Advertisement

ವಿಟ್ಲ ತಾಲೂಕಾಗುವ ಕಾಲ ಇನ್ನಾದರೂ ಕೂಡಿ ಬರಲಿ; ಹೋಬಳಿಯಲ್ಲಿ ಏನೇನಿದೆ?

01:26 PM Mar 20, 2023 | Team Udayavani |

ವಿಟ್ಲ: ವಿಟ್ಲ ಹೋಬಳಿಗೆ ತಾಲೂಕಾಗುವ ಕಾಲ ಇನ್ನೂ ಕೂಡಿ ಬಂದಿಲ್ಲ. ಐದು ದಶಕಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ತಾಲೂಕು ಗಳು ರಚನೆಯಾದರೂ ವಿಟ್ಲ ನಾಗರಿಕರ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ.

Advertisement

ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿದ್ದ ವಿಟ್ಲ ವ್ಯಾಪ್ತಿಯ ಪ್ರದೇಶಗಳನ್ನು ನೆರೆಯ ಮೂರು ಕ್ಷೇತ್ರಗಳಿಗೆ ಹಂಚಿ ಹಾಕಿದ್ದರ ಪರಿಣಾಮ ವಿಟ್ಲ ಕ್ಷೇತ್ರ ಇತಿಹಾಸದ ಪುಟ ಸೇರಿತು. ಬಂಟ್ವಾಳ ತಾಲೂಕಿನ ಕೆಲವು ಭಾಗಗಳು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದವು. ವಿಟ್ಲ ಪೇಟೆ, ಅಳಿಕೆ, ಪುಣಚ, ಕೇಪು, ವಿಟ್ಲಮುಟ್ನೂರು, ಇಡ್ಕಿದು, ಪೆರುವಾಯಿ, ಮಾಣಿಲ ಮೊದಲಾದ ಗ್ರಾಮಗಳು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡು ಇಲ್ಲಿಗೆ ಸಿಕ್ಕಿದ್ದ ರಾಜಕೀಯ ಪ್ರಾತಿನಿಧ್ಯ ಕರಗಿ ಹೋಯಿತು.

ಹಾಗೆಯೇ ವಿಟ್ಲ ಗ್ರಾಮ ಪಂಚಾಯತ್‌ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯತ್‌ ಆಯಿತು. ಆದರೆ ಉಳಿದ ಗ್ರಾಮಗಳು ತಾಲೂಕಿನ ನಿರೀಕ್ಷೆಯಲ್ಲಿದ್ದಾರೆ. ಬಂಟ್ವಾಳ ತಾಲೂಕಿನ ಮೂರು ಹೋಬಳಿ ಗಳಲ್ಲಿ ವಿಸ್ತೀರ್ಣ ಲೆಕ್ಕಾಚಾರದಲ್ಲಿ ವಿಟ್ಲ ಹೋಬಳಿ ದೊಡ್ಡದು. ವಿಟ್ಲ ಹೋಬಳಿಯ ಕರೋಪಾಡಿ, ಮಾಣಿಲ ಮೊದಲಾದ ದೂರದ, ಗಡಿಭಾಗದ ನಾಗರಿಕರು 45 ಕಿ.ಮೀ. ದೂರದಲ್ಲಿರುವ ಬಂಟ್ವಾಳದ ತಾಲೂಕು ಕೇಂದ್ರಕ್ಕೆ ಸಾಗುವುದು ಕಷ್ಟ. ಶಾಸಕರನ್ನು ಸಂಪರ್ಕಿಸಲು ಪುತ್ತೂರಿಗೂ,
ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗಾಗಿ ಬಂಟ್ವಾಳಕ್ಕೂ ಅಲೆದಾಡಬೇಕಿದೆ. ವರ್ಷಗಳ ಹಿಂದೆಯಷ್ಟೇ ಹೊಸದಾಗಿ ರಚನೆಯಾದ ಕಡಬ, ಮೂಡುಬಿದಿರೆ, ಮೂಲ್ಕಿ ತಾಲೂಕುಗಳಿಂದ ಅಧಿಕ ಜನಸಂಖ್ಯೆ ವಿಟ್ಲ ಹೋಬಳಿಯಲ್ಲಿದೆ.

ತಾಲೂಕು ಬೇಡಿಕೆಯ ಇತಿಹಾಸ
ರಾಜ್ಯ ಸರಕಾರ 1973ರಲ್ಲಿ ತಾಲೂಕು ಪುನಾ ರಚನೆ ಬಗ್ಗೆ ಅಧ್ಯಯನ ನಡೆಸಲು ವಾಸುದೇವ ರಾವ್‌ ಸಮಿತಿ ನೇಮಿಸಿತ್ತು. ಆಗ ವಿಟ್ಲದ ಬಾಬು ಶೆಟ್ಟಿ, ದೇವಸ್ಯ ನಾರಾಯಣ ಭಟ್‌, ಮಾಜಿ ಸಚಿವ ವಿಠಲದಾಸ ಶೆಟ್ಟಿ ಮನವಿ ನೀಡಿ ತಾಲೂಕು ರಚನೆಗೆ ಆಗ್ರಹಿಸಿದ್ದರು. ಬಳಿಕ 1985ರಲ್ಲಿ ಹುಂಡೇಕರ್‌ ಸಮಿತಿಯ ಮುಂದೆ ಕೂಡೂರು ಕೃಷ್ಣ ಭಟ್ಟರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 2009ರಲ್ಲಿ ಮತ್ತೆ ಎಂ.ಪಿ.ಪ್ರಕಾಶ್‌ ಅವರಿಗೆ ಕರಾವಳಿ ಕರ್ನಾಟಕ ಗಡಿ, ನೆಲ ಜಲ ಸಂರಕ್ಷಣ ಸಮಿತಿಯ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಲಿಗೆ, ಮುರುವ ನಡುಮನೆ ಮಹಾಬಲ ಭಟ್‌ ನೇತೃತ್ವದಲ್ಲಿ ಹಾಗೂ 2013ರಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

23 ಗ್ರಾಮಗಳು
ಬಿಳಿಯೂರು, ಪೆರ್ನೆ, ಕೆದಿಲ, ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಟ್ನೂರು, ಇಡಿRದು, ಕುಳ, ವೀರಕಂಭ, ಬೋಳಂತೂರು, ವಿಟ್ಲಮುಟ್ನೂರು, ಕೇಪು, ಪುಣಚ, ಪೆರುವಾಯಿ, ಮಾಣಿಲ, ಅಳಿಕೆ, ಕನ್ಯಾನ, ಕರೋಪಾಡಿ, ಕೊಳ್ನಾಡು, ಸಾಲೆತ್ತೂರು, ವಿಟ್ಲಪಟ್ನೂರು, ವಿಟ್ಲಕಸಬಾ ಗ್ರಾಮಗಳು ವಿಟ್ಲ ಹೋಬಳಿ ವ್ಯಾಪ್ತಿಯಲ್ಲಿವೆ.

Advertisement

ಸಂಪೂರ್ಣ ನಿರ್ಲಕ್ಷ್ಯ
ಹೋಬಳಿ ಕೇಂದ್ರದಲ್ಲಿ ಮಿನಿವಿಧಾನಸೌಧ ಆಗಬೇಕೆಂಬ ಕೂಗು ಇದೆ. ತಾ.ಪಂ.ಗೆ ಸಂಬಂಧಿಸಿದ ಜಾಗವೂ ಇದೆ. ಆ ಜಾಗದಲ್ಲಿ ಕಾಡು ಬೆಳೆದಿದೆ. ಯಾರಿಗೂ ಉಪಯೋಗವಿಲ್ಲದ ಈ ಜಾಗವನ್ನು ಸದ್ಬಳಕೆ ಮಾಡಬಹುದೆಂಬ ಅಭಿಪ್ರಾಯ ಸ್ಥಳೀಯರದ್ದು. ಹೋಬಳಿ ಕೇಂದ್ರ ಎನಿಸಿಕೊಳ್ಳುವ ಅರ್ಹತೆಯಿದ್ದರೂ ಸೌಲಭ್ಯಗಳ ಕೊರತೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ.

ದಶಕಗಳ ಕಾಲದಿಂದ ಹಳೆಯ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ನಾಡಕಚೇರಿಗೆ ಕೊನೆಗೂ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ವಿಟ್ಲ ಪಟ್ಟಣ ಪಂಚಾಯತ್‌ಗೆ ನೂತನ ಕಟ್ಟಡ, ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ನೂತನ ಕಟ್ಟಡ ಆಗಬೇಕಿದೆ. ಉದ್ಯಾನವನ, ಪೇಟೆಯ ರಸ್ತೆ ಅಭಿವೃದ್ಧಿ, ಪಟ್ಟಣ ಪಂಚಾಯತ್‌ಗೆ ಅಗತ್ಯ ಸಂಖ್ಯೆಯಲ್ಲಿ ಸಿಬಂದಿ ನೇಮಕ, ವಿಟ್ಲ ಸಾಲೆತ್ತೂರು ರಸ್ತೆ ಅಭಿವೃದ್ಧಿ-ಹೀಗೆ ಆಗಬೇಕಾದ ಕೆಲಸಗಳು ಬಹಳಷ್ಟಿವೆ.

ಹೋಬಳಿಯಲ್ಲಿ ಏನೇನಿದೆ?
ಸಬ್‌ ರಿಜಿಸ್ಟ್ರಾರ್‌ ಕಚೇರಿ, ನಾಡ ಕಚೇರಿ, ಮೇಲ್ದರ್ಜೆಗೇರಿದ ಪೊಲೀಸ್‌ ಠಾಣೆ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರ, ಮೆಸ್ಕಾಂ ಉಪವಿಭಾಗ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನ ಕೇಂದ್ರ, ಎಲ್ಲ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳು, ಗ್ರಾಮೀಣ ಸಹಕಾರಿ ಬ್ಯಾಂಕ್‌, 45ಕ್ಕೂ ಅಧಿಕ ಸಹಕಾರಿ ಸಂಘಗಳು, ಕ್ಯಾಂಪ್ಕೋ ಶಾಖೆ, ಮಹಿಳಾ ಸೌಹಾರ್ದ ಸಹಕಾರಿ ಸಂಘ, ವಿದ್ಯಾಸಂಸ್ಥೆಗಳು ಇವೆ.

64,158.59 ಎಕ್ರೆ ವಿಟ್ಲ ಹೋಬಳಿ ವಿಸ್ತೀರ್ಣ
1,19,474 ಜನಸಂಖ್ಯೆ

*ಉದಯಶಂಕರ ನೀರ್ಪಾಜೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next