Advertisement
ಕೊರೊನಾ ನಮ್ಮ ಯೋಚನೆ, ಜೀವನಶೈಲಿಯಲ್ಲಿ ಬದಲಾವಣೆ ತಂದಿರುವಂತೆಯೇ ಕೃಷಿ ರಂಗವನ್ನೂ ಬಹಳಷ್ಟು ಮಟ್ಟಿಗೆ ಪ್ರಭಾವಿಸಿದೆ. ಊರಲ್ಲಿ ಕೃಷಿಗೆ ಬದುಕಿಲ್ಲ; ತಮಗೂ ಬದುಕು ಕಟ್ಟಿಕೊಳಕ್ಷೆು ಕಷ್ಟಸಾಧ್ಯ ಎಂಬ ಭಾವನೆಯಿಂದ ಹೊರ ಹೊರಟವರ ಪ್ರಮಾಣ ಹೆಚ್ಚಾಗಿ ಊರಲ್ಲಿ ಇದ್ದ ಕೃಷಿ ಭೂಮಿಯನ್ನು ಜೀವಂತವಾಗಿರಿಸಿಕೊಳ್ಳಲು ಕಷ್ಟ ಪಡುತ್ತಿರುವವರು ತಮ್ಮ ಫಲವತ್ತಾದ ಜಮೀನನ್ನು ಪಾಳು ಬಿಡದೆ ವಿಧಿ ಇಲ್ಲ ಎಂಬ ಭಾವನೆಯನ್ನು ಹೊಂದುವಂತಾಗಿದ್ದು ಕಳೆದೆರಡು ಮೂರು ದಶಕಗಳ ನೋಟ. ಈಗ, ಹೊರ ಹೋದವರು ಮರಳಿ ಮಣ್ಣಿಗೆ ಬರುವ ಮನಸ್ಸು ಮಾಡಿದ್ದಾರೆ. ಹಡಿಲು ಬಿದ್ದ ಭೂಮಿ ಮತ್ತೆ ಹಸನಾಗಿ ಆರಳಲು ಪ್ರಾರಂಭವಾಗಿದೆ. ಒಟ್ಟಾರೆ ಕೃಷಿರಂಗ ಪುನಶ್ಚೇತನಗೊಳಕ್ಷೆು ಇರುವ ಸಾಧ್ಯತೆಗಳನ್ನು ಈಗಿನ ಹೊಸ ಬೆಳವಣಿಗೆ ತೆರೆದಿಟ್ಟಿದೆ.
Related Articles
Advertisement
ಮಾರುಕಟ್ಟೆ: ಭಾರತದಲ್ಲಿ ಇತರೆಲ್ಲ ಉತ್ಪನ್ನಗಳಿಗೆ ಧಾರಣೆ ನಿರ್ಧರಿಸುವ ವ್ಯವಸ್ಥೆ ಇದ್ದರೆ ಕೃಷಿಕರು ತಮ್ಮ ಉತ್ಪನ್ನಗಳಿಗೆ ತಾವೇ ಧಾರಣೆ ನಿರ್ಧರಿಸುವ ಸ್ಥಿತಿಯಲ್ಲಿಲ್ಲ. ಈ ಚಿತ್ರಣ ಬದಲಾಗಬೇಕಿದೆ. ಕೃಷಿಕರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಮಧ್ಯವರ್ತಿಗಳನ್ನು ಹೆಚ್ಚು ಅವಲಂಬಿಸದೆ ಆದಷ್ಟು ಮಟ್ಟಿಗೆ ತಾವೇ ನೇರ ಮಾರಾಟ ಮಾಡುವ ಇಲ್ಲವೇ ಮಾರಾಟ ಜಾಲವನ್ನು ರೂಪಿಸಿಕೊಳ್ಳಬೇಕಾಗಿದೆ. ಇದರಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಪಾತ್ರವೂ ಹಿರಿದಾಗಿದೆ.
