Advertisement

ಆದೇಶ ತಿರುಚಿದವರಿಗೆ ಶಿಕ್ಷೆಯಾಗಲಿ

06:33 AM Feb 03, 2019 | Team Udayavani |

ಬೆಂಗಳೂರು: ಪೌರಕಾರ್ಮಿಕರನ್ನು ಕಾಯಂಗೊಳಿಸುವ ಆದೇಶ ತಿರುಚಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು, ನಕಲಿ ದಾಖಲೆಗಳಿಂದ ಪೌರಕಾರ್ಮಿಕರಾದ ಮೇಲ್ಜಾತಿಯವರನ್ನು ಶಿಕ್ಷಿಸಬೇಕು, ದಲಿತರನ್ನೇ ಸಫಾಯಿ ಕರ್ಮಚಾರಿ ಆಯೋಗದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಬೇಕು ಎಂದು ಪೌರ ಕಾರ್ಮಿಕರ ಮುಖಂಡರು ಆಗ್ರಹಿಸಿದ್ದಾರೆ.

Advertisement

ನಗರದ ಗಾಂಧಿಭವನದಲ್ಲಿ ರಾಜ್ಯ ಪೌರಕಾರ್ಮಿಕರ ಸಂಘಟನೆ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಮುಖಂಡರು, ನಿಯಮಗಳಂತೆ ಪೌರಕಾರ್ಮಿಕರಿಗೆ ನೀಡಬೇಕಾದ ವೇತನ, ಭತ್ಯೆ, ಸ್ವತ್ಛತಾ ಕಾರ್ಯಕ್ಕೆ ಅಗತ್ಯ ಸಲಕರಣೆ, ರಜೆ, ಆರೋಗ್ಯ ತಪಾಸಣೆ ಸೌಲಭ್ಯಕ್ಕೆ ಒತ್ತಾಯಿಸುವ ಪೌರಕಾರ್ಮಿಕರ ಮೇಲೆ ದೂರು ದಾಖಲಿಸಲಾಗುತ್ತಿದ್ದು, ಸರ್ಕಾರ ಕೂಡಲೇ ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕೆಂದು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ದಲಿತ ವಿರೋಧಿ ಅಧಿಕಾರಿಗಳು ಒಂದೂವರೆ ವರ್ಷ ಕಳೆದರೂ ಆದೇಶ ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು. ಮಾಜಿ ಸಚಿವ ಎಚ್‌.ಆಂಜನೇಯ ಮಾತನಾಡಿ, ಸಿದ್ದರಾಮಯ್ಯ ಅವರು, ಕಾಯಂಗೊಳಿಸುವ ನಿರ್ಧಾರ ಕೈಗೊಂಡಿದ್ದರು.

ಆದರೆ, ಅಧಿಕಾರಿಗಳು ಆದೇಶಗಳನ್ನು ತಿರುಚಿದ್ದು, ಪೌರಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು. ಜತೆಗೆ ಬಜೆಟ್‌ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಮನವಿ ಸ್ವೀಕರಿಸಲು ಸಭೆ ಕರೆಯುವಂತೆ ಕೋರಲಾಗುವುದು ಎಂದು ಹೇಳಿದರು. ಪೌರಕಾರ್ಮಿಕರ ಸಂಘಟನೆ ಅಧ್ಯಕ್ಷ ನಾರಾಯಣ, ಸಫಾಯಿ ಕರ್ಮಚಾರಿ ಆಯೊಗದ ಮಾಜಿ ಅಧ್ಯಕ್ಷ ಎಂ.ಆರ್‌.ವೆಂಕಟೇಶ್‌ ಹಾಗೂ ಪ್ರಮುಖರು ಹಾಜರಿದ್ದರು.

ಅಧಿಕಾರಿಗಳು ಪೌರಕಾರ್ಮಿಕರಿಗೆ ಗುರುತಿನ ಚೀಟಿ ನೀಡುತಯ್ತಿಲ್ಲ. ನೀನು ಪೌರಕಾರ್ಮಿಕ ಎಂಬುದಕ್ಕೆ ಸಾಕ್ಷಿ ಏನಿದೆ? ಎಂದು ದಬ್ಟಾಳಿಕೆ ಮಾಡುತ್ತಾರೆ. ಕೈಗವಸು, ಶೂ ಸೇರಿ ಸುರಕ್ಷಾ ಸಲಕರಣೆಗಳ ಖರಿದಿಯಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ.
-ಸುಭಾಷ್‌, ಹಾವೇರಿ

Advertisement

ನಾವು ಒಗ್ಗಟ್ಟಾಗದಿದ್ದರೆ ದಲಿತ ವಿರೋಧಿಗಳು ನಮ್ಮ ಮೇಲೆ ದೌರ್ಜನ್ಯ ಮುಂದುವರಿಸುತ್ತಲೇ ಇರುತ್ತಾರೆ. ಹೀಗಾಗಿ ಸಂಘಟನೆಗಳು ಯಾವುದೇ ಕಾರಣಕ್ಕೂ ಒಡೆಯಬಾರದು. ಒಗ್ಗಟ್ಟಿನಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು.
-ದುಗೇಶ್‌, ಚಿತ್ರದುರ್ಗ

ಸ್ವತ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ರ್‍ಯಾಂಕಿಂಗ್‌ ಪಡೆಯಬೇಕೆಂಬ ಉದ್ದೇಶದಿಂದ ಎರಡು ತಿಂಗಳಿಂದ ಪೌರಕಾರ್ಮಿಕರಿಗೆ ರಜೆ ನೀಡುತ್ತಿಲ್ಲ. ಪೌರಕಾರ್ಮಿಕ ಹುದ್ದೆಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವನ್ನು ನೇಮಿಸಿಕೊಳ್ಳುತ್ತಿದ್ದಾರೆ.
-ನಾಗರಾಜ್‌, ಕುಂದಾಪುರ

ಪೌರಕಾರ್ಮಿಕರ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಿದಕ್ಕೆ ಅಧಿಕಾರಿಗಳು ಸುಳ್ಳು ಪ್ರಕರಣ ದಾಖಲಿಸಿದ್ದು, ಮೂರು ತಿಂಗಳಿನಿಮದ ವೇತನ ನೀಡಿಲ್ಲ.
-ವಿಜಯ್‌, ಧಾರವಾಡ

ಪೌರಕಾರ್ಮಿಕರಲ್ಲದವರು ಕಾಯಂ ಪೌರಕಾರ್ಮಿಕರಾಗಿ ನೇಮಕವಾಗುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ ಕೊಲೆ ಬೆದರಿಕೆ ಹಾಕುತ್ತಾರೆ. ಅದಕ್ಕೂ ಜಗ್ಗದಿದ್ದರೆ ಹಣದ ಅಮೀಷವೊಡ್ಡುತ್ತಾರೆ. ನಕಲಿ ಪೌರಕಾರ್ಮಿಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.
-ಕೃಷ್ಣಪ್ಪ, ಪೌರಕಾರ್ಮಿಕ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next