Advertisement

ಫ್ರಾನ್ಸ್‌-ಭಾರತದ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿ

10:41 AM Apr 26, 2022 | Team Udayavani |

ಐರೋಪ್ಯ ದೇಶಗಳ ಹಣೆಬರಹವನ್ನೇ ಬದಲಿಸಬಹುದು ಎಂದೇ ನಿರೀಕ್ಷಿಸಲಾಗಿದ್ದ ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆಯ ಫ‌ಲಿತಾಂಶ ಪ್ರಕಟವಾಗಿದ್ದು, ಹಾಲಿ ಅಧ್ಯಕ್ಷ ಎಮ್ಯಾನುವಲ್‌ ಮ್ಯಾಕ್ರಾನ್‌ ಅವರೇ ಪುನರಾಯ್ಕೆಯಾಗಿದ್ದಾರೆ. ನಡುಪಂಥೀಯ ಎಂದೇ ಗುರುತಿಸಿಕೊಂಡಿರುವ, 44ರ ಯುವಕ ಮ್ಯಾಕ್ರಾನ್‌ ಬಗ್ಗೆ ಭರವಸೆ ಇಟ್ಟಿರುವ ಫ್ರಾನ್ಸ್‌ ಜನತೆ ಮತ್ತೊಮ್ಮೆ ಆರಿಸಿದೆ. ವಿಶೇಷವೆಂದರೆ 20 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಫ್ರಾನ್ಸ್‌ನ ಅಧ್ಯಕ್ಷರೊಬ್ಬರು ಪುನಾರಾಯ್ಕೆಯಾಗಿದ್ದಾರೆ ಎಂಬುದು ವಿಶೇಷ.

Advertisement

ಜಾಗತಿಕವಾಗಿ ಆವರಿಸಿರುವ ಕೊರೊನಾ ಮತ್ತು ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣದಂಥ ಸಂದಿಗ್ಧತೆಯ ಸಂದರ್ಭದಲ್ಲಿ ಮ್ಯಾಕ್ರಾನ್‌ ಆಯ್ಕೆ ಬಹು ಮಹತ್ವ ಪಡೆದುಕೊಂಡಿದೆ. ಮೊದಲೇ ವಿಶ್ಲೇಷಿಸಿದ ಹಾಗೆ, ಸದ್ಯ ಐರೋಪ್ಯ ಒಕ್ಕೂಟದ ನಾಯಕರಂತಿರುವ ಮ್ಯಾಕ್ರಾನ್‌, ರಷ್ಯಾ ಮತ್ತು ಪಾಶ್ಚಾತ್ಯ, ಅಮೆರಿಕದ ನಡುವೆ ಸಂಧಾನ ನಡೆಸುವ ಕೆಲಸವನ್ನೂ ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿಯೂ ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣವನ್ನು ನಿಲ್ಲಿಸುವ ಪ್ರಯತ್ನದಲ್ಲಿ ಮ್ಯಾಕ್ರಾನ್‌ ಅವರ ಪುನಾರಾಯ್ಕೆ ಒಂದಷ್ಟು ಕೆಲಸ ಮಾಡಬಹುದು ಎಂದು ವಿಶ್ಲೇಷಿಸಲಾಗಿದೆ.

2017ರಲ್ಲಿ ಮೊದಲ ಪ್ರಯತ್ನದಲ್ಲೇ ಅಧ್ಯಕ್ಷರಾಗಿದ್ದ ಎಮ್ಯಾನುವಲ್‌ ಮ್ಯಾಕ್ರಾನ್‌ ಅವರ ಅಧಿಕಾರಾವಧಿ ಹೂವಿನ ಹಾಸಿಗೆಯಂತೆ ಇರಲಿಲ್ಲ ಎಂಬುದು ಸತ್ಯ. ಅಧ್ಯಕ್ಷರಾದ ಎರಡು ವರ್ಷದ ಬಳಿಕ ಕಾಣಿಸಿಕೊಂಡ ಕೊರೊನಾ ಎಂಬ ಮಹಾಮಾರಿ, ಫ್ರಾನ್ಸ್‌ ಅಧ್ಯಕ್ಷರನ್ನೂ ನಡುಗಿಸಿಬಿಟ್ಟಿತು. ಹಾಗೆಯೇ ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರನಡೆದಿದ್ದು, ಜರ್ಮನಿಯ ಛಾನ್ಸೆಲರ್‌ ಆಗಿದ್ದ ಏಂಜೆಲಾ ಮಾರ್ಕೆಲ್‌ ಅವರು ರಾಜೀನಾಮೆ ನೀಡಿದ್ದು ಕೂಡ ಮ್ಯಾಕ್ರಾನ್‌ ಮೇಲಿನ ಹೊಣೆಯನ್ನು ಹೆಚ್ಚು ಮಾಡಿದವು. ಏಂಜೆಲಾ ಮಾರ್ಕೆಲ್‌ ಅವರ ಅನಂತರ ಈಗ ಐರೋಪ್ಯ ಒಕ್ಕೂಟದ ನಾಯಕರಾಗಿ ಹೊರಹೊಮ್ಮುತ್ತಿರುವುದು ಏಮ್ಯಾನುವಲ್‌ ಮ್ಯಾಕ್ರಾನ್‌ ಅವರೇ.ಐರೋಪ್ಯ ಒಕ್ಕೂಟದ ನಾಯಕರೆಂದ ಮೇಲೆ ಅವರು ಒಂದು ರೀತಿಯಲ್ಲಿ ಜಾಗತಿಕ ಮಟ್ಟದ ನಾಯಕರೇ. ಅಲ್ಲದೆ ಐರೋಪ್ಯ ಒಕ್ಕೂಟ ಮತ್ತು ಅಮೆರಿಕ, ರಷ್ಯಾ, ಚೀನ, ಭಾರತದಂಥ ದೇಶಗಳ ನಡುವೆ ಸಮನ್ವಯ ಸಾಧಿಸಬೇಕಾದವರೂ ಇವರೇ ಆಗಿರುತ್ತಾರೆ. ಈಗ ಇಂಥ ಕೆಲಸವನ್ನು ಮಾಡುತ್ತಿರುವವರೂ ಮ್ಯಾಕ್ರಾನ್‌ ಅವರೇ ಆಗಿದ್ದಾರೆ.

ಇನ್ನು ಆರಂಭದ ದಿನಗಳಿಂದಲೂ ಭಾರತ ಮತ್ತು ಫ್ರಾನ್ಸ್‌ ನಡುವಿನ ಸಂಬಂಧ ಅತ್ಯುತ್ತಮವಾಗಿಯೇ ಇದೆ. ಪ್ರಧಾನಿ ಮೋದಿ ಮತ್ತು ಮ್ಯಾಕ್ರಾನ್‌ ನಡುವಿನ ದೋಸ್ತಿಯೂ ಉತ್ತಮವಾಗಿದೆ. ಮೇ ತಿಂಗಳ ಆರಂಭದಲ್ಲಿ ಮೋದಿ ಅವರು ಐರೋಪ್ಯ ದೇಶದ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಭಾರತಕ್ಕೆ ಬೇಕಾದ ಇನ್ನಷ್ಟು ರಕ್ಷಣ ಸಂಬಂಧಿ ಒಪ್ಪಂದಗಳಿಗೆ ಸಹಿಹಾಕುವ ಸಾಧ್ಯತೆ ಇದೆ. ಅದರಲ್ಲೂ ಭಾರತ ಆತ್ಮನಿರ್ಭರ ಕಾರ್ಯಕ್ರಮದ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಸಬ್‌ಮರೀನ್‌ ಪ್ರಪಲ್ಶನ್‌ಗಳ ತಯಾರಿಕೆ, ಹೈಥÅಸ್ಟ್‌ ಏರ್‌ಕ್ರಾಫ್ಟ್ ಎಂಜಿನ್‌ಗಳ ತಯಾರಿಕೆ ವಿಚಾರದಲ್ಲಿಯೂ ಎರಡು ದೇಶಗಳು ಪರಸ್ಪರ ಸಹಕಾರದಿಂದ ಹೆಜ್ಜೆ ಇಡುವ ಸಾಧ್ಯತೆ ಇದೆ.

ಏನೇ ಆಗಲಿ, ಏಮ್ಯಾನುವಲ್‌ ಮ್ಯಾಕ್ರಾನ್‌ ಅವರ ಆಯ್ಕೆ ಐರೋಪ್ಯ ಒಕ್ಕೂಟ, ಉಕ್ರೇನ್‌ ಬಿಕ್ಕಟ್ಟು ಮತ್ತು ಇತರೆ ಜಾಗತಿಕ ಸಮಸ್ಯೆಗಳ ವಿಚಾರದಲ್ಲಿ ಉತ್ತಮವಾದದ್ದು. ಜಾಗತಿಕ ನಾಯಕರ ಜತೆ ಉತ್ತಮ ಸಂಬಂಧ ಇರಿಸಿಕೊಂಡಿರುವ ಮ್ಯಾಕ್ರಾನ್‌ ಅವರಿಂದ ಜಾಗತಿಕ ಶಾಂತಿ ಸೃಷ್ಟಿಯಾಗಬಹುದು ಎಂದು ಆಶಿಸೋಣ.

Advertisement
Advertisement

Udayavani is now on Telegram. Click here to join our channel and stay updated with the latest news.

Next