ಒಂದು ಉತ್ಪನ್ನಕ್ಕೆ ಒಮ್ಮೆ ಉತ್ತಮ ಬೆಲೆ ಲಭಿಸಿತೆಂದರೆ ಸಾಕು, ಎಲ್ಲರೂ ಅದನ್ನೇ ಬೆಳೆದು ಸಮಾಧಾನಕರ ಬೆಲೆ ಸಿಗದೆ ಸೋಲುವ ಕೃಷಿಕರು ನಮ್ಮ ನಡುವೆಯೇ ಇದ್ದಾರೆ. ಇದನ್ನು ಹೋಗಲಾಡಿಸಬೇಕಾಗಿದೆ. ಕೃಷಿ ಉತ್ಪನ್ನಗಳ ಮಹಾಸಮೃದ್ಧಿ ಕಂಡು ಬಂದ ಕಾಲದಲ್ಲಿ ಅದನ್ನು ಯೋಗ್ಯವಾಗಿ ಕಾಪಿಡುವ ವ್ಯವಸ್ಥೆಯನ್ನು ಸರಕಾರ ಕಲ್ಪಿಸಿಕೊಡುವುದು ಅವಶ್ಯ. ಹಾಗಾದಾಗ ಮಾತ್ರ ಬೆಳೆಗಳ ಬೆಲೆ ಪ್ರಪಾತಕ್ಕೆ ಕುಸಿದುಬೀಳುವುದನ್ನು ತಪ್ಪಿಸಬಹುದು.
ಇನ್ನೊಂದೆಡೆ ಬೆಳೆಗಳನ್ನು ಆಗಾಗ ಬದಲಾಯಿಸುವ ಮೂಲಕ, ಏಕಕಾಲದಲ್ಲಿ ಬಹುವಿಧ ಬೆಳೆಗಳನ್ನು ಬೆಳೆಸುವ ಮೂಲಕ ಮಣ್ಣಿನ ಸಾರ ಕಳೆದು ಕೊಳ್ಳದಂತೆ ನೋಡಿಕೊಳ್ಳಬಹುದಾಗಿದೆ. ಒಂದು ಬೆಳೆಯಲ್ಲಾದ ನಷ್ಟವನ್ನು ಮತ್ತೂಂದರ ಮೂಲಕ ಸರಿದೂಗಿಸಲೂ ಸಾಧ್ಯವಿದೆ. ಈ ಜಾಣನಡೆ ಯಿಂದಲೂ ಮುಂದಿನ ವರ್ಷಗಳಲ್ಲಿ ಕೃಷಿರಂಗದಲ್ಲಿ ಬದಲಾವಣೆ ಕಾಣಬಹುದು.
ರಫ್ತು ಸಾಧ್ಯತೆ: ನಮ್ಮಲ್ಲಿ ಉತ್ಪಾದನೆಯಾಗುವ ಆಹಾರ ಪದಾರ್ಥಗಳನ್ನು ಯೋಗ್ಯ ಬೆಲೆಗೆ ರಫ್ತು ಮಾಡುವ ಅವಕಾಶಗಳನ್ನು ಸರಕಾರ ಸುವ್ಯವಸ್ಥಿತವಾಗಿ ರೈತರಿಗೆ ಒದಗಿಸಿಕೊಡಬೇಕಿದೆ. ವಿಶೇಷವಾಗಿ ಹಣ್ಣು ಹಂಪಲು, ಔಷಧೀಯ ಸಸ್ಯಗಳು/ಉತ್ಪನ್ನಗಳು ರಫ್ತಾಗುವ ಮೂಲಕ ನಮ್ಮ ಕೃಷಿಕರ ಆರ್ಥಿಕ ಸುಧಾರಣೆ ಆಗುವುದು ಖಂಡಿತ.
