ದಾವಣಗೆರೆ: ಮಕ್ಕಳ ಸರ್ವತೋಮುಖ ಅಭಿವೃದ್ಧಿ,ಸೌಲಭ್ಯಕ್ಕಾಗಿ ಮಕ್ಕಳಿಗಾಗಿಯೆ ಪ್ರತ್ಯೇಕ ಸಚಿವಾಲಯ, ಸಚಿವರ ನೇಮಕಕ್ಕೆ ರಾಜ್ಯ ಸರ್ಕಾರ ಚಿಂತನೆ ಮಾಡಬೇಕು ಎಂದು ಮಕ್ಕಳ ಹಕ್ಕುಗಳ ಕ್ಲಬ್ ಒಕ್ಕೂಟ ಜಿಲ್ಲಾ ಅಧ್ಯಕ್ಷೆ ಎಚ್. ಕರಿಬಸಮ್ಮ ಒತ್ತಾಯಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದೆ. ಮಕ್ಕಳಿಗಾಗಿ ಬಿಡುಗಡೆಯಾಗುವ ಅನುದಾನ, ನೀಡಲಾಗುವ ಸೌಲಭ್ಯಗಳ ಬಗ್ಗೆ ಗೊತ್ತೇ ಆಗುವುದಿಲ್ಲ. ದೇಶದ ಮುಂದಿನ ಪ್ರಜೆಗಳಾದ ಮಕ್ಕಳಿಗಾಗಿಯೇ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯ, ಸಚಿವರನ್ನ ನೇಮಕ ಮಾಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಗ್ರಾಮ ಪಂಚಾಯತಿಗಳ ಮೂಲಕವೇ ಕಡ್ಡಾಯವಾಗಿ ಮಕ್ಕಳ ಗ್ರಾಮ ಸಭೆ ನಡೆಸಬೇಕು. ಗ್ರಾಮ ಪಂಚಾಯತಿ ಪ್ರತಿನಿಧಿಗಳು, ಅಧಿಕಾರಿಗಳು ಮಕ್ಕಳ ಗ್ರಾಮ ಸಭೆ ನಡೆಸುವುದರಿಂದ ಮಕ್ಕಳ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು, ಪರಿಹಾರ ದೊರೆಯಲಿದೆ. ಹಾಗಾಗಿ ಎಲ್ಲಾ ಗ್ರಾಮ ಪಂಚಾಯತಿಗಳೇ ಕಡ್ಡಾಯವಾಗಿ ಮಕ್ಕಳ ಗ್ರಾಮ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.
ಮಕ್ಕಳ ಸಮಸ್ಯೆಗೆ ಸ್ಪಂದಿಸುವಂತಹ ಗ್ರಾಮ ಪಂಚಾಯತಿಗಳ ಗುರುತಿಸಿ, ಪುರಸ್ಕರಿಸುವುದರಿಂದ ಇತರೆ ಗ್ರಾಮ ಪಂಚಾಯತ್ ಗಳಲ್ಲೂ ಜಾಗೃತಿ ಮೂಡಲು ಸಹಾಯವಾಗುತ್ತದೆ. ಪ್ರತಿ ವರ್ಷ ಜಿಲ್ಲೆಗೆ ಒಂದು ಪಂಚಾಯತಿಗೆ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ…ಎಂದು ಪುರಸ್ಕಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಎಲ್ಲಾ ಶಾಲೆಗಳಲ್ಲಿರುವ ಮಕ್ಕಳ ಹಕ್ಕುಗಳ ಕ್ಲಬ್‌ಗಳನ್ನು ಸರ್ಕಾರವೇ ನಡೆಸುವುದರಿಂದ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು ಜವಾಬ್ದಾರಿಯಿಂದ ಮಕ್ಕಳ ಹಕ್ಕುಗಳ ಕ್ಲಬ್ ನಿರ್ವಹಣೆ ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು. ಒಕ್ಕೂಟದ ಉಪಾಧ್ಯಕ್ಷ ಡಿ.ಎಸ್. ಮನೋಜ್ ಮಾತನಾಡಿ, ಗ್ರಾಮ ಪಂಚಾಯತ್‌ಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ಕಡ್ಡಾಯವಾಗಿ ರಚನೆ ಆಗಬೇಕು. ಗ್ರಾಮ ಪಂಚಾಯತಿಗಳೇ ನಡೆಸಬೇಕು. ಕೆಡಿಪಿ ಸಭೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ಅಜೆಂಡಾ ಆಗುವ ಜೊತೆಗೆ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.
ಪ್ರತಿ ವರ್ಷ ಪ್ರಧಾನಮಂತ್ರಿಗಳು ರಾಷ್ಟ್ರೀಯ ಸಮಾಲೋಚನಾ ಸಭೆ ಹಮ್ಮಿಕೊಂಡು ಮಕ್ಕಳ ಅಹವಾಲು ಕೇಳಬೇಕು. ದೇಶದ್ಯಾಂತ ಶೇ.41ರಷ್ಟಿರುವ ಮಕ್ಕಳಿಗೆ ಅವರ ಹಕ್ಕು, ಸವಲತ್ತು ಒದಗಿಸಲು ಅನುಕೂಲ ಆಗುವಂತೆ ಬಜೆಟ್ ನಲ್ಲಿ ಶೇ.6 ರಿಂದ 9 ರಷ್ಟು ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಡಾನ್‌ಬಾಸ್ಕೋ ಸಂಸ್ಥೆ ನಿರ್ದೇಶಕ ಫಾ| ಸಿರಿಲ್ ಸಗಾಯ್ ರಾಜ್ ಮಾತನಾಡಿ, ಡಾನ್‌ಬಾಸ್ಕೋ ಸಂಸ್ಥೆ ಬಾಲ ಕಾರ್ಮಿಕತೆ ನಿರ್ಮೂಲನೆ, ಬಾಲಕಾರ್ಮಿಕರನ್ನು ಮುಖ್ಯವಾಹಿನಿಗೆ ತರುವ, ಮಕ್ಕಳ ಹಕ್ಕುಗಳ ಕ್ಲಬ್ ರಚನೆ ವಿವಿಧ ರಚನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು. ಮಕ್ಕಳ ಹಕ್ಕುಗಳ ಕ್ಲಬ್ ಒಕ್ಕೂಟದ ಎಂ. ಕರಿಬಸಪ್ಪ, ಟಿ. ಅಂಜಿನಪ್ಪ, ಫಾ| ಜೋಸ್ ಜೋಸೆಫ್, ಮಂಜುನಾಥ್, ಈರಾನಾಯ್ಕ ಇತರರು ಸುದ್ದಿಗೋಷ್ಠಿಯಲ್ಲಿದ್ದರು.