Advertisement

ಸೋಂಕಿತರ ಕೀಳಾಗಿ ಕಾಣುವ ಪ್ರವೃತ್ತಿ ಬದಲಾಗಲಿ

04:54 PM Jan 08, 2022 | Team Udayavani |

ಗೋಕಾಕ:ಮನೆ ಹಾಗೂ ಸಮಾಜದಲ್ಲಿ ಏಡ್ಸ್‌ ಸೋಂಕಿತರನ್ನು ಕೀಳಾಗಿ ಕಾಣುವ ಪ್ರವೃತ್ತಿ ಇದೆ. ಇದು ಬದಲಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ನಗರದಲ್ಲಿ ನೂತನವಾಗಿ ನಿರ್ಮಿಸಿದ ಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಸ್ಥೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಬಿ.ಕೆ. ಹರಿಪ್ರಸಾದ ಅವರ ವಿಧಾನ ಪರಿಷತ್‌ ನಿಧಿ ಯಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ. ಈ ಕಟ್ಟಡ ಏಡ್ಸ್‌ ಸೋಂಕಿತ ಮಹಿಳೆಯರು ಒಂದೆಡೆ ಸೇರಿ ತಮ್ಮ ಸಮಸ್ಯೆ ಚರ್ಚಿಸಲು ಮತ್ತು ವಾಸ್ತವ್ಯವಿರಲು ಅನುಕೂಲವಾಗಿದೆ ಎಂದರು.

ಏಡ್ಸ್‌ ಮೊದಲು 1981ರಲ್ಲಿ ಅಮೆರಿಕಾದಲ್ಲಿ ಪತ್ತೆಯಾಯಿತು. ಭಾರತದ ತಮಿಳುನಾಡಿನಲ್ಲಿ 1986ರಲ್ಲಿ ಪತ್ತೆಯಾಯಿತು. ನಂತರ ಕರ್ನಾಟಕದ ಸವದತ್ತಿಯಲ್ಲಿ 1988ರಲ್ಲಿ ಮೊದಲ ಬಾರಿಗೆ ಎಚ್‌ಐವಿ ಪತ್ತೆಯಾದ ಪ್ರಕರಣ ವರದಿಯಾಗಿದೆ. ಆ ಸಂದರ್ಭದಲ್ಲಿ ಮಾಧ್ಯಮಗಳ ಸಂಖ್ಯೆ  ಕಡಿಮೆಯಾಗಿತ್ತು ಎಂದು ತಿಳಿಸಿದರು.

ಏಡ್ಸ್‌ಗೆ ಸೋಂಕಿತರು ಹೆದರುವ ಅವಶ್ಯಕತೆ ಇಲ್ಲ. ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದ್ದು, ರೋಗ ನಿವಾರಣೆಗೆ ವಿಶ್ವಸಂಸ್ಥೆ ಕೂಡ ಪ್ರಯತ್ನ ನಡೆಸಿದೆ. ಅಥಣಿ ತಾಲೂಕಿನಲ್ಲಿ ಬಿ.ಎಲ್‌. ಪಾಟೀಲ ಅವರ ವಿಮೋಚನಾ ಸಂಸ್ಥೆ ದೇವದಾಸಿಯರ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ ಅಧ್ಯಕ್ಷತೆ ವಹಿಸಿ ಮಾತನಾಡಿ,ಛತ್ತೀಸಘಡ ರಾಜ್ಯದಲ್ಲಿ 15 ವರ್ಷದಲ್ಲಿ 11 ಸಾವಿರ ಮಹಿಳೆಯರು, ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಜಾರ್ಖಂಡದಲ್ಲಿಯೂ ಇದೇ ಪರಿಸ್ಥಿತಿ ಇದೆ. ಆದ್ದರಿಂದ ಮಹಿಳೆಯರು ಈಗಿನ ಪರಿಸ್ಥಿತಿಯಲ್ಲಿ ಜಾಗೃತಿಯಿಂದ ಬದುಕುವ ಅವಶ್ಯಕತೆಯಿದೆ ಎಂದರು.

Advertisement

ಸಾವಿತ್ರಿಬಾಯಿ ಫುಲೆ ಮಹಾರಾಷ್ಟ್ರದ ಪುಣೆಯಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡಬೇಕೆಂಬ ನಿರ್ಧಾರ ಮಾಡಿದಾಗ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳು ಕೇಳಿ ಬಂದವು. ಆ ಆರೋಪ, ದಬ್ಟಾಳಿಕೆಗೆ ಹೆದರದೇ ಅವರು ಮಹಿಳೆಯರಿಗೆ ಶಿಕ್ಷಣ ನೀಡಿ ಸಮಾಜಕ್ಕೆ ಆದರ್ಶವಾದರು ಎಂದರು.

ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ. ಆದರೆ ಅವುಗಳಿಗೆ ಸ್ಪಂದಿಸದೇ ಬಿಜೆಪಿ ಸರ್ಕಾರ ಗೋ ಹತ್ಯೆ ಮಾಡಬೇಡಿ, ಮಾಂಸ ತಿನ್ನಬೇಡಿ, ಮತಾಂತರ ಮಾಡಬೇಡಿ ಎಂದು ಹೇಳುತ್ತಿದೆ. ಆದರೆ ಯುವಕರಿಗೆ ಉದ್ಯೋಗ ನೀಡಲು ಆಶಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಂತಹ ನಾಯಕ ಸಿಕ್ಕಿದ್ದು ಅದೃಷ್ಟ. ಅವರ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮ ಜರುಗಲಿದ್ದು,ಅವುಗಳಲ್ಲಿ ತಪ್ಪದೇ ಭಾಗಿಯಾಗಬೇಕು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಏಡ್ಸ್‌ ನಿಯಂತ್ರಣಕ್ಕಾಗಿ ಆಸ್ಕರ್‌ ಫರ್ನಾಂಡಿಸ್‌ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ನಿಂದ ಕಮಿಟಿ ರಚಿಸಿ,ದೊಡ್ಡ ಮಟ್ಟದ ಸಮ್ಮೇಳನ ಮಾಡಿ ಜಾಗೃತಿ ಮೂಡಿಸಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಮಾಜಿ ಸಚಿವ ಆರ್‌.ಎಂ. ಪಾಟೀಲ್‌,ಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಸ್ಥೆ ಅಧ್ಯಕ್ಷೆ ಲಲಿತಾ ಹೊಸಮನಿ, ಲೀಲಾ ಸಂಪಗಿ ಸೇರಿದಂತೆ ಸಂಸ್ಥೆ ಸದಸ್ಯರು ಇದ್ದರು. ಜಯರಾಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಅನಿಷ್ಟ ಪದ್ಧತಿ ಬಿಟ್ಟು ದೇವದಾಸಿಯರು ಒಂದಾದರೆ ಮುಂದಿನ ದಿನಗಳಲ್ಲಿ ಎನ್‌ಜಿಒ ಮೂಲಕ ಉದ್ಯೋಗ ಕಲ್ಪಿಸಲಾಗುವುದು. ಮೂಢನಂಬಿಕೆ ಬಿಟ್ಟು ಬದುಕಬೇಕು. ಆಗ ಮಾತ್ರ ಆರ್ಥಿಕ ಪ್ರಗತಿ ಕಾಣಲು ಸಾಧ್ಯ. ಶಕ್ತಿ ಏಡ್ಸ್‌ ಸಂಘದ ಸದಸ್ಯರು ಈಗಾಗಲೇ ನಮ್ಮ ಮಾನವ ಬಂಧುತ್ವ ವೇದಿಕೆ ಜತೆಗೂಡಿ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನಷ್ಟು ಸಮಾಜಮುಖೀ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಅನಾಥ ಮಕ್ಕಳಿಗೆ ಶಿಕ್ಷಣ ನೀಡಲು ಆದ್ಯತೆ ನೀಡಬೇಕು.
ಸತೀಶ ಜಾರಕಿಹೊಳಿ,
ಕೆಪಿಸಿಸಿ ಕಾರ್ಯಾಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next