುರಿತು ಕೇಳಿ ಬಂದ ಅಹವಾಲಿಗೆ ತಕ್ಕಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ರೈತರ ಕಬ್ಬು ಬೆಳೆ ಕಟಾವಿಗೆ ಸಂಬಂಧಪಟ್ಟಂತೆ ಈಗಾಗಲೇ ಜಿಲ್ಲೆಯ ಕಾರ್ಖಾನೆಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಲಘಾಣ ಗ್ರಾಮದ ಕಟಾವು ಮಾಡದೇ ಬಾಕಿ ಉಳಿದಿರುವ ಕಬ್ಬು ತಕ್ಷಣ ಕಟಾವಿಗೆ ಕ್ರಮ ಕೈಗೊಳ್ಳಬೇಕು. ಅದರಂತೆ ಆದ್ಯತೆ ಮೇಲೆ ಬಾಕಿ ಬಿಲ್‌ ಪಾವತಿಸುವಂತೆ ಸೂಚಿಸಿದರು.

ಈ ವೇಳೆ ಅಧಿಕಾರಿಗಳು ನೂರಕ್ಕೂ ಹೆಚ್ಚು ಸಾರ್ವಜನಿಕ ಕುಂದುಕೊರತೆ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 72 ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳಾಗಿದ್ದು, ಆಹಾರ ಇಲಾಖೆಗೆ ಸಂಬಂಧಿಸಿದಂತೆ 32 ಅರ್ಜಿಗಳನ್ನು ಸ್ವೀಕರಿಸಿ ತ್ವರಿತ ಪರಿಹಾರಕ್ಕೆ ಸೂಚಿಸಲಾಯಿತು.

ಈ ವೇಳೆ ಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್‌, ಆಹಾರ ಇಲಾಖೆಯಿಂದ ರೇಷನ್‌ ಕಾರ್ಡ್‌, ಆರೋಗ್ಯ ಇಲಾಖೆಯಿಂದ ಆಯುಷ್ಮಾನ್‌ ಕಾರ್ಡ್‌, ವಿಕಲಚೇತನರಿಗೆ ಯುಐಡಿ ಕಾರ್ಡ್‌, ಸುಕನ್ಯಾ ಸಮೃದ್ಧಿ ಕಾರ್ಡ್‌, ಜಾಬ್‌ ಕಾರ್ಡ್‌, ವಿಕಲಚೇತನ ಫಲಾನುಭವಿಗಳಿಗೆ ವ್ಹೀಲ್‌ ಚೇರ್‌, ಅರಣ್ಯ ಇಲಾಖೆಯಿಂದ ಸಸಿ ವಿತರಿಸಲಾಯಿತು.

ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಪಂ ಸಿಇಒ ರಾಹುಲ್‌ ಶಿಂಧೆ, ಗ್ರಾಪಂ ಅಧ್ಯಕ್ಷೆ ಕಾಶೀಬಾಯಿ ಜಾಧವ, ಐಎಎಸ್‌ ಪ್ರೋಬೇಷನರಿ ಅಧಿಕಾರಿ ರಿಶಿ ಆನಂದ, ಉಪ ವಿಭಾಗಾಧಿಕಾರಿ ಎಂ.ಎನ್‌. ಚೋರಗಸ್ತಿ, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಪ್ರಾಣೇಶ ಜಹಗೀರದಾರ, ತಾಪಂ ಇಒ ಹೊಂಗಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಸಿದ್ದರಾಮ ಮಾರಿಹಾಳ, ಕಂದಾಯ ನಿರೀಕ್ಷಕ ಆರ್‌.ಐ ಅತ್ತಾರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next