Advertisement

ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳು ಜಾರಿಗೆ ಬರಲಿ

11:11 PM Jul 01, 2021 | Team Udayavani |

ಆರ್ಥಿಕ ಪ್ರಗತಿಗೆ ಕಾರ್ಮಿಕ ಬಲದ ಭಾಗವಹಿಸುವಿಕೆ ಪ್ರಮುಖ ಘಟ್ಟವಾಗಿದೆ. ರಾಜ್ಯದಲ್ಲಿ ಪುರುಷ ಮತ್ತು ಮಹಿಳೆಯರ ಕಾರ್ಮಿಕ ಜನಸಂಖ್ಯಾ ಪ್ರಮಾಣ ಕ್ರಮವಾಗಿ ಶೇ. 74.0 ಹಾಗೂ ಶೇ.24.8ರಷ್ಟಿದ್ದು, ಇದು ಅಖಿಲ ಭಾರತ ಸರಾಸರಿಗಿಂತ ಹೆಚ್ಚಾಗಿದೆ. ಮುಖ್ಯವಾಗಿ ಸಂಘಟಿತ ವಲಯದ ಕಾರ್ಮಿಕರು ಕಾರ್ಖಾನೆ ಮತ್ತಿತರ ವಾಣಿಜ್ಯ ಸಂಸ್ಥೆಗಳ ಬೆನ್ನಲುಬು ಆಗಿದ್ದರೆ, ಅಸಂಘಟಿತ ವಲಯದ ವ್ಯಾಪ್ತಿಗೆ ಬರುವ ಕಾರ್ಮಿಕರು ನಿರ್ಮಾಣ ಮತ್ತು ಸೇವಾ ಕ್ಷೇತ್ರದ ಜೀವನಾಡಿಗಳಾಗಿದ್ದಾರೆ. ಈ ಕಾರ್ಮಿಕ ವರ್ಗದ ಬೇಕು-ಬೇಡಗಳ ಬಗ್ಗೆ ಸರಕಾರ‌ ಗಂಭೀರತೆಯನ್ನು ಪ್ರದರ್ಶಿಸಿದೆ.

Advertisement

ಕೊರೊನಾ ಕಷ್ಟ ಕಾಲದಲ್ಲಿ ಎಲ್ಲಡೆ ಉದ್ಯೋಗ ನಾಸ್ತಿಯ ಪರ್ವ ಆರಂಭವಾಗಿತ್ತು. ಮೊದಲ ಅಲೆಯಲ್ಲಿ ಸಾಕಷ್ಟು ಉದ್ಯೋಗಗಳು ಕೊಚ್ಚಿ ಹೋಗಿ ಕಾರ್ಮಿಕರು ಕೆಲಸ ಕಳೆದುಕೊಳ್ಳಬೇಕಾಯಿತು. ಕೆಲಸ ಇದ್ದ ಕಾರ್ಮಿಕರಿಗೆ ಉದ್ಯೋಗ ಭದ್ರತೆಯ ಜತೆಗೆ ಜೀವನದ ಭದ್ರತೆಯ ತುರ್ತು ಆವಶ್ಯಕತೆ ಇತ್ತು. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಬೆಂಬಲಕ್ಕೆ ನಿಂತ ಸರಕಾರ‌ ದಿಟ್ಟತನಿಂದ ಕೋವಿಡ್‌-19 ನಿರ್ವಹಣೆ ಮಾಡಿತು. ಮೊದಲ ಅಲೆಯ ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರಿಗೆ ಆರ್ಥಿಕ ನೆರವು, ಆಹಾರದ ಕಿಟ್‌ಗಳನ್ನು ಪೂರೈಸುವ ಕೆಲಸ ಕಾರ್ಮಿಕ ಇಲಾಖೆ ಮಾಡಿತು. ಸುಮಾರು 16 ಲಕ್ಷ  ಕಟ್ಟಡ ಕಾರ್ಮಿಕರಿಗೆ ಒಟ್ಟು 800 ಕೋಟಿ ರೂ. ಪರಿಹಾರಧನ ಪಾವತಿಸಲಾಯಿತು.

ಕಾರ್ಮಿಕರಿಗೆ ನೀಡಲಾಗುತ್ತಿದ್ದ ಪರಿಹಾರವನ್ನು 2 ರಿಂದ 5 ಲಕ್ಷಕ್ಕೆ ಹೆಚ್ಚಿಸಲಾಯಿತು. ಕೊರೊನಾ ಕಾಲದಲ್ಲಿ ಕಾರ್ಮಿಕರ ರಕ್ಷಣೆಗೆಂದು ಪ್ರತೀ ಜಿಲ್ಲೆಗೆ 15 ಲಕ್ಷ ರೂ. ವಿಶೇಷ ಅನುದಾನ ನೀಡಲಾಯಿತು. ಮುಂದುವರಿದ ಭಾಗವಾಗಿ ಎರಡನೇ ಅಲೆಯ ಸಂದರ್ಭದಲ್ಲೂ ಕಾರ್ಮಿಕರಿಗೆ ವಿಶೇಷ ಪರಿಹಾರ ಪ್ಯಾಕೇಜ್‌ ಘೋಷಿಸಲಾಯಿತು. ಕೊರೊನಾದಂತಹ ವಿಶೇಷ ಸಂದರ್ಭದ ಪರಿಹಾರ ಕಾರ್ಯಗಳ ಜತೆಗೆ ನಿರಂತರವಾಗಿ ಮಾಡಬೇಕಾದ ಕಲ್ಯಾಣ ಕಾರ್ಯಕ್ರಮಗಳನ್ನು ಸರಕಾರ‌ ಮುಂದುವರಿಸಿತು.

ಕಳೆದ ವಾರವಷ್ಟೇ ಸಂಘಟಿತ ವಲಯದ ಕಾರ್ಮಿಕರ ಕಲ್ಯಾಣ ಯೋಜನೆಗಳ ಸಹಾಯಧನದ ಮೊತ್ತವನ್ನು ಪರಿಷ್ಕರಿಸಿದ್ದ ಕಾರ್ಮಿಕ ಇಲಾಖೆ ಇದೀಗ ಕಟ್ಟಡ ಹಾಗೂ ಇತರ ನಿರ್ಮಾಣ ಕಾಮಗಾರಿಗಳ ಕಾರ್ಮಿಕ ಕಲ್ಯಾಣ ಯೋಜನೆಗಳ ಸಹಾಯಧನ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ವಿಶೇಷವಾಗಿ ಸಂಘಟತ ಕಾರ್ಮಿಕರ ಸಹಾಯಧನ ಪರಿಷ್ಕರಣೆ ಸಂದರ್ಭದಲ್ಲಿ ಮಹಿಳಾ ಕಾರ್ಮಿಕರಿಗೆ ಮೊದಲ ಬಾರಿಗೆ 10 ಸಾವಿರ ರೂ. ಹೆರಿಗೆ ಭತ್ಯೆ ನಿಗದಿಪಡಿಸಲಾಗಿತ್ತು. ಈಗ ಕಟ್ಟಡ ಕಾರ್ಮಿಕರ ಮಕ್ಕಳು ಐಐಟಿ, ಐಐಎಂ ಅನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದರೆ ಅವರ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಕಾರ್ಮಿಕ ಮಂಡಳಿಯೇ ಭರಿಸಲಿದೆ. ಇಂತಹ ಪ್ರಯತ್ನ ಇದೇ ಮೊದಲಾಗಿದ್ದು, ಸರಕಾರ‌ದ ಒಂದು ಮಾದರಿ ಹೆಜ್ಜೆಯಾಗಿದೆ.

ಸಂಘಟಿತ ವಲಯದ ಕಾರ್ಮಿಕರ ಸಹಾಯಧನ ಪರಿಷ್ಕರಣೆ ಮಾಡಿದ್ದರಿಂದ ಸುಮಾರು 4 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಅನುಕೂಲವಾಗಿದ್ದರೆ, ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳ ಸಹಾಯಧನ ಹೆಚ್ಚಳ ಮಾಡಿದ್ದರಿಂದ 8 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಅನುಕೂಲವಾಗಲಿದೆ. ಇಲಾಖೆ ಕೈಗೊಂಡ ತೀರ್ಮಾನವನ್ನು ಅಧಿಕಾರಿಗಳು ಮುತುವರ್ಜಿ ವಹಿಸಿ ಅನುಷ್ಠಾನಕ್ಕೆ ತಂದರೆ, ಸರಕಾರ‌ದ ಉದ್ದೇಶ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗ ಕಾರ್ಯೋನ್ಮುಖವಾಗಬೇಕು. ಅದೇ ರೀತಿ ಇಲಾಖೆ ಇದರ ಅನುಷ್ಠಾನದ ಬಗ್ಗೆ ನಿಗಾ ವಹಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next