Advertisement

ಅಭಿವೃದ್ಧಿಯೊಂದಿಗೆ ಇರುವ ಸಮಸ್ಯೆಗಳೂ ನಿವಾರಣೆಯಾಗಲಿ

02:00 PM Aug 08, 2022 | Team Udayavani |

ಕಿನ್ನಿಗೋಳಿ: ಅಭಿವೃದ್ಧಿಯತ್ತ ಹೆಜ್ಜೆ ಹಾಕು ತ್ತಿರುವ ಗ್ರಾಮೀಣ ಪ್ರದೇಶವೊಂದು ಇಲ್ಲಿರುವ ಸಮಸ್ಯೆಗಳು ಮೊದಲು ನಿವಾರಣೆಯಾಗಲಿ ಎನ್ನುವ ನಿರೀಕ್ಷೆಯೊಂದಿಗೆ ಕಾಯುತ್ತಿದೆ.

Advertisement

ಮೂಲ್ಕಿ ತಾಲೂಕಿನ ಕೆಮ್ರಾಲ್‌ ಅಭಿವೃದ್ಧಿ ಹೊಂದುತ್ತಿರುವ ಗ್ರಾಮ. ಮಂಗಳೂರು ನಗರ ದಿಂದ ಸುಮಾರು 27 ಕಿ.ಮೀ. ದೂರದಲ್ಲಿದ್ದು, ಮೂಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಈ ಗ್ರಾಮ ಕೆಮ್ರಾಲ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸೇರಿದೆ. ಹೆಚ್ಚಿನ ಭಾಗವು ಕೃಷಿ ಭೂಮಿಯಾಗಿದ್ದು, ಭತ್ತ, ಅಡಿಕೆ, ತೆಂಗು ಪ್ರಧಾನ ಬೆಳೆಯಾಗಿ ಗುರುತಿಸಿಕೊಂಡಿದೆ.

ಹದಗೆಟ್ಟ ರಸ್ತೆಗಳು

ಕೆಮ್ರಾಲ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೋಜ ರಾವ್‌ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರ ದುರಸ್ತಿಗಾಗಿ ಸ್ಥಳೀಯರು ಕಾಯುತ್ತಿ ದ್ದಾರೆ. ಇತ್ತೀಚೆಗೆ ಸುರಿದ ಮಳೆಗೆ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು, ಹಲವೆಡೆ ಕೊಚ್ಚಿಕೊಂಡು ಹೋಗಿ ಸಂಚಾರ ದುಸ್ತರವಾಗಿದೆ.

ಪಾಳುಬಿದ್ದ ಕಟ್ಟಡ

Advertisement

ಪಕ್ಷಿಕೆರೆಯ ಮಾರ್ಕೆಟ್‌ ಬಳಿ ಕೃಷಿ ಉತ್ಪನ್ನ ಮಾರುಕಟ್ಟೆ ಕಟ್ಟಡವನ್ನು ಎಪಿಎಂಸಿ ವತಿಯಿಂದ ನಿರ್ಮಿಸಲಾಗಿತ್ತು. ಆದರೆ ಅದು ಉಪಯೋಗವಾಗದೆ ನಾಯಿ, ಬೆಕ್ಕು, ಕುಡುಕರ ಆಶ್ರಯ ತಾಣವಾಗಿದೆ.

ರಸ್ತೆಗೆ ಬೇಡಿಕೆ

ಕೆಮ್ರಾಲ್‌ ವ್ಯಾಪ್ತಿಯಲ್ಲಿ ಹಲವಾರು ಎಕ್ರೆ ಸರಕಾರಿ ಜಾಗದಲ್ಲಿ ಹಲವು ಕುಟುಂಬಗಳು ಮನೆ ಕಟ್ಟಿ ವಾಸ ಮಾಡುತ್ತಿವೆ. ಇಲ್ಲಿನ ಸುಮಾರು 30 ಮನೆಗಳಿಗೆ ಸರಿಯಾದ ಶೌಚಾಲಯವಿಲ್ಲ. ಮಣ್ಣಿನ ರಸ್ತೆ ಇದ್ದು, ಇದನ್ನು ಕಾಂಕ್ರಿಟ್‌ ರಸ್ತೆಯನ್ನಾಗಿಸಿ, ಈ ಕಾಲನಿಗೆ ಸೂಕ್ತ ಮೂಲ ಸೌಕರ್ಯ ಕಲ್ಪಿಸುವ ವ್ಯವಸ್ಥೆಯಾಗಬೇಕಿದೆ.

ಇತಿಹಾಸ

ಆಲ್‌ ಎಂಬುದು ಜಲಾನಯನ ಪ್ರದೇಶವನ್ನು ಸೂಚಿಸುವ ದೇಶಿಯ ಪದ ಮತ್ತು ಅಷ್ಟೇ ಪ್ರಾಚೀನವಾದದ್ದು. ಜಲದ ಮೂಲ ಕೆರೆ, ನದಿ ಯಾವುದಾದರೂ ಆಗಬಹುದು. ಆ ನೀರಿನ ಸನಿಹವಿರುವ ವಸತಿ ಪ್ರದೇಶವೇ ಆಲ್‌. ಸುರಗಿರಿ ದೇವಸ್ಥಾನದ ವಾಯವ್ಯ ದಿಕ್ಕಿನಲ್ಲಿ ಮೂಲ್ಯರ ಭೂಮಿಯೆಂದು ಗುರುತಿಸುವ ಸ್ಥಳವಿದೆ. ಇಲ್ಲಿ ಮೈಲುದ್ದದ ಕೆರೆಯೊಂದು ಇತ್ತು. ಈಗಲೂ ಆ ಕೆರೆಯ ಕುರುಹುಗಳಿವೆ. ಆ ಕೆರೆಯಿಂದಾಗಿಯೇ ಕೆಮ್ರಾಲ್‌ ಎಂಬ ಹೆಸರು ಬಂತು. ಕೆರೆ + ಮೇಲ್‌ +