Advertisement

ಕಲಾ ಸೇವೆಗೊಂದು ಗೌರವವಿರಲಿ…ಸಾವು-ನೋವಿನಲ್ಲೊಂದು ಸಾಂತ್ವನವಿರಲಿ…

11:53 AM Feb 03, 2023 | Team Udayavani |

ಅದೊಂದು ಕಾಲವಿತ್ತು, ಕನ್ನಡ ಚಿತ್ರರಂಗದ ಹಿರಿಯರ ಕಷ್ಟಕ್ಕೆ ಧಾವಿಸುವ, ತೊಂದರೆಯಾದಾಗ ಜೊತೆಗೆ ನಿಲ್ಲುವ, ಅಂತಿಮವಾಗಿ ಗೌರವ ಪೂರ್ವಕವಾಗಿ ಕಳುಹಿಸಿಕೊಡುವ ಮನಸ್ಸುಗಳಿದ್ದ ಕಾಲವದು. ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಪೋಷಕ ನಟರಿಗೆ ಅದೊಂದು ಸಮಾಧಾನದ ಕ್ಷಣ ಕೂಡಾ. ಆದರೆ, ಇತ್ತೀಚಿನ ಕೆಲವು ಘಟನೆಗಳನ್ನು ನೋಡಿದಾಗ ಕನ್ನಡ ಚಿತ್ರರಂಗದಲ್ಲಿ ಆ ತರಹದ ಒಂದು ವಾತಾವರಣವೇ ಇಲ್ಲವೇನೋ ಎಂಬ ಭಾವನೆ ಬರುವಂತಾಗಿದೆ. ಅದಕ್ಕೆ ಕಾರಣವಾಗಿದ್ದು ಇತ್ತೀಚೆಗೆ ತೀರಿಕೊಂಡ ಕನ್ನಡ ಚಿತ್ರರಂಗದ ಇಬ್ಬರು ಪೋಷಕರ ನಟರ ಅಂತಿಮ ನಮನದ ಕ್ಷಣಗಳು.

Advertisement

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಲಕ್ಷ್ಮಣ್‌ ಹಾಗೂ ಮನ್‌ದೀಪ್‌ ರಾಯ್‌ ಇತ್ತೀಚೆಗೆ ಇಹಲೋಕ ತ್ಯಜಿಸಿದ್ದಾರೆ. ಆದರೆ, ಅವರ ಸಾವಿನ ನೋವಿನ ಜೊತೆಗೆ ಅನೇಕರಿಗೆ ಕಾಡಿದ ಪ್ರಶ್ನೆ ಚಿತ್ರರಂಗದ ಮಂದಿ ಎಲ್ಲಿದ್ದಾರೆ? ಅಂತಿಮ ಗೌರವ ಸಲ್ಲಿಸಲು ಬಾರದಷ್ಟು ಬಿಝಿಯಾಗಿಬಿಟ್ರಾ? ಆ ಹಿರಿಯ ಜೀವಗಳು ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗೆ ಒಂದು ಬೆಲೆಯೇ ಇಲ್ವಾ? ಇಂತಹ ಪ್ರಶ್ನೆಗಳು ಕಾಡಿದ್ದು ಸುಳ್ಳಲ್ಲ. ಈ ಎರಡು ಹಿರಿಯ ಜೀವಗಳ ಅಂತಿಮ ನಮನಕ್ಕೆ ಚಿತ್ರರಂಗದಿಂದ ಬಂದಿದ್ದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆದರೆ, ಈ ನಟರು ಮಾಡಿದ ಸಿನಿಮಾಗಳು 500ಕ್ಕೂ ಹೆಚ್ಚು.

ಅಂತಿಮ ನಮನಕ್ಕೆ ಚಿತ್ರರಂಗದ ಮಂದಿ ಬಾರದಿದ್ದರೆ ಏನಾಗುತ್ತದೆ, ಯಾಕಾಗಿ ಬರಬೇಕು ಎಂಬ ಪ್ರಶ್ನೆಯನ್ನು ಕೆಲವರು ಕೇಳಬಹುದು. ನಿಜ, ಬಾರದಿದ್ದರೆ ಏನೂ ಆಗುವುದಿಲ್ಲ. ಆದರೆ, ಅದೊಂದು ಭಾವನೆ. ಚಿತ್ರರಂಗದಲ್ಲಿ ಇಷ್ಟು ವರ್ಷ ಸೇವೆ ಸಲ್ಲಿಸಿದ ಹಿರಿಯ ಜೀವವನ್ನು ಚಿತ್ರರಂಗದ ಮಂದಿ ನೆನಪಿಸಿಕೊಂಡರು ಎಂಬ ಒಂದು ಸಣ್ಣ ಸಮಾಧಾನ ಆ ಕುಟುಂಬಕ್ಕಾದರೆ, “ನಮ್ಮವರು ನನ್ನ ನೋಡಲು ಬಂದರು’ ಎಂಬ ಖುಷಿ ಆ “ಆತ್ಮ’ಕ್ಕೆ. ಆದರೆ, ಈಗ ಆ ಸಮಾಧಾನ, ಖುಷಿ ಎಲ್ಲವೂ ಫಾಸ್ಟ್‌ ಫಾರ್ವಡ್‌ ಚಿತ್ರರಂಗದಲ್ಲಿ ಕಣ್ಮರೆಯಾಗಯತ್ತಿದೆ.

ಕಷ್ಟಕಾಲದಲ್ಲಿ ಬೆಳೆದು, ಗುರುತಿಸಿ ಕೊಂಡವರು

ಚಿತ್ರರಂಗ ಈಗ ಶ್ರೀಮಂತವಾಗಿದೆ. ಪೋಷಕ ನಟರು ಈಗ ಕೈ ತುಂಬಾ ಸಂಭಾವನೆ ಪಡೆಯುತ್ತಿದ್ದಾರೆ, ಸಿನಿಮಾಗಳಲ್ಲಿ ಅವರ ಪಾತ್ರದ ಗಾತ್ರ ಹಿರಿದಾಗಿದೆ. ಆದರೆ, ಕೆಲವು ವರ್ಷಗಳ ಹಿಂದೆ ಹೀಗಿರಲಿಲ್ಲ. ಪೋಷಕ ನಟರ ಸಂಭಾವನೆಯಿಂದ ಹಿಡಿದು ಅವರಿಗೆ ಸಿಗುತ್ತಿರುವ ಬಹುತೇಕ ಸಿನಿಮಾಗಳ ಪಾತ್ರಗಳು ಕೂಡಾ ಕಿರಿದಾಗಿಯೇ ಇರುತ್ತಿದ್ದವು. ಇಂತಹ ಸಂದರ್ಭದಲ್ಲಿ ಸಿನಿಮಾವನ್ನೇ ಉಸಿರಾಗಿಸಿ, ತಾಳ್ಮೆಯಿಂದ ಕಾದು, ಸಿಕ್ಕಿದ್ದರಲ್ಲೇ ಖುಷಿಪಟ್ಟ ಪರಿಣಾಮ ಅಂದಿನ ಪೋಷಕ ನಟರು 300 ರಿಂದ 500 ಸಿನಿಮಾ ಮಾಡುವಂತಾಗಿದೆ. ಹಾಗಂತ ಮಾಡಿದ ಅಷ್ಟೂ ಸಿನಿಮಾಗಳ ಸಂಭಾವನೆ ಅವರಿಗೆ ಬಂದಿರುತ್ತದೋ ಎಂದು ಹೇಳುವಂತಿಲ್ಲ. ಅದೆಷ್ಟೋ ಚೆಕ್‌ಗಳು ಬೌನ್ಸ್‌ ಆಗಿರುತ್ತವೆ. ಆದರೆ, ಅದೆಲ್ಲವನ್ನು ವಿವಾದ ಮಾಡದೇ ಕಲಾಸೇವೆ ಎಂದು ಪರಿಗಣಿಸಿ ಸಿನಿಮಾ ಮಾಡುತ್ತಾ ಹೋದವರು ಅಂದಿನ ಪೋಷಕ ನಟರು. ಅದೇ ಕಾರಣದಿಂದ ಅಂದಿನ ಕಾಲದ ಅನೇಕ ಪೋಷಕ ನಟರು ಇಂದಿಗೂ ಆರ್ಥಿಕವಾಗಿ ಸದೃಢರಾಗಿಲ್ಲ.  ಸದ್ಯದ ಪರಿಸ್ಥಿತಿ ನೋಡಿದಾಗ ನಿರ್ದೇಶಕ, ನಿರ್ಮಾಪಕ, ಹೀರೋ … ಹೀಗೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡು ಬಂದ ಅಂದಿನ ಪೋಷಕ ನಟರು ಈಗ ಚಿತ್ರರಂಗದಲ್ಲಿ “ಏಕಾಂಗಿ’ಯಾಗುತ್ತಿದ್ದಾರೆಯೇ ಎಂಬ ಭಾವನೆ ಕಾಡುವಂತಾಗಿದೆ.

Advertisement

ಕಾಲ ಬದಲಾಗಿರಬಹುದು, ಭಾವನೆ ಮಾತ್ರ ಅದೇ

ಮೊದಲೇ ಹೇಳಿದಂತೆ ಚಿತ್ರರಂಗ ಬದಲಾಗಿದೆ. ಫಾಸ್ಟ್‌ ಫಾರ್ವಡ್‌ ಕಾನ್ಸೆಪ್ಟ್ನೊಂದಿಗೆ ಮುಂದೆ ಸಾಗುತ್ತಿದೆ. ಇಂತಹ ಸಮಯದಲ್ಲಿ ಹಿರಿಯ ಕಲಾವಿದರನ್ನು ನೆನಪಿಸಿಕೊಳ್ಳದಷ್ಟು ಸಿನಿಮಂದಿ ಬಿಝಿಯಾದರೆ ಎಂಬ ಪ್ರಶ್ನೆ ಬರುವಂತಾಗಿದೆ. ಇಲ್ಲಿ ಬಿಝಿ ಎಂಬುದು ನೆಪ ಅಷ್ಟೇ. ತಮ್ಮ ಮುಂದಿರುವ ವ್ಯಕ್ತಿ, ಸನ್ನಿವೇಶಗಳನ್ನು ನೋಡಿಕೊಂಡು ಬಿಝಿ ನಿರ್ಧಾರವಾಗುತ್ತದೆ. ಭಾವನೆಗಳು ಎಲ್ಲಾ ಕಾಲಕ್ಕೂ, ಎಲ್ಲಾ ವ್ಯಕ್ತಿಗಳಿಗೂ ಒಂದೇ. ಈ ಸತ್ಯವನ್ನು ಅರ್ಥಮಾಡಿಕೊಳ್ಳುವ ವ್ಯವಧಾನಬೇಕಷ್ಟೇ. ಆದರೆ, ಇವತ್ತು ಚಿತ್ರರಂಗದ ವೇಗದ ಓಟದಲ್ಲಿ ಎಲ್ಲವೂ “ಕಮರ್ಷಿಯಲ್‌’ ಆಗಿವೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next