ವಿಜಯಪುರ: ಕೇಂದ್ರ ಸರ್ಕಾರದ ಹಲವು ಮಹತ್ವದ ಯೋಜನೆಗಳು ಅಂಚೆ ಇಲಾಖೆ ಮೂಲಕ ದೇಶದ ಕಟ್ಟ ಕಡೆಯ ನಾಗರಿಕನಿಗೆ ಮುಟ್ಟುವಂತಾಗಬೇಕು ಎಂಬುದು ಪ್ರಧಾನಮಂತ್ರಿ ಆಶಯ. ಇದಕ್ಕಾಗಿ ಎಲ್ಲರೂ ಸರ್ಕಾರದ ನಿರ್ದೇಶನ ಪಾಲಿಸುವ ಮೂಲಕ ಸರ್ಕಾರದ ಮಹತ್ವಾಕಾಂಕ್ಷೆ ಈಡೇರಿಸೋಣ ಎಂದು ಎಂದು ರಾಷ್ಟ್ರೀಯ ಅಂಚೆ ನೌಕರರ ಸಂಘಗಳ ವಲಯ ಕಾರ್ಯದರ್ಶಿ ಎಸ್. ಖಂಡೋಜಿರಾವ್ ಹೇಳಿದರು.
ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ನಡೆದ ರಾಷ್ಟ್ರೀಯ ಅಂಚೆ ನೌಕರರ ಸಂಘಗಳ ಜಂಟಿ ದ್ವೈವಾರ್ಷಿಕ ಮಹಾ ಅಧಿವೇಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಯಾವುದೇ ಹೊಸ ಯೋಜನೆಗಳನ್ನು ಕರ್ನಾಟಕ, ತಮಿಳುನಾಡು ರಾಜ್ಯಗಳ ಮೂಲಕವೇ ಜಾರಿಗೆ ತರುತ್ತಿದೆ. ಇದು ನಮಗೆ ತೊಂದರೆಯಾದರೂ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಮಗೆ ವಹಿಸಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕು. ಜೊತೆಗೆ ಸಂಘವನ್ನು
ಬಲಪಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ವಿಜಯಪುರ ಜಿಲ್ಲಾ ಅಂಚೆ ಅಧಿಕ ಕೆ.ರಘುನಾಥಾಮಿ ಮಾತನಾಡಿ, ನಾವೆಲ್ಲರೂ ಕರ್ತವ್ಯದಲ್ಲಿ ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು. ಶಿಸ್ತು, ದಕ್ಷತೆ ರೂಢಿಸಿಕೊಂಡು ಮುನ್ನಡೆದಾಗ ಮಾತ್ರ ಅಂಚೆ ಇಲಾಖೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂದರು.
ಅಂಚೆ ಇಲಾಖೆ ಉಳಿದರೆ ಮಾತ್ರ ಅಂಚೆ ನೌಕರರ ಸಂಘಟನೆ ಜೀವಂತಿಕೆಗೆ ಸಾಧ್ಯವಾಗುತ್ತದೆ. ಹೀಗಾಗಿ ಸರ್ಕಾರ ಅಂಚೆ ಇಲಾಖೆ ಮೂಲಕ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ. ಹೆಚ್ಚು ಉಳಿತಾಯ ಖಾತೆ ತೆರೆಯಬೇಕು ಎನ್ನುವ ಗುರಿ ಮುಟ್ಟುವಲ್ಲೂ ನಾವು ಯಶಸ್ವಿಯಾಗಬೇಕಿದೆ ಎಂದರು. ಪೋಸ್ಟ್‌ಮನ್ ಮತ್ತು ಎಂಟಿಎಸ್ ನೌಕರರ ಸಂಘಟನೆಯ ವಲಯ ಕಾರ್ಯದರ್ಶಿ ಆರ್.ಮಹಾದೇವ ಮಾತನಾಡಿ, ಅಂಚೆ ಇಲಾಖೆಯನ್ನು ಸರ್ಕಾರ ಖಾಸಗೀಕರಣ ಮಾಡಬಾರದು.
ಇಲಾಖೆಯು ಪ್ರತಿ ವರ್ಷ 19,600 ಕೋಟಿ ರೂ. ನಷ್ಟದಲ್ಲಿದೆ ಎಂದರೆ ಅದಕ್ಕೆ ನಮ್ಮ ಉನ್ನತ ಅಧಿಕಾರಿಗಳ ಅನುಷ್ಠಾನದಲ್ಲಿನ ಲೋಪ ಹಾಗೂ ತಪ್ಪು ನಿರ್ಧಾರಗಳೇ ಕಾರಣ. ಹೀಗಾಗಿ ಸರ್ಕಾರ ನಮ್ಮ ಇಲಾಖೆಯ ಖಾಸಗೀಕರಣದ ಚಿಂತನೆ ಮಾಡಬಾರದು ಎಂದು ಮನವಿ ಮಾಡಿದರು. ಉತ್ತರ ಕರ್ನಾಟಕ ವಲಯ ಪ್ರತಿನಿಧಿ ರಾಜು ಮಡಿವಾಳರ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರ ವಿಭಾಗದ ಗ್ರೂಫ್ ಸಿ ನೌಕರರ ಅಧ್ಯಕ್ಷ ರವಿ ಬಬಲೇಶ್ವರ ಮಾತನಾಡಿದರು.
ಎಸ್.ಎ. ಜಮಾದಾರ, ಸದಾಶಿವ ತೊರವಿ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ಹಾಗೂ ಭಡ್ತಿ ಹೊಂದಿದ ಅಂಚೆ ಇಲಾಖೆ ನೌಕರರನ್ನು ಸನ್ಮಾನಿಸಲಾಯಿತು. ವಿಭಾಗದ ಕಾರ್ಯದರ್ಶಿ ಎಸ್.ಬಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ದಿಲೀಪ ಮೇಲಿನಕೇರಿ ಪ್ರಾರ್ಥಿಸಿದರು. ಜಗನ್ನಾಥ ದೇಸಾಯಿ ಸ್ವಾಗತಿಸಿದರು. ರವಿ ಗೋಕಾವಿ ನಿರೂಪಿಸಿದರು. ಶಿವಾನಂದ ದಳವಾಯಿ ವಂದಿಸಿದರು.