ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಸ್ವಯಂಪ್ರೇರಿತರಾಗಿ ಜನತಾ ಕರ್ಫ್ಯೂ ಆಚರಿಸಲು ಕರೆ ನೀಡಿದ್ದು, ಅದಕ್ಕೆ ನಾವೆಲ್ಲಾ ಸ್ಪಂದಿಸಿ ದೃಢ ಸಂಕಲ್ಪ ಮಾಡೋಣ. ಇದು ಕೋವಿಡ್ 19 ರೋಗ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಯಾಗಿದ್ದು, ದೇಶದ ಹಿತಕ್ಕೆ ಸಣ್ಣ ಸಹಯೋಗ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಡಿ.ವಿ.ಸದಾನಂದಗೌಡ, ಕೋವಿಡ್ 19 ರೋಗ ತಡೆಗಟ್ಟಲು ವೈದ್ಯರು, ಅರೆವೈದ್ಯ ಸಿಬ್ಬಂದಿ, ವೈಮಾನಿಕ, ಸಾರಿಗೆ ಸಿಬ್ಬಂದಿ, ಪೊಲೀಸರು, ಯೋಧರು, ಸರ್ಕಾರಿ, ಅರೆ ಸರ್ಕಾರಿ ನೌಕರರು, ಮಾಧ್ಯಮದವರು… ಹೀಗೆ ಲಕ್ಷಾಂತರ ಮಂದಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಹಾಗಾಗಿ ಭಾನುವಾರ ಸಂಜೆ 5 ಗಂಟೆಗೆ ನಾವೆಲ್ಲಾ ಮನೆಯಿಂದಲೇ ಅವರಿಗೆ 5 ನಿಮಿಷ ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸೋಣ ಎಂದು ಪ್ರಧಾನಿಯವರು ಹೇಳಿದ್ದಾರೆ. ಕೋವಿಡ್ 19 ರೋಗವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಮನಗಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ನಮ್ಮ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಕೋವಿಡ್ 19 ಮಾರಿ ವಿರುದ್ಧ ಸಮರ ಸಾರಲಾಗಿದೆ ಎಂದು ತಿಳಿಸಿದ್ದಾರೆ.
ಈ ಸೂಕ್ಷ್ಮ ಸಂದರ್ಭದಲ್ಲಿ ನಮ್ಮ ಜವಾಬ್ದಾರಿ ಹೆಚ್ಚು ಇದೆ. ಈ ರೋಗಕ್ಕೆ ಈವರೆಗೆ ಯಾವುದೇ ಲಸಿಕೆ ಅಭಿವೃದ್ಧಿಯಾಗದ ಕಾರಣ ರೋಗ ಬರದಂತೆ ನೋಡಿಕೊಳ್ಳುವುದೇ ಪರಿಹಾರ. ಸ್ವಲ್ಪ ಕಾಲ ನಮ್ಮ ಸಾಮಾಜಿಕ ಬದುಕು, ಓಡಾಟವನ್ನು ಕಡಿಮೆ ಮಾಡಬೇಕಿದೆ. ನಾಗರಿಕರ ಸಹಕಾರ ಅಗತ್ಯವಾಗಿದೆ. ಹಿರಿಯ ನಾಗರಿಕರು ನಿಯಮಿತ ಆರೋಗ್ಯ ಪರೀಕ್ಷೆಯನ್ನು ಸ್ವಲ್ಪ ಕಾಲ ಮುಂಡಬೇಕು. ಹೊರಗೆ ಹೆಚ್ಚು ಓಡಾಡಬಾರದು. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಸೋಂಕು ತಗುಲಿದರೆ ಚೇತರಿಕೆ ಕಷ್ಟ. ನಮ್ಮ ಸಂಕಲ್ಪ, ಸಂಯಮ ನಮ್ಮನ್ನು ಮಾತ್ರವಲ್ಲದೆ ನಮ್ಮ ಬಂಧುಗಳು, ಸಮಾಜ, ದೇಶವನ್ನು ಕಾಪಾಡಬಲ್ಲದು. ಯಾರೂ ಭಯಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ವಹಿಸಬೇಕು. ಕೊರೊನಾ ರೋಗದ ಲಕ್ಷಣ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಇಲ್ಲವೇ ಸಹಾಯವಾಣಿ (11- 23978036) ಸಂಪರ್ಕಿಸಬಹುದು ಎಂದು ಮನವಿ ಮಾಡಿದ್ದಾರೆ.
ದಿನಸಿ, ಹಾಲು, ಹಣ್ಣು- ಹಂಪಲು, ಔಷಧ, ಇಂಧನ ಇತರೆ ಜೀವನಾವಶ್ಯಕ ಎಲ್ಲ ವಸ್ತುಗಳ ಪೂರೈಕೆ ಎಂದಿನಂತಿರುತ್ತದೆ. ಹಾಗಾಗಿ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಆತಂಕದಿಂದ ಅನಗತ್ಯವಾಗಿ ವಸ್ತುಗಳ ಖರೀದಿ, ದಾಸ್ತಾನು ಮಾಡಬಾರದು.
ವಿಶ್ವವ್ಯಾಪಿಯಾಗುತ್ತಿರುವ ಕೋವಿಡ್ 19 ರೋಗ ಭಾರತದ ಮೇಲೂ ಆರ್ಥಿಕ ದುಷ್ಪರಿಣಾಮ ಬೀರಬಹುದು. ಇದನ್ನು ಸಮರ್ಥವಾಗಿ ಎದುರಿಸಲು ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಉನ್ನತಾಧಿಕಾರ ಕಾರ್ಯದಳ ರಚಿಸಿದ್ದಾರೆ. ಎಲ್ಲರೂ ಪ್ರಧಾನಿ ಮೋದಿಯವರೊಂದಿಗೆ ಕೈಜೋಡಿಸಿ ಈ ಸವಾಲನ್ನು ಗೆಲ್ಲೋಣ ಎಂದು ವಿನಂತಿಸಿದ್ದಾರೆ.