Advertisement

ಯುವಿಸಿಇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ; ಮುಖ್ಯಮಂತ್ರಿ ಬೊಮ್ಮಾಯಿ

12:56 PM Sep 16, 2022 | Team Udayavani |

ಬೆಂಗಳೂರು: ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು (ಯುವಿಸಿಇ) ವಿಶ್ವವಿದ್ಯಾಲಯವನ್ನು ಅಮೆರಿಕದ ಹಾರ್ವರ್ಡ್‌, ಎಂಆರ್‌ಟಿ ವಿಶ್ವವಿದ್ಯಾಲಯ ದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಅಗ್ರಸಂಸ್ಥೆಯನ್ನಾಗಿ ಬೆಳೆಸಬೇಕಿದೆ. ಇದಕ್ಕಾಗಿ ಬೇಕಾದ ಎಲ್ಲ ರೀತಿಯ ಸಹಕಾರ, ಸ್ವಾತಂತ್ರ್ಯವನ್ನು ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

Advertisement

ಕೆ.ಆರ್‌. ವೃತ್ತದಲ್ಲಿರುವ ಯುವಿಸಿಇ ಅನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಕ್ಕಾಗಿ ಯುವಿಸಿಇ ವಿಶ್ವವಿದ್ಯಾಲಯಕ್ಕೆ ಚಾಲನೆ ನೀಡಿ ಹಾಗೂ ಯುವಿಸಿಇ-2030 ವಿಷನ್‌ ಡಾಕ್ಯುಮೆಂಟ್‌ ಅನ್ನು ಮುಖ್ಯಮಂತ್ರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಈ ವಿ.ವಿ.ಯನ್ನು ಮೊದಲ ಹಂತದಲ್ಲಿ ಮೂರು ವರ್ಷಗಳಲ್ಲಿ ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎನ್ನುವುದು ಸರ್ಕಾರದ ಗುರಿಯಾಗಿದೆ. ಹೀಗಾಗಿ, 2030ಕ್ಕೆ ಇಟ್ಟುಕೊಂಡಿದ್ದ ಗುರಿಯ ಕಾಲಾವಧಿಯನ್ನು ಇಳಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿಯೇ ಮೊದಲ ಹಂತದ ಅಭಿವೃದ್ಧಿಯಾಗುವಂತೆ ಯುವಿಸಿಇ ಆಡಳಿತ ಮಂಡಳಿ ಅಧ್ಯಕ್ಷ ಮುತ್ತುರಾಮನ್‌ ಅವರಿಗೆ ಸಮಯ ನೀಡಿದರು.

6 ಕಾಲೇಜು ಐಐಟಿ ಮಾದರಿಗೆ ಸಂಕಲ್ಪ: ಅಭಿವೃದ್ಧಿಗೆ ಬೇಕಾದ ಸಿಬ್ಬಂದಿ, ಬೋಧಕ ವೃಂದ, ಮೂಲ ಸೌಕರ್ಯ ಕಲ್ಪಿಸುವ ಜತೆಗೆ ಕಿಂಚಿತ್ತೂ
ಹಸ್ತಕ್ಷೇಪ ಮಾಡುವುದಿಲ್ಲ. ಸಂಪೂರ್ಣವಾಗಿ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ನೀಡಲಾಗುತ್ತದೆ. ನಮ್ಮ ವಿದ್ಯಾರ್ಥಿಗಳು ಉತ್ಕೃಷ್ಟ ಶಿಕ್ಷಣಕ್ಕೆ ಐಐಟಿ ತರಹದ ಸಂಸ್ಥೆಗಳನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ಯುವಿಸಿಇ ಜತೆಗೆ ರಾಜ್ಯದ ಇನ್ನೂ ಆರು ಎಂಜಿನಿಯರಿಂಗ್‌ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಬೆಳೆಸುವ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.

ಯುವಿಸಿಇ ಎಂದೋ ಬದಲಾಗಬೇಕಿತ್ತು: ನಗರದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲದಿರುವುದರಿಂದ ಯುವಿಸಿಇ ಯನ್ನು ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಬೆಳೆಸುವ ಕೆಲಸ ಎಂದೋ ಆಗಬೇಕಿತ್ತು. ಆದರೆ, ಹಿಂದಿನ ಸರ್ಕಾರಗಳ ವ್ಯವಸ್ಥೆಯಲ್ಲಿ ಇಚ್ಛಾಶಕ್ತಿಯ ಕೊರತೆ ಇದ್ದರಿಂದ ಅಭಿವೃದ್ಧಿ ಕಂಡಿರಲಿಲ್ಲ ಎಂದು ಆರೋಪ ಮಾಡಿದರು.

Advertisement

ತಾಂತ್ರಿಕ ಮತ್ತು ವಿಶ್ಲೇಷಣಾತ್ಮಕ ಆಲೋಚನೆಗಳನ್ನು ಅಳವಡಿಸಿಕೊಂಡಾದ ಅತ್ಯುತ್ತಮ ಎಂಜಿನಿಯರ್‌ಗಳು ಸೃಷ್ಟಿಯಾಗುತ್ತಾರೆ. ರಾಜಮಹಾರಾಜರ ಕಾಲ ಭೂ ಮಾಲೀಕರು, ಇಂಗ್ಲಿಷರು ಬಂಡ ವಾಳಶಾಹಿಗಳಾಗಿ ದೇಶವನ್ನು ಆಳಿದರು. ಈಗ 21ನೇ ಶತಮಾನ ಜ್ಞಾನದ ಯುಗವಾಗಿದೆ. ಇದನ್ನು ಅರ್ಥಮಾಡಿಕೊಂಡರೆ ಯುವ ಜನತೆ ದೇಶ ವನ್ನೇ ಆಳಬಹುದು. ಯುವಿಸಿಇ ವಿದ್ಯಾರ್ಥಿಗಳು ಇದನ್ನು ಸಾಧ್ಯ ಮಾಡಿ ತೋರಿಸಲಿದ್ದಾರೆ ಎನ್ನುವ ವಿಶ್ವಾಸ ತಮ್ಮದಾಗಿದೆ ಎಂದು ಅವರು ಹೇಳಿದರು.

ಸಿಇಟಿ ವಿದ್ಯಾರ್ಥಿಗಳು ಮೊದಲ ಆದ್ಯತೆ: ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ಮಾತನಾಡಿ, ಸಿಇಟಿ ಪರೀಕ್ಷೆಯಲ್ಲಿ
ಉನ್ನತ ಶ್ರೇಣಿಯ ರ್‍ಯಾಂಕ್‌ ಪಡೆಯುವ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಯುವಿಸಿಇಯನ್ನು ಮೊದಲು ಆಯ್ಕೆ ಮಾಡಿಕೊಳ್ಳುವಂತೆ ಮಾಡಲಿದ್ದೇವೆ. ಈ ಬಗ್ಗೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕೂಡ ಅಪಾರ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಹೇಳಿದರು.

ಯುವಿಸಿಇಯನ್ನು ಸ್ವಾಯತ್ತ ವಿವಿ ಮಾಡುವ ಬಗ್ಗೆ 20 ವರ್ಷಗಳಿಂದಲೂ ಪ್ರಯತ್ನ ಮಾಡುತ್ತಿದ್ದರು. ಆದರೆ, ಸರ್ಕಾರ ಈ ವಿಚಾರದಲ್ಲಿ ಬದ್ಧತೆ ತೋರಿಸಿರಲಿಲ್ಲ. ಈ ವಿ.ವಿ.ಯ ಪರಿಪೂರ್ಣ ಅಭಿವೃದ್ಧಿಗೆ ಶೀಘ್ರದಲ್ಲಿಯೇ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು. ಈ ಮೂಲಕ ಐಐಟಿಯನ್ನು ಮೀರಿ ಬೆಳೆಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಯುವಿಸಿಇ ಆಡಳಿತ ಮಂಡಳಿ ಅಧ್ಯಕ್ಷ ಬಿ.ಮುತ್ತುರಾಮನ್‌, ಯುವಿಸಿಇ ಉನ್ನತೀಕರಿಸಿದ ಸಮಿತಿ ಅಧ್ಯಕ್ಷ ಪ್ರೊ.ಎಸ್‌. ಸದಗೋಪನ್‌, ಬೆಂಗಳೂರು ವಿವಿ ಕುಲಪತಿ ಡಾ. ಎಸ್‌.ಎಂ. ಜಯಕರ್‌, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್‌, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌, ಪ್ರಾಂಶುಪಾಲ ಪ್ರೊ.ಎಚ್‌.ಎನ್‌. ರಮೇಶ್‌ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next