ಕೃಷಿಗೆ ವಿಮೆ: ಭಾರತದಲ್ಲಿ ಕೃಷಿಗೆ ಈಗ ಇರುವ ವಿಮಾ ಸೌಕರ್ಯ ತೀರಾ ಅಸಮರ್ಪಕವಾಗಿದೆ. ಅತಿವೃಷ್ಟಿ, ಅನಾವೃಷ್ಟಿ, ಕಾಡುಪ್ರಾಣಿ, ಪಕ್ಷಿಗಳ ಹಾವಳಿ, ಕೀಟ ಬಾಧೆ ಹೀಗೆ ಹತ್ತಾರು ಕಾರಣಗಳಿಂದ ಕೃಷಿ ಉತ್ಪನ್ನ ಕೈಗೆ ಸಿಗದೆ, ಸಿಕ್ಕಿದರೂ ಲಾಭಕರವಾಗದೆ ಕೃಷಿಕ ಸೋಲುವ ಸ್ಥಿತಿ ಭಾರತದಲ್ಲಿದೆ. ಈಗ ಕೃಷಿರಂಗದಲ್ಲಿರುವ ವಿಮಾ ಪದ್ಧತಿ ಪೂರ್ಣ ಬದಲಾಗಿ, ಸರಳವಾಗಿ ರೂಪುಗೊಂಡು ಎಲ್ಲೂ ಕೃಷಿಕ ಸೋಲದಂತೆ ನೋಡಿಕೊಳ್ಳಬೇಕಾಗಿದೆ.
ಎಚ್ಚರ: ಬಹುವಿಧ ಕೃಷಿ ನಡೆಯುವ ಭೂಮಿಯನ್ನು ನಾಶ ಮಾಡಿ ಏಕ ಸಸ್ಯ ಕೃಷಿ ಸಂಸ್ಕೃತಿ ಬೆಳೆಸುವುದು ಸಲ್ಲದು. ಕೃಷಿ ಭೂಮಿಯನ್ನು ಯಾವುದೋ ಕಂಪೆನಿಗೆ ನೀಡಿ, ಅವರು ಬಹಳ ದೊಡ್ಡ ಮಟ್ಟದಲ್ಲಿ ಕೃಷಿ ಮಾಡಲು ಅವಕಾಶ ಕಲ್ಪಿಸಿದರೆ ಸ್ಥಾನೀಯ ಸಣ್ಣ ರೈತರ ಬದುಕು ಹೈರಾಣಾಗಿ ಹೋಗುವುದು ಖಂಡಿತ. ಅದರ ಬದಲು, ಬರಡು ಭೂಮಿಯನ್ನು ಕಂಪೆನಿಗಳಿಗೆ ನೀಡಿ ಅಲ್ಲಿ ಕೃಷಿಯಲ್ಲಿ ಕ್ರಾಂತಿ ನಡೆಸಲು ಅವಕಾಶ ಕಲ್ಪಿಸುವುದು ಸೂಕ್ತ.
ಫಾರ್ಮ್ ಟೂರಿಸಂ: ಕೃಷಿರಂಗದ ಬಗ್ಗೆ ಅರಿವು, ಅಭಿಮಾನ, ಗೌರವ ಮೂಡಿಸಲು, ಈ ರಂಗಕ್ಕೆ ಮತ್ತಷ್ಟು ಮಂದಿಯನ್ನು ಸೆಳೆಯಲು ಫಾರ್ಮ್ ಟೂರಿಸಂ ಬಹಳ ಸಹಕಾರಿಯಾಗಿದೆ. ಒಂದು ಜಿಲ್ಲೆಯ ವಿವಿಧ ಕೃಷಿ, ತೋಟ ತಾಣಗಳಿಗೆ ಭೇಟಿ ನೀಡುವ ಜತೆಗೆ ಆಯಾಯ ಸ್ಥಾನೀಯ ಚಾರಿತ್ರಿಕ, ಅಧುನಿಕ ವಿಶೇಷತೆಗಳನ್ನು ಪರಿಚಯಿಸುವಂಥ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ.
ಡಾ| ಎಲ್.ಸಿ. ಸೋನ್ಸ್
ಸೋನ್ಸ್ ಫಾರ್ಮ್, ಮೂಡುಬಿದಿರೆ