Advertisement

ಕುಸ್ತಿ ಪಟುಗಳಿಗೆ ಈಗಲಾದರೂ ನ್ಯಾಯ ಸಿಗಲಿ

01:07 AM Jun 06, 2023 | Team Udayavani |

ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ಅವರ ಬಂಧನ ಮತ್ತು ರಾಜೀನಾಮೆಗೆ ಆಗ್ರಹಿಸಿ ಕಳೆದ ಒಂದೂವರೆ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿ ಪಟುಗಳು, ಸೋಮವಾರದಿಂದ ರೈಲ್ವೇಯಲ್ಲಿನ ಕೆಲಸಕ್ಕೆ ಹಾಜರಾಗಿದ್ದಾರೆ. ಇಡೀ ವಿವಾದ ಆರಂಭವಾದ ಬಳಿಕ ಶನಿವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕುಸ್ತಿ ಪಟುಗಳ ಜತೆ ಸುದೀರ್ಘ‌ ಚರ್ಚೆ ನಡೆಸಿ, ನ್ಯಾಯ ಸಿಗುವ ಭರವಸೆ ಪಡೆದ ಮೇಲೆ ಕೆಲಸಕ್ಕೆ ಹಾಜರಾಗಿದ್ದಾರೆ. ಆರಂಭದಿಂದಲೂ ಬ್ರಿಜ್‌ಭೂಷಣ್‌ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದ ಕುಸ್ತಿ ಪಟುಗಳು ಈಗ ಕೆಲಸಕ್ಕೆ ತೆರಳಿರುವುದು ಸದ್ಯ ಉತ್ತಮ ನಡೆಯಂತೆ ಕಂಡು ಬರುತ್ತಿದೆ.

Advertisement

ಆದರೆ ಕೆಲಸಕ್ಕೆ ತೆರಳಿದ ಮಾತ್ರಕ್ಕೆ ನಾವು ಪ್ರತಿಭಟನೆ ಬಿಟ್ಟಿದ್ದೇವೆ ಎಂದರ್ಥವಲ್ಲ ಎಂದು ಹೇಳುವ ಮೂಲಕ ವಿನೇಶ್‌ ಪೊಗಟ್‌, ಸಾಕ್ಷಿ ಮಲಿಕ್‌ ಮತ್ತು ಭಜರಂಗ್‌ ಪೂನಿಯ ತಮ್ಮ ಪಟ್ಟು ಸಡಿಲಿಸಿಲ್ಲ ಎಂಬ ವಿಚಾರವೂ ಮನದಟ್ಟಾಗಿದೆ. ಇಲ್ಲಿ ಗೃಹ ಸಚಿವರಿಂದಲೇ ಭರವಸೆ ಸಿಕ್ಕಿರುವುದರಿಂದ ಕೆಲಸಕ್ಕೆ ಆಗಮಿಸಿದ್ದಾರೆ ಅಷ್ಟೇ. ಆದರೆ ಗೃಹ ಸಚಿವರ ಭರವಸೆಯೂ ಸುಳ್ಳಾದರೆ, ಒಂದೊಮ್ಮೆ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇದ್ದರೆ ಮತ್ತೆ ಕುಸ್ತಿ ಪಟುಗಳು ಪ್ರತಿಭಟನೆಗೆ ಇಳಿಯುವುದು ಖಂಡಿತ ಎಂಬುದು ಸ್ಪಷ್ಟ.

ಸಾಮಾನ್ಯವಾಗಿ ಲೈಂಗಿಕ ಕಿರುಕುಳದಂಥ ಕೇಸುಗಳಲ್ಲಿ ಪೊಲೀಸರ ಕ್ರಮ ತ್ವರಿತವಾಗಿರಬೇಕು ಎಂಬುದನ್ನು ಹಲವಾರು ಬಾರಿ ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ ಇಲ್ಲಿ ಈ ನಿಯಮ ಪಾಲನೆಯಾಗಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ದಿಲ್ಲಿ ಪೊಲೀಸರು ಇಷ್ಟು ದಿನವಾದರೂ ಏಕೆ ಬ್ರಿಜ್‌ಭೂಷಣ್‌ ವಿಚಾರಣೆ ನಡೆಸಿಲ್ಲ, ತನಿಖೆಗೆ ಒಳಪಡಿಸಿಲ್ಲ ಎಂಬ ಸಂಗತಿ ಇನ್ನೂ ಪ್ರಶ್ನಾರ್ಹವಾಗಿಯೇ ಉಳಿದಿದೆ. ಅಲ್ಲದೆ ಬ್ರಿಜ್‌ಭೂಷಣ್‌ ವಿರುದ್ಧ ಎಫ್ಐಆರ್‌ ದಾಖಲಾಗಿದ್ದು ಕುಸ್ತಿ ಪಟುಗಳ ಪ್ರತಿಭಟನೆ ಆರಂಭವಾದ ಅನಂತರ. ಇದಾದ ಮೇಲೆ ಕೇಸಿನ ಪ್ರಗತಿ ಎಲ್ಲಿದೆ ಎಂಬುದು ಕುಸ್ತಿ ಪಟುಗಳಿಗೆ ಗೊತ್ತಾಗಬೇಕಾಗಿದೆ. ಒಂದೊಮ್ಮೆ ಬ್ರಿಜ್‌ಭೂಷಣ್‌ ವಿಚಾರಣೆ ನಡೆಸಿದ್ದರೆ, ತನಿಖೆಯ ಪ್ರಗತಿ ಬಗ್ಗೆಯಾದರೂ ಗೊತ್ತಾಗುತ್ತಿತ್ತು. ಹೀಗಾಗಿಯೇ ಅಮಿತ್‌ ಶಾ ಭೇಟಿ ವೇಳೆ ಕುಸ್ತಿ ಪಟುಗಳು ತ್ವರಿತವಾಗಿ ಚಾರ್ಜ್‌ಶೀಟ್‌ ಸಲ್ಲಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ದಿಲ್ಲಿ ಪೊಲೀಸರು ತ್ವರಿತವಾಗಿ ವಿಚಾರಣೆ ನಡೆಸಿ, ಆರೋಪಪಟ್ಟಿ ನಿಗದಿ ಪಡಿಸಬೇಕು.

ದೇಶದ ಕಾನೂನುಗಳು ಒಬ್ಬರ ಅಥವಾ ಆಳುವವರ ಪರ ಇದೆ ಎಂಬ ಭಾವನೆ ಜನರಲ್ಲಿ ಬರದಂತೆ ಮಾಡುವುದು ಸರಕಾರಗಳ ಆದ್ಯ ಕರ್ತವ್ಯ. ಬ್ರಿಜ್‌ಭೂಷಣ್‌ ವಿರುದ್ಧ ಕ್ರಮ ತೆಗೆದುಕೊಳ್ಳುವುದು ವಿಳಂಬವಾದಷ್ಟು ಕುಸ್ತಿ ಪಟುಗಳಲ್ಲಿ ಅಥವಾ ಜನರಲ್ಲಿ ಇಂಥ ಭಾವನೆ ಹೆಚ್ಚಾಗುವುದು ಸಾಮಾನ್ಯ. ಈಗಾಗಲೇ ಮೇ 28ರಂದು ಕುಸ್ತಿ ಪಟುಗಳ ಪ್ರತಿಭಟನೆ ವೇಳೆ ದಿಲ್ಲಿ ಪೊಲೀಸರು ನಡೆದುಕೊಂಡ ಕ್ರಮ ಜಗತ್ತಿನಾದ್ಯಂತ ಆಕ್ರೋಶಕ್ಕೂ ಕಾರಣವಾಗಿದೆ. ಹೀಗಾಗಿ ಜನರ ನಂಬಿಕೆ ಮತ್ತು ಕುಸ್ತಿ ಪಟುಗಳ ನಂಬಿಕೆ ಉಳಿಸಿಕೊಳ್ಳುವುದು ದಿಲ್ಲಿ ಪೊಲೀಸರ ಸದ್ಯದ ಆದ್ಯತೆಯಾಗಿದ್ದು, ಅವರಿಗೆ ನ್ಯಾಯ ಕೊಡಬೇಕಾಗಿದೆ. ತ್ವರಿತಗತಿಯಲ್ಲಿ ಆರೋಪ ಪಟ್ಟಿ ದಾಖಲಿಸಿ ಬ್ರಿಜ್‌ಭೂಷಣ್‌ ಅವರಿಗೆ ಶಿಕ್ಷೆಯಾಗುವಂತೆ ಮಾಡಬೇಕಾಗಿದೆ. ಆಗಷ್ಟೇ ಕೇಂದ್ರ ಸರಕಾರವೂ ತನ್ನ ಮಾತು ಉಳಿಸಿಕೊಂಡಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next