ಕೊಪ್ಪಳ: ಆರು ತಿಂಗಳ ಹಿಂದಷ್ಟೇ ಕೊಪ್ಪಳ ಜಿಲ್ಲೆಗೆ ಹೊಸ ವಿಶ್ವವಿದ್ಯಾಲಯ ಆರಂಭ ಮಾಡಿದೆ. ಆದರೆ ಆರಂಭವಾದ ಗಳಿಗೆಯಲ್ಲಿಯೇ ವಿವಿ ರದ್ದುಪಡಿಸಬೇಕೆನ್ನುವ ಚರ್ಚೆಗಳು ಈಗ ಶುರುವಾಗಿವೆ. ಸರ್ಕಾರದ ಮಟ್ಟದಲ್ಲೂ ಇಂತಹದ್ದೊಂದು ಚರ್ಚೆ ಮುನ್ನೆಲೆಗೆ ಬಂದಿದ್ದು, ಜಿಲ್ಲೆಯ ಜನರಲ್ಲಿ ಆತಂಕ ತರಿಸಿದೆ. ವಿವಿಗೆ ಸ್ವಂತ ನೆಲೆ ಕಲ್ಪಿಸುವ ಜೊತೆಗೆ ಅನುದಾನ ನೀಡಿ ಅಭಿವೃದ್ಧಿಗೆ ಆದ್ಯತೆ ಕೊಡಬೇಕೆನ್ನುವ ಒತ್ತಾಯವೂ ಕೇಳಿ ಬಂದಿದೆ.
ಹೌದು.. ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳು ಈ ಮೊದಲು ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ
ವ್ಯಾಪ್ತಿಯಲ್ಲಿ ನಡೆಯುತ್ತಿದ್ದವು. ಈ ಭಾಗದ ಜನರ ಒತ್ತಾಸೆ ಮೇರೆಗೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಪ್ಪಳಕ್ಕೆ ವಿಶ್ವವಿದ್ಯಾಲಯ ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದೆ.
ವಿವಿಗೆ ಕುಲಪತಿ ನೇಮಕವನ್ನೂ ಮಾಡಿದೆ. ಡಾ| ಬಿ.ಕೆ. ರವಿ ಅವರು ಅತ್ಯಂತ ಆಸಕ್ತಿ ವಹಿಸಿ ವಿವಿಯ ಅಭಿವೃದ್ಧಿಗೆ ನಾನಾ ಯೋಜನೆ ರೂಪಿಸುವ ಜೊತೆಗೆ ಹಲವು ಕನಸುಗಳನ್ನು ಈ ಭಾಗದಲ್ಲಿ ಬಿತ್ತಿದ್ದು ಜನರಲ್ಲೂ ಕನಸು ಚಿಗುರೊಡೆದಿದೆ. ಸೌಲಭ್ಯವಿಲ್ಲ ಎನ್ನುವ ಕಾರಣ ನೀಡಿ ಕಾಂಗ್ರೆಸ್ ಸರ್ಕಾರವು 7 ಹೊಸ ವಿವಿ ರದ್ದುಪಡಿಸುವ ಯೋಚನೆಯಲ್ಲಿದೆ ಎನ್ನುವ ಚರ್ಚೆಗಳು ವಿವಿಯ ವ್ಯಾಪ್ತಿಯಲ್ಲಿ ನಡೆದಿವೆ.
ಪ್ರಸ್ತುತ ಕೊಪ್ಪಳ ವಿವಿ ಘೋಷಣೆ ಮಾಡಿದ್ದು, ಅನುದಾನ ಸೇರಿ ಯಾವುದೇ ಜಮೀನು ಮಂಜೂರು ಮಾಡಿಲ್ಲ. ಬಳ್ಳಾರಿ ವಿಎಸ್‌ಕೆ ವಿವಿಯಿಂದಲೂ ಸಹಿತ ಜಿಲ್ಲೆಯ ಕಾಲೇಜುಗಳ ಹಸ್ತಾಂತರದ ಪ್ರಕ್ರಿಯೆ ನಡೆದಿದೆ. ಹುದ್ದೆಗಳ ವರ್ಗೀಕರಣವೂ ಆಗಿದೆ. ಹಿಂದಿನ ಸರ್ಕಾರವೂ ಸಹಿತ ಕಡಿಮೆ ಮಾನವ ಸಂಪನ್ಮೂಲ ಬಳಕೆ ಮಾಡಿ ಡಿಜಿಟಲ್ ಮಾದರಿಯಲ್ಲಿ ವಿವಿ ಮುನ್ನಡೆಸುವ ಯೋಜನೆ ರೂಪಿಸಿತ್ತು.
ಆದರೆ ಈಗಿನ ಸರ್ಕಾರ ವಿವಿಗೆ ಯಾವುದೇ ಸೌಲಭ್ಯವಿಲ್ಲ ಎನ್ನುವ ಕಾರಣ ನೀಡಿ ಗುಣಮಟ್ಟದ ಶಿಕ್ಷಣ ಕೊಡಲು ಆಗುವುದಿಲ್ಲ ಎನ್ನುವಂತ ವಿಚಾರಗಳೊಂದಿಗೆ ಘೋಷಣೆ ಮಾಡಿರುವ ಏಳು ಹೊಸ ವಿವಿಗಳನ್ನು ರದ್ದುಪಡಿಸುವ ಚರ್ಚೆಗಳು ತೇಲಿ ಬಂದಿವೆ. ಇದು ರಾಜ್ಯ ಸರ್ಕಾರಕ್ಕೆ ಅಪಕೀರ್ತಿಯನ್ನು ತಂದರೂ ಅಚ್ಚರಿ ಪಡಬೇಕಿಲ್ಲ. ವಿವಿಯ ಮೊಳಕೆ ಹಂತದಲ್ಲಿ ಕಮರಿಸುವ ಕೆಲಸ ಕೈ ಬಿಡಬೇಕಿದೆ.
ವಿವಿ ಹಂತದಲ್ಲಿ ಅಭಿವೃದ್ಧಿ ಮಾಡಲಿ: ಎಲ್ಲವನ್ನೂ ಒಂದೇ ಬಾರಿಗೆ ಸೌಲಭ್ಯ ಕಲ್ಪಿಸುವುದು ಯಾವುದೇ ಸರ್ಕಾರದಿಂದಲೂ ಕಷ್ಟಸಾಧ್ಯ. ವಿವಿ ಘೋಷಣೆ ಮೊದಲ ಹಂತವಾಗಿದ್ದರೆ ಆರಂಭಕ್ಕೆ ಒತ್ತು ನೀಡಿದ್ದು ಎರಡನೇ ಹಂತವಾಗಿದೆ. ಹಂತ ಹಂತವಾಗಿ ವಿವಿಗೆ ಸರ್ಕಾರ ಅನುದಾನ ನೀಡುವ ಜೊತೆಗೆ ಜಿಲ್ಲೆಯಲ್ಲಿ ಇರುವ ಸರ್ಕಾರಿ ಜಮೀನು ಗುರುತಿಸಿ ವಿವಿಗೆ ಮಂಜೂರು ಮಾಡುವ ಕೆಲಸಕ್ಕೆ ಮುಂದಾಗಲಿ. ಅದನ್ನು ಬಿಟ್ಟು ರದ್ದುಪಡಿಸುವ ವಿಚಾರವನ್ನು ಕೈ ಬಿಡಬೇಕು ಎನ್ನುವುದು ಜಿಲ್ಲೆಯ ಜನರ ಒತ್ತಾಯವಾಗಿದೆ.
ಕೊಪ್ಪಳ ಜಿಲ್ಲೆಯ ಬಹು ವರ್ಷಗಳ ಕನಸಿನಂತೆ ವಿಶ್ವವಿದ್ಯಾಲಯ ಆರಂಭ ಮಾಡಲಾಗಿದೆ. ಆದರೆ ಕಳೆದ ವರ್ಷ ಘೋಷಣೆ ಮಾಡಿದ 7 ಹೊಸ ವಿವಿಗಳನ್ನು ರದ್ದುಪಡಿಸುವ ಕುರಿತಂತ ಚರ್ಚೆ ಸರ್ಕಾರದ ಮಟ್ಟದಲ್ಲಿ ಕೇಳಿ ಬರುತ್ತಿವೆ. ಇದು ಅತ್ಯಂತ ಖಂಡನೀಯ. ವಿವಿ ಆರಂಭದಿಂದ ಇಲ್ಲಿ ಉನ್ನತ ಹಾಗೂ ಉತ್ಕೃಷ್ಟ ಶಿಕ್ಷಣ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಅನುಕೂಲ ಆಗಲಿದೆ. ಸರ್ಕಾರ ಏನೋ ಕಾರಣ ನೀಡಿ ರದ್ದುಪಡಿಸುವುದು ಸರಿಯಲ್ಲ. ಸೌಲಭ್ಯಗಳನ್ನು ವಿವಿಧ ಹಂತದಲ್ಲಿ ಕಲ್ಪಿಸಿ ಮೊದಲು ವಿವಿಯ ಅಭಿವೃದ್ಧಿಗೆ ಒತ್ತು ನೀಡುವ ಕೆಲಸ ಮಾಡಲಿ.
ಡಾ| ಮಹಾಂತೇಶ ಮಲ್ಲನಗೌಡರ, ಹಿರಿಯ ಸಾಹಿತಿ
*ದತ್ತು ಕಮ್ಮಾರ