Advertisement

ವ್ಯರ್ಥ ವಾದಗಳ ಬಿಟ್ಟು ಜನ ಪರ, ಜನಹಿತ ಚರ್ಚೆಗಳು ನಡೆಯಲಿ

11:50 PM Aug 01, 2022 | Team Udayavani |

ಪ್ರಸಕ್ತ ಸಾಲಿನ ಸಂಸತ್‌ನ ಮುಂಗಾರು ಅಧಿವೇಶನ ಜು. 18ರಿಂದ ಶುರುವಾಗಿದೆ. ಆ ದಿನದಿಂದ ಅದು ವಿವಿಧ ಕಾರಣಗಳಿಗಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪ ನಡೆಸಲು ಸಾಧ್ಯವೇ ಆಗದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಲೋಕಸಭೆಯಲ್ಲಿ ಕಾಂಗ್ರೆಸ್‌ನ ನಾಲ್ವರು, ರಾಜ್ಯಸಭೆಯಲ್ಲಿ ವಿಪಕ್ಷಗಳ 23 ಮಂದಿ ಸಂಸದರನ್ನು ಸಸ್ಪೆಂಡ್‌ ಮಾಡಲಾಗಿದೆ. ಇಂಥ ಘಟನೆ ನಿಜವಾಗಿಯೂ ನೋವು ತರುವಂಥ ವಿಚಾರವೇ ಹೌದು.

Advertisement

ಲೋಕಸಭೆಗೆ ಸಂಬಂಧಿಸಿದಂತೆ ನೋಡುವುದಾದರೆ, ಸೋಮವಾರ ಕಾಂಗ್ರೆಸ್‌ನ ನಾಲ್ವರು ಸಂಸದರ ಅಮಾನತನ್ನು ಸ್ಪೀಕರ್‌ ಓಂ ಬಿರ್ಲಾ ವಾಪಸ್‌ ಪಡೆದುಕೊಂಡಿದ್ದಾರೆ.

ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಪಕ್ಷದ ಸಂಸದರ ವರ್ತನೆ ವಿಷಾದ ವ್ಯಕ್ತಪಡಿಸುವುದರ ಮೂಲಕ ಸರಕಾರ ಮತ್ತು ಪ್ರಧಾನ ವಿಪಕ್ಷ ನಡುವೆ ಉಂಟಾಗಿದ್ದ ಬಿಕ್ಕಟ್ಟಿಗೆ ಮುಕ್ತಾಯ ಹಾಡಿದ್ದಾರೆ. ಇದೇ ನಿಲುವನ್ನು ಅಧಿವೇಶನದ ಆರಂಭದ ದಿನಗಳಿಂದಲೇ ಆಡಳಿತ ಮತ್ತು ಪ್ರತಿಪಕ್ಷಗಳು ಹೊಂದಿರಬಹುದಾಗಿತ್ತು. ಪ್ರಜಾಪ್ರಭುತ್ವದಲ್ಲಿ ಆಡಳಿತ ಮತ್ತು ವಿಪಕ್ಷಗಳು ಯಾವತ್ತೂ ಸಹಮತದ ನಿಲುವು ಹೊಂದಿದ್ದರೆ ಮಾತ್ರ ಆಡಳಿತ ವ್ಯವಸ್ಥೆಯ ರಥ ಸರಾಗವಾಗಿ ಚಲಿಸಲು ಸಾಧ್ಯ.

ಸಂಸದರಿಗೂ ಕೂಡ ಪ್ರತಿಭಟಿಸುವ ಹಕ್ಕು ಇದೆ ಎಂದು ಸದನದ ಮುಂಗಟ್ಟೆಯ ಮುಂದೆ ಬಂದು, ಫ‌ಲಕಗಳನ್ನು ಹಿಡಿದು, ಘೋಷಣೆ ಕೂಗುವುದೂ ಸರಿಯಲ್ಲ. ವಾರದ ಹಿಂದೆ ನಡೆದದ್ದೂ ಅದೇ ಆಗಿತ್ತು. ಬೆಲೆ ಏರಿಕೆ ಮತ್ತು ಜನರಿಗೆ ಅಗತ್ಯ ಇರುವ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕು ಎಂಬ ಕಾರಣಕ್ಕಾಗಿ ಗದ್ದಲ ಎಬ್ಬಿಸುವ ವಿಪಕ್ಷಗಳ ಧೋರಣೆಯೂ ಪ್ರಶ್ನಾರ್ಹವೇ ಆಗುತ್ತದೆ. ಜು. 18ರಿಂದ ಜು. 29ರವರೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪ ನಡೆದೇ ಇಲ್ಲ. ಒಟ್ಟು 25 ದಿನಗಳ ಅಧಿವೇಶನದಲ್ಲಿ 15 ದಿನ ವ್ಯರ್ಥವಾಗಿದೆ.

ಲೋಕಸಭೆಯಲ್ಲಿ ಸಂಸದರ ಅಮಾನತು ವಾಪಸ್‌ ಪಡೆದ ಬೆನ್ನಲ್ಲಿಯೇ ರಾಜ್ಯಸಭೆಯಲ್ಲಿ ಕೂಡ ಅಂಥದ್ದೇ ಸೌಹಾರ್ದಯುತ ವಾತಾವರಣ ಮೂಡಬೇಕು. ಸದ್ಯ ನೀ ಕೊಡದಿದ್ದರೆ ನಾ ಬಿಡಲಾರೆ ಎಂಬ ಧೋರಣೆಯನ್ನು ಕೇಂದ್ರ ಸರಕಾರವೂ ಅನುಸರಿಸುವಂತೆ ಇಲ್ಲ ಮತ್ತು ವಿಪಕ್ಷಗಳೂ ಅದಕ್ಕೆ ಸಹಕರಿಸುವುದಿಲ್ಲ ಎಂದು ಹೇಳುವಂತೆ ಇಲ್ಲ. ಕೋರೋನಾ ಸೋಂಕು ಇಳಿಮುಖವಾದರೂ, ಅದರಿಂದ ಉಂಟಾಗಿರುವ ನಂತರದ ಪರಿಣಾಮಗಳಿಂದ ಜನರಿಗೆ ನೆರವು ನೀಡುವ ಕಾರ್ಯಕ್ರಮಗಳು ಆಗಬೇಕಾಗಿವೆ. ದೇಶದ ವಿವಿಧ ಭಾಗಗಳಲ್ಲಿ ಆಸ್ಪತ್ರೆಗಳು ಮತ್ತು ಅದಕ್ಕೆ ಸಂಬಂಧಿಸಿದ ಮೂಲ ಸೌಕರ್ಯಗಳು ಸುಧಾರಣೆಯಾಗುತ್ತಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಎನ್ನುವುದು ಹಗಲಿನಷ್ಟೇ ಸತ್ಯ.

Advertisement

ವಿವಿಧ ಜೀವನಾವಶ್ಯಕ ವಸ್ತುಗಳ ದರ ಏರಿಕೆಯಾಗಿರುವ ಬಗ್ಗೆಯೂ ಎರಡೂ ಸದನಗಳಲ್ಲಿ ಚರ್ಚೆ ಆಗಬೇಕಾಗಿದೆ ಮತ್ತು ದರ ಇಳಿಕೆ ಬಗ್ಗೆ ಜನರಿಗೆ ಅನುಕೂಲವಾಗುವಂಥ ನಿರ್ಣಯಗಳು ಚರ್ಚೆಯಾಗಿ, ಜಾರಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಆಡಳಿತ ಮತ್ತು ವಿಪಕ್ಷಗಳ ನಾಯಕರು ಇನ್ನಾದರೂ, ಕಾರ್ಯಸೂಚಿ ಕೈಗೆತ್ತಿಕೊಳ್ಳಬೇಕಾಗಿದೆ. ಆ. 12ರ ವರೆಗೆ ನಡೆಯಲಿರುವ ಉಳಿದಾರ್ಧದ ಅಧಿವೇಶನದಲ್ಲಿ ಜನರ ಸಮಸ್ಯೆ ಬಗ್ಗೆ ಮುಕ್ತ ಮನಸ್ಸಿನ ವಿಚಾರ ವಿನಿಯಮಗಳು ನಡೆಯಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next