ಚಳ್ಳಕೆರೆ: ರೈತ ಸಂಘ, ಕಾರ್ಮಿಕ ಸಂಘಟನೆಗಳು ಹಾಗೂ ಪ್ರಗತಿಪರ ವೇದಿಕೆಗಳ ಆಶ್ರಯದಲ್ಲಿ ಸೆ. 28 ರಂದು ನಡೆಯಲಿರುವ ಬಂದ್ ಅನ್ನು ಶಾಂತಿಯುತವಾಗಿ ಮಾಡಬೇಕು ಎಂದು ಉಪವಿಭಾಗದ ಡಿವೈಎಸ್ಪಿ ಕೆ.ವಿ. ಶ್ರೀಧರ್ ಹೇಳಿದರು.
ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ನಡೆದ ರೈತ ಸಂಘದ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿ ಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಮುಷ್ಕರಕ್ಕೆ ಸಂಬಂಧಪಟ್ಟಂತೆ ಬೆಂಬಲ ನೀಡುತ್ತಿರುವ ವಿವಿಧ ಸಂಘಟನೆಗಳ ಪ್ರಮುಖರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಯಾವುದೇ ಹಂತದಲ್ಲಿ ಕಾನೂನು ಉಲ್ಲಂಘನೆಯಾಗುವುದು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ರೈತರ ಸಂಕಷ್ಟಗಳು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ನಡೆಸುವ ಪ್ರತಿಭಟನೆ, ಮುಷ್ಕರ, ಧರಣಿ ಸತ್ಯಾಗ್ರಹ ಎಲ್ಲವನ್ನೂ ಪೊಲೀಸ್ ಇಲಾಖೆ ಕಾನೂನು ಚೌಕಟ್ಟಿನಲ್ಲೇ ನೋಡಬೇಕಿದೆ ಎಂದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ರಾಜ್ಯ ರೈತ ಸಂಘದ ಸೂಚನೆಯಂತೆ ಬಂದ್‌ಗೆ ಕರೆ ನೀಡಲಾಗಿದೆ. ಎಲ್ಲಾ ಸಂಘಟನೆಗಳು ನಮಗೆ ಬೆಂಬಲ ನೀಡಿವೆ. ನಾವು ಸಹ ಪೊಲೀಸ್ ಇಲಾಖೆ ನಿಯಮಗಳಿಗೆ ಗೌರವ ನೀಡುತ್ತೇವೆ. ಹಲವಾರು ವರ್ಷಗಳಿಂದ ಅನೇಕ ಕಷ್ಟಗಳನ್ನು ಎದುರಿಸಿದ ರೈತರು ನೋವಿನಲ್ಲಿದ್ದಾರೆ. ಆದ್ದರಿಂದ ರೈತರ ಪ್ರತಿಭಟನೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಮಾತನಾಡಿ, ಹಲವಾರು ವರ್ಷಗಳಿಂದ ರೈತ ಸಂಘ ಹಾಗೂ ಇತರೆ ಸಂಘಟನೆಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಾ ಬಂದಿವೆ. ಆದರೆ ರೈತರು ಯಾವತ್ತೂ ಕಾನೂನನ್ನು ಕೈಗೆತ್ತಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ವೃತ್ತ ನಿರೀಕ್ಷಕ ನಲವಾಗಲು ಮಂಜುನಾಥ, ಪಿಎಸ್ ಐಗಳಾದ ಪಿ.ಆರ್. ರಾಘವೇಂದ್ರ, ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ದೊಡ್ಡಉಳ್ಳಾರ್ತಿ ಕರಿಯಣ್ಣ, ಪ್ರಗತಿಪರ ಚಿಂತಕ ಎಸ್.ಎಚ್. ಸಯ್ಯದ್, ತಾಪಂ ಸದಸ್ಯ ಗದ್ದಿಗೆ ತಿಪ್ಪೇಸ್ವಾಮಿ, ನಗರಸಭಾ ಸದಸ್ಯ ವೀರಭದ್ರಪ್ಪ, ಗಾಡಿ ತಿಪ್ಪೇಸ್ವಾಮಿ, ಒ. ತಿಪ್ಪೇಸ್ವಾಮಿ, ಶರಣಪ್ಪ, ಮೂಡಲಗಿರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.