ಭಾಲ್ಕಿ: ಸಂವಿಧಾನದ ಮೌಲ್ಯಗಳು ನಾಗರಿಕರ ಜೀವನದ ಮೌಲ್ಯಗಳಾಗಿ ಅಂತರ್ಗತವಾದಾಗ ಮಾತ್ರ ಪ್ರತಿಯೊಬ್ಬರಿಗೂ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಬಸವಬೆಳವಿಯ ಶರಣಬಸವ ದೇವರು ಹೇಳಿದರು.
ತಾಲೂಕಿನ ಕರಡ್ಯಾಳ ಗ್ರಾಮದ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುತ್ಛಯದಲ್ಲಿ ನಡೆದ ಆಜಾದಿ ಕಾ ಅಮೃತ ಮಹೋತ್ಸವದ 6ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಎಲ್ಲ ನಾಗರಿಕರು ಸಂವಿಧಾನವನ್ನು ಅಭ್ಯಸಿಸಿ ಸಂವಿಧಾನಿಕ ತತ್ವಗಳನ್ನು ಜೀವನದಲ್ಲಿ ಮೌಲ್ಯಗಳಾಗಿ ರೂಢಿಸಿಕೊಂಡಲ್ಲಿ ಬಲಿಷ್ಠ ಪ್ರಜಾಪ್ರಭುತ್ವದ ಕಲ್ಪನೆ ಸಾಕಾರಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ನಮ್ಮ ಸಂವಿಧಾನದ ಮೂಲ ತತ್ವ ವಿವಿಧತೆಯಲ್ಲಿ ಏಕತೆ ಅಡಗಿದೆ. ಸಂವಿಧಾನ ನಮ್ಮೆಲ್ಲರ ಧರ್ಮ ಗ್ರಂಥವಿದ್ದಂಗೆ. ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರರು ಕೊಟ್ಟ ಸಂವಿಧಾನ ಪ್ರಪಂಚದಲ್ಲಿಯೇ ಚಿಣಿಹತ್ ಮತ್ತು ಶ್ರೇಷ್ಠ ಸಂವಿಧಾನವಾಗಿದೆ. ಸಂವಿಧಾನ ನಮ್ಮೆಲ್ಲರಿಗೂ ದಾರಿ ದೀಪವಾಗಿದೆ. ಸರ್ವರೂ ಸಂವಿಧಾನ ತೋರಿದ ದಾರಿಯಲ್ಲಿ ನಡೆಯಬೇಕು ಎಂದರು.
ಚನ್ನಬಸವೇಶ್ವರ ಗುರುಕುಲ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಮಹಾಲಿಂಗ ಸ್ವಾಮಿ, ಮೋಹನ ರೆಡ್ಡಿ, ಬಸವರಾಜ ಮೊಳಕೀರೆ, ಸಿದ್ರಾಮ ಗೊಗ್ಗಾ ಇದ್ದರು.