Advertisement

ನ್ಯಾಯಾಂಗ ತನಿಖೆಯಾಗಲಿ: ಸಿದ್ದು

11:38 PM Feb 19, 2020 | Team Udayavani |

ವಿಧಾನಸಭೆ: ವಿಧಾನಸಭೆ‌ಯಲ್ಲೂ ಮಂಗಳೂರಿನ ಗೋಲಿಬಾರ್‌ ಘಟನೆಯ ಪ್ರತಿಧ್ವನಿ ಕೇಳಿ ಬಂತು. ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇದೊಂದು ಪೊಲೀಸರ ಪೂರ್ವಯೋಜಿತ ಕೃತ್ಯ. ಘಟನೆಯಲ್ಲಿ ಇಬ್ಬರು ಅಮಾಯಕ ಮುಸ್ಲಿಮರು ಪ್ರಾಣ ಕಳೆದುಕೊಂಡಿದ್ದು, ಅದರ ಹೊಣೆಯನ್ನು ಸರ್ಕಾರ, ಪೊಲೀಸ್‌ ಇಲಾಖೆ ಹೊರಬೇಕು. ಪ್ರಕರಣವನ್ನು ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

Advertisement

ಮಂಗಳೂರು ಪೊಲೀಸ್‌ ಆಯುಕ್ತರೇ ನಿಂತು ಗೋಲಿಬಾರ್‌ಗೆ ಸೂಚಿಸಿದ್ದಾರೆ. ನಿಷೇಧಾಜ್ಞೆ ಜಾರಿಗೊಳಿಸಿದ ಆಯುಕ್ತರೇ ಇಬ್ಬರ ಸಾವಿಗೆ ಕಾರಣ. ಮುಖ್ಯ ಮಂತ್ರಿಗಳು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದರೂ ಬಳಿಕ ಮೃತರ ಹೆಸರು ಎಫ್ಐಆರ್‌ನಲ್ಲಿದೆ ಎಂಬ ಕಾರಣಕ್ಕೆ ಪರಿಹಾರ ತಡೆಹಿಡಿದರು. ಇದಕ್ಕೆ ಯಾರ ಒತ್ತಡವಿದೆ ಎಂದು ಪ್ರಶ್ನಿಸಿದರು.

ಅಲ್ಲದೆ, ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ಹೇರಿದ್ದು ಕಾನೂನುಬಾಹಿರ ಎಂದಿರುವ ನ್ಯಾಯಾಲಯ ಹಾಗೂ ಸರಿಯಾದ ಸಾಕ್ಷ್ಯ ಒದಗಿಸದ ಕಾರಣ 21 ಮಂದಿಗೆ ಜಾಮೀನು ದೊರೆತ ವಿಚಾರವನ್ನು ಪ್ರಸ್ತಾಪಿಸಿದರು. ಇದು ಸದನದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿತು. ಕಾಂಗ್ರೆಸ್‌- ಬಿಜೆಪಿ ಶಾಸಕರ ನಡುವೆ ನಿರಂತರ ವಾಕ್ಸಮರಕ್ಕೆ ನಾಂದಿ ಹಾಡಿತು.

ಇದರಿಂದಾಗಿ ಸದನವನ್ನು ಮುಂದೂಡಬೇಕಾಯಿತು. ಮತ್ತೆ ಕಲಾಪ ಆರಂಭವಾದಾಗ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಕಾಂಗ್ರೆಸ್‌ನ ಯು.ಟಿ. ಖಾದರ್‌, “ಸಿಎಎ ವಿರುದ್ಧ ದೇಶದಲ್ಲಿ ಬೆಂಕಿ ಹೊತ್ತಿದ್ದು, ರಾಜ್ಯದಲ್ಲೂ ಹೊತ್ತಿಕೊಳ್ಳುತ್ತದೆ’ ಎಂದು ಹೇಳಿದ್ದಾರೆ. ಇದು ದೇಶದ್ರೋಹದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಇದಕ್ಕೆ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿ ಯಿಸಿ, “ಖಾದರ್‌ ಹೇಳಿಕೆ ವಿರುದ್ಧದ ಪ್ರಕರಣ ನ್ಯಾಯಾಲಯದಲ್ಲಿದ್ದು,

ಈ ರೀತಿ ಚರ್ಚಿಸುವುದು ನ್ಯಾಯಾಂಗ ನಿಂದನೆಯಾಗುವುದಿಲ್ಲವೆ. ತೀರ್ಪಿನ ಮೇಲೆ ಪ್ರಭಾವ ಬೀರಿದಂತಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್‌ನ ಆರ್‌.ವಿ.ದೇಶಪಾಂಡೆ, ಪ್ರಿಯಾಂಕ್‌ ಖರ್ಗೆ ಇತರರು ಆಕ್ಷೇಪ ವ್ಯಕ್ತಪಡಿ ಸಿದರು. ಈ ಬಗ್ಗೆ ಕೆಲಹೊತ್ತು ಗದ್ದಲ ನಡೆಯಿತು.

Advertisement

ಬೆಂಕಿ ಹಚ್ಚುತ್ತೇವೆ ಎಂದವರ್ಯಾರು?: ಆಗ ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌, ಹಾಗಾದರೆ ಬೆಂಕಿ ಹಚ್ಚುತ್ತೇವೆ ಎಂದವರ್ಯಾರು ಎಂದು ಪ್ರಶ್ನಿಸಿದ್ದು, ಸದನದಲ್ಲಿ ಮತ್ತೆ ಗದ್ದಲಕ್ಕೆ ಕಾರಣವಾಯಿತು. ಬಿಜೆಪಿಯ ವೇದವ್ಯಾಸ ಕಾಮತ್‌, ಹರೀಶ್‌ ಪೂಂಜಾ ಇತರರು, ಪೆಟ್ರೋಲ್‌ ಬಾಂಬ್‌, ಇಟ್ಟಿಗೆ ತಂದವರು ಯಾರು ಎಂದು ಕೆಣಕಿದರು.

ಚರ್ಚೆ ವೇಳೆ, ಮಧ್ಯ ಪ್ರವೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಣ್ಣ ಪುಟ್ಟ ಪ್ರಕರಣದಲ್ಲೂ ಜಾಮೀನು ಕೊಡಬಾರದು ಎಂದು ವಾದಿಸುವ ಸರ್ಕಾರಿ ವಕೀಲರು ಇಂತಹ ಪ್ರಕರಣದಲ್ಲಿ ಸರಿಯಾಗಿ ವಾದ ಮಾಡಿಲ್ಲ ಎಂದರೆ ಹೇಗೆ. ಇದು ಕಾನೂನು ಇಲಾಖೆಯ ವೈಫ‌ಲ್ಯವಲ್ಲವೇ. ಇಂತಹವರನ್ನು ಯಾಕೆ ಇಟ್ಟುಕೊಂಡಿದ್ದೀರಿ. ಸರ್ಕಾರದ ವೈಫ‌ಲ್ಯವಲ್ಲವೇ ಎಂದು ಪ್ರಶ್ನಿಸಿದರು.

ಮಾತು ಮುಂದುವರಿಸಿದ ಸಿದ್ದು, ಕೊಪ್ಪಳದ ಆನೆಗುಂದಿ ಉತ್ಸವದಲ್ಲಿ ಕವಿ ಸಿರಾಜ್‌ ಅವರು ಪದ್ಯ ಓದಿದ್ದಕ್ಕೆ ಪ್ರಕರಣ ದಾಖಲಿಸಿ ಒಂದು ದಿನ ಜೈಲಿಗೆ ಕಳುಹಿಸಲಾಗಿತ್ತು. ಆರ್‌ಎಸ್‌ಎಸ್‌ ಮುಖಂಡರಾದ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸ ನಾಟಕ ಪ್ರದರ್ಶನವಾಗಿದೆ. ಬಾಬರಿ ಮಸೀದಿ ಧ್ವಂಸ ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಹಾಗಿದ್ದರೂ ಅವರ ವಿರುದ್ಧ ದೇಶದ್ರೋಹದ ಪ್ರಕರಣವಿಲ್ಲ ಎಂದು ಹೇಳಿ ಮಾತಿಗೆ ವಿರಾಮ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next