Advertisement

ಸಮಗ್ರ ಅಭಿವೃದ್ಧಿಗೆ ಯುವ ಸಮೂಹ ಕೈಜೋಡಿಸಲಿ: ಸಂತೋಷ್‌

01:14 AM Feb 18, 2020 | mahesh |

ಕಲ್ಲಡ್ಕ: ದೇಶದ ಪ್ರಜೆಗಳನ್ನು ಸ್ವಾವಲಂಬಿ, ಸಶಕ್ತರನ್ನಾಗಿಸುವ ಬದ್ಧತೆ ಹೊಂದಿರುವ ಸರಕಾರವು ನವ
ಭಾರತದ ಸಂಕಲ್ಪವನ್ನು ಭಾರತೀಯರ ಮುಂದೆ ಇಟ್ಟಿದೆ. ವಿದ್ಯಾರ್ಥಿ ಯುವ ಸಮೂಹ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಕರೆ ನೀಡಿದರು.

Advertisement

ಅವರು ಸೋಮವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಸಶಕ್ತ ಭಾರತ ಸದೃಢ ಹೆಜ್ಜೆಗಳು ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಆರ್ಥಿಕ ಮತ್ತು ರಕ್ಷಣೆಯ ಪಾತ್ರ ವಿಷಯದ ಕುರಿತು ಮಾತನಾಡಿದರು. ಆರ್ಥಿಕವಾಗಿ ಹಿಂದೆ ಬಿದ್ದಿರುವ ಎಲ್ಲರನ್ನೂ ಮುಂದೆ ತರುವ ಕೆಲಸಕ್ಕೆ
ನಾವು ಬದ್ಧರಾಗಬೇಕು. ವ್ಯವಸ್ಥೆಯ ಆಧಾರದಲ್ಲಿ ದೇಶ ಪ್ರಗತಿ ಸಾಧಿಸಬೇಕು. ಅಂತಹ ದಿನಗಳು ಹತ್ತಿರ ಬರುತ್ತಿವೆ ಎಂದು ಸಂತೋಷ್‌ ತಿಳಿಸಿದರು. ಮಂಗಳೂರು ವಿ.ವಿ. ಪ್ರಾಧ್ಯಾಪಕ ಪಿ.ಎಲ್‌. ಧರ್ಮ ಸಮನ್ವಯಕಾರರಾಗಿದ್ದರು.

ಮೋದಿ ನಾಯಕತ್ವ
ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ| ಪ್ರಭಾಕರ್‌ ಭಟ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನಿ ಮೋದಿ ನಾಯಕತ್ವ ಸಿಕ್ಕಿರುವುದು ನಮ್ಮ ಭಾಗ್ಯ. ಸದೃಢ ಭಾರತದ ಹೆಜ್ಜೆಗಾಗಿ, ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಉತ್ತಮ ವಿಚಾರಗಳ ಚರ್ಚೆ ಆಗಬೇಕಾಗಿದೆ, ಅದು ವಿದ್ಯಾರ್ಥಿಗಳ ಮೂಲಕ ಯಶಸ್ವಿ ಯಾಗಿ ನಡೆಯಬೇಕು ಎಂದರು.

ರಾಜಕೀಯ ಸಂಚು
ಸಾಮಾಜಿಕ ಕಾರ್ಯಕರ್ತೆ ಬೆಂಗಳೂರಿನ ಮಾಳವಿಕಾ ಅವಿನಾಶ್‌ ದೀಪ ಬೆಳಗಿಸಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹಿಂಸಾ ಪ್ರತಿಭಟನೆಯ ಹಿಂದೆ ವ್ಯವಸ್ಥಿತ ರಾಜಕೀಯದ ಸಂಚಿದೆ. ಮೂರು ತಿಂಗಳಿನ ಸುದೀರ್ಘ‌ ಹೋರಾಟಕ್ಕೆ ಆರ್ಥಿಕ ಸಂಪನ್ಮೂಲ ನೀಡಿದ್ದು ಯಾರು. ಅಶಾಂತಿ ಸೃಷ್ಟಿಸುವುದು ಇದರ ಉದ್ದೇಶವಲ್ಲವೇ ಎಂದು ಪ್ರಶ್ನಿಸಿದರು. ಸಂಘದ ಪ್ರಚಾರಕ ಸುನಿಲ್‌ ಕುಲಕರ್ಣಿ ಸಮನ್ವಯಕಾರರಾಗಿದ್ದರು.

ಮೂರನೇ ವಿಚಾರಗೋಷ್ಠಿಯಲ್ಲಿ ಬೆಂಗಳೂರಿನ ಆರೋಹಿ ರಿಸರ್ಚ್‌ ಫೌಂಡೇಶನ್‌ ನಿರ್ದೇಶಕ ಎಂ.ಎಸ್‌. ಚೈತ್ರ “ಜನಸಂಖ್ಯೆ ಲಾಭವೇ- ಅಪಾಯವೇ’ ವಿಷಯದ ಬಗ್ಗೆ ಮಾತನಾಡಿದರು. ನಾಲ್ಕನೇ ವಿಚಾರಗೋಷ್ಠಿ ಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮೈಸೂರಿನ ಬಿ.ವಿ. ವಸಂತ್‌ ಕುಮಾರ್‌ “ಬೌದ್ಧಿಕ ದಾಸ್ಯದಿಂದ ಮೇಲೇಳುತ್ತಿದೆಯೇ ಭಾರತ’ ಎಂಬ ವಿಷಯದ ಕುರಿತು ಮಾತನಾಡಿದರು.
ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ನಾರಾಯಣ ಸೋಮಯಾಜಿ, ವಸಂತ ಮಾಧವ ಉಪಸ್ಥಿತರಿದ್ದರು.
ಕೃಷ್ಣಪ್ರಸಾದ್‌ ಕಾಯರ್‌ಕಟ್ಟೆ ಸ್ವಾಗತಿಸಿ, ಯತಿರಾಜ್‌ ಪೆರಾಜೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next