Advertisement

ಮಾತೃಭಾಷೆ ಪ್ರೇಮ ಇರಲಿ, ಅನ್ಯ ಭಾಷೆ ದೇಷ ಬೇಡ; ಡಾ|ಅಮೋಲ್‌

05:59 PM Jan 14, 2023 | Team Udayavani |

ಬೆಳಗಾವಿ: ಮಾತೃಭಾಷೆಯ ಮೇಲೆ ಪ್ರತಿಯೊಬ್ಬರಿಗೆ ಅಭಿಮಾನ ಹಾಗೂ ಪ್ರೀತಿ ಇರಬೇಕು. ಆದರೆ ಅನ್ಯ ಭಾಷೆಯನ್ನು ದ್ವೇಷಿಸುವ ಮನಸ್ಥಿತಿ ಇರಬಾರದು ಎಂದು ಮಹಾರಾಷ್ಟ್ರ ಸಂಸದ ಡಾ| ಅಮೋಲ್‌ ಕೋಲ್ಹೆ ಹೇಳಿದರು.

Advertisement

ತಾಲೂಕಿನ ಕಡೋಲಿ ಗ್ರಾಮದಲ್ಲಿ ಯಮಕನಮರಡಿ ವಿಧಾನಸಭಾ ಮತಕ್ಷೇತ್ರದ ಬಹುಜನ ಸಮಾಜ ವತಿಯಿಂದ ಶುಕ್ರವಾರ ನಡೆದ ಸ್ವರಾಜ್ಯ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಹಾಗೂ ಮಹಾರಾಷ್ಟ್ರ ತಾಯಿ-ಚಿಕ್ಕಮ್ಮ ಇದ್ದಂತೆ. ಈ ಪ್ರದೇಶದಲ್ಲಿ ಇರುವ ಪ್ರತಿಯೊಬ್ಬರಿಗೆ ತಾಯಿ ಪ್ರೀತಿ ಇದ್ದಷ್ಟು ಚಿಕ್ಕಮ್ಮನ ಪ್ರೀತಿಯೂ ಸಿಗುತ್ತದೆ. ಇಂಥ ಒಂದು ಬಾಂಧವ್ಯ, ಅನ್ಯೋನ್ಯತೆಯ ಪ್ರದೇಶ ಇದು. ಪ್ರೀತಿ ಹಾಗೂ ಶಿವಭಕ್ತಿಗೆ ಗಡಿ ಇರುವುದಿಲ್ಲ. ಇವು ಗಡಿ ಮೀರಿ ವ್ಯಾಪಿಸಿಕೊಂಡಿವೆ. ಈ ಎರಡೂ ರಾಜ್ಯಗಳು ರಾಷ್ಟ್ರದ ಪ್ರತೀಕ. ಮಾತೃಭಾಷೆಯ ಅಭಿಮಾನ ಇರಬೇಕು. ಅದು ಅತಿರೇಕಕ್ಕೆ ಹೋಗಬಾರದು. ಪ್ರೀತಿ, ಸಹಬಾಳ್ವೆಯಿಂದ ಭಾಷೆಯನ್ನು ಗೌರವಿಸಬೇಕು ಮತ್ತು ಪ್ರೀತಿಸಬೇಕು ಎಂದರು.

ಜಾತಿ ಮತ್ತು ಧರ್ಮ ಎರಡೂ ಕಲ್ಲುಗಳಿದ್ದಂತೆ. ಈ ಕಲ್ಲಿನಿಂದ ಗೋಡೆ ಕಟ್ಟಿದರೆ ಪರಸ್ಪರ ಮನುಷ್ಯ ಪ್ರತ್ಯೇಕವಾಗುತ್ತಾನೆ. ಇದೇ ಕಲ್ಲಿನಿಂದ ಸೇತುವೆ ನಿರ್ಮಿಸಿದರೆ ಪರಸ್ಪರರು ಸಂಪರ್ಕ ಸಾ ಧಿಸಲು ಸಾಧ್ಯವಾಗುತ್ತದೆ. ಈ ಕಲ್ಲುಗಳನ್ನು ಯುವಕರ ಕೈಯಲ್ಲಿ ಕೊಟ್ಟು ಬೇರೆಯವರ ತಲೆ ಒಡೆಯಲು ಹೇಳಿ ದ್ವೇಷ ಭಾವನೆ ಹುಟ್ಟಿಸಿ ಪ್ರಚೋದಿಸುವ ಮನಸ್ಥಿತಿಯವರೂ ಇದ್ದಾರೆ. ಆದರೆ ಈ ಕಲ್ಲುಗಳನ್ನು ಮೂರ್ತಿಯಾಗಿ ಪರಿವರ್ತಿಸುವ ಮನಸ್ಥಿತಿ ಆಗಬೇಕು ಎಂದು ಹೇಳಿದರು.

ನಾವೆಲ್ಲರೂ ದೇಶ ಮೊದಲು ಎಂಬ ಭಾವನೆಯಿಂದ ಇದ್ದೇವೆ. ಭಾರತೀಯ ಕ್ರಿಕೆಟ್‌ ತಂಡದಲ್ಲಿ ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌ , ವಿವಿಎಸ್‌ ಲಕ್ಷ್ಮಣ್‌, ಮಹಮ್ಮದ್‌ ಶಮಿ ಹೀಗೆ ಅನೇಕ ಕ್ರೀಡಾಪಟುಗಳು ಆಡುವಾಗ ಅವರನ್ನು ನಾವು ಯಾವಾಗಲೂ ಒಂದು ರಾಜ್ಯ, ಜಾತಿಗೆ ಸೀಮಿತಗೊಳಿಸುವುದಿಲ್ಲ. ಅವರ ಆಟವನ್ನು ಮೆಚ್ಚಿ ಪ್ರತಿಯೊಬ್ಬ ಭಾರತೀಯರೂ ಹುರಿದುಂಬಿಸುತ್ತಾರೆ. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಇರುತ್ತದೆ. ಜಾತಿ, ಧರ್ಮ, ಭಾಷೆ ಹೆಸರಿನಲ್ಲಿ ಪ್ರತ್ಯೇಕವಾಗುವ ಬದಲು ರಾಷ್ಟ್ರ ಮೊದಲು ಎಂಬ ಮನಸ್ಸು ನಮ್ಮದಾಗಬೇಕು ಎಂದು ಕರೆ ನೀಡಿದರು.

Advertisement

ಛತ್ರಪತಿ ಶಿವಾಜಿ ಮಹಾರಾಜರನ್ನು 350 ವರ್ಷಗಳ ನಂತರವೂ ನಾವು ನೆನಪಿಸಿಕೊಳ್ಳುತ್ತೇವೆ. ಇನ್ನೂ ಅವರು ಜೀವಂತವಾಗಿ ಉಳಿದುಕೊಂಡಿದ್ದಾರೆ. ಜಗತ್ತಿನ ಯಾವ ಪ್ರದೇಶದಲ್ಲಿಯೂ ಶಿವಾಜಿ ಮಹಾರಾಜರಂತೆ ಪರಾಕ್ರಮಿ, ಧೈರ್ಯಶಾಲಿ ರಾಜನಿಲ್ಲ. ರಾಜನಾಗಿ ಜನಿಸಿರಲಿಲ್ಲ, ಅವರು ಯಾರ ಬೆನ್ನಿಗೂ ಚೂರಿ ಹಾಕಿ ಸಾಮ್ರಾಜ್ಯ ಕಟ್ಟಲಿಲ್ಲ.

ರಾಜನಾಗಿ ಮೆರೆದು ಹಿಂದವಿ ಸ್ವರಾಜ್ಯದ ಸಂಕಲ್ಪ ಮಾಡಿದ ಮಹಾರಾಜ ನಮ್ಮ ಛತ್ರಪತಿ ಶಿವಾಜಿ ಮಹಾರಾಜರು. ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ಶಿವಾಜಿ ಮಹಾರಾಜರಲ್ಲಿಯ ಮಾನವೀಯತೆಯ ಕಾರ್ಯದಿಂದ ಅವರು ನಮ್ಮಲ್ಲಿ ದೇವರಾಗಿ ಉಳಿದುಕೊಂಡಿದ್ದಾರೆ. ಜಾತಿ, ಧರ್ಮ, ಭಾಷೆಗಿಂತ ಅವರ ಕಾರ್ಯದಿಂದ ಅಜರಾಮರವಾಗಿದ್ದಾರೆ ಎಂದು ಹೇಳಿದರು.

ಮನುಷ್ಯನಿಗಾಗಿ ಧರ್ಮ ಇಲ್ಲ. ಧರ್ಮಕ್ಕಾಗಿ ಮನುಷ್ಯ ಇದ್ದಾನೆ. ಮಾನವೀಯತೆಯ ಆಧಾರದ ಮೇಲೆ ಬದುಕಬೇಕು. ರಾಷ್ಟ್ರ ಜೀವಂತವಾಗಿದ್ದರೆ ನಾವೆಲ್ಲರೂ ಇರಲು ಸಾಧ್ಯ. ಮಣ್ಣು, ಮಾತೆಯನ್ನು ಪ್ರೀತಿಸಬೇಕು. ಪ್ರಚೋದನೆ ಮಾಡುವುದಕ್ಕಿಂತ ಬಾಂಧವ್ಯ, ಸೌಹಾರ್ದತೆ ಬೆಳೆಸಬೇಕು ಎಂದರು.

ಕಸಬಾ ನೂಲ ರಾಮನಾಥ ಗಿರಿ ಸಮಾಧಿ ಮಠದ ಶ್ರೀ ಭಗವಾನ್‌ ಗಿರಿ ಮಹಾರಾಜ ಮಾತನಾಡಿ, ತಾಯಿ ಜೀಜಾಮಾತೆಯ ಆಶೀರ್ವಾದದಿಂದ ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯ ಸ್ಥಾಪಿಸಿದರು. ಶಿವಾಜಿ ಮಹಾರಾಜರ ಧೈರ್ಯ, ಸ್ಥೈರ್ಯ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ದುರದುಂಡೀಶ್ವರ ವಿರಕ್ತಮಠದ ಶ್ರೀ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತದಲ್ಲಿ ನಾವೆಲ್ಲ ಜನಿಸಿದ್ದೇ ಸುದೈವ. ಅನೇಕ ಧರ್ಮ, ಜಾತಿಗಳಿದ್ದರೂ ಅನ್ಯೋನ್ಯತೆಯಿಂದ ಬದುಕುತ್ತಿರುವುದು ಹೆಮ್ಮೆ. ಭಾರತೀಯರಾದ ನಾವು ಧರ್ಮ ಸಹಿಷ್ಣುಗಳು. ಬದುಕಿನಲ್ಲಿ ನಾವೇನೂ ಗಳಿಸಿದರೂ ನಮ್ಮೊಂದಿಗೆ ಇರುವುದು ಧರ್ಮ ಮಾತ್ರ ಎಂದ ಅವರು, ಒಳ್ಳೆಯ ಕೆಲಸ ಮಾಡುವವರನ್ನು ನಾವು ಪ್ರೋತ್ಸಾಹಿಸಬೇಕು. ನಮಗೆ ಸಹಾಯ- ಸಹಕಾರ ಮಾಡಿದವರನ್ನು ನಾವು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದರು. ಯುವ ಮುಖಂಡ ರಾಹುಲ್‌ ಜಾರಕಿಹೊಳಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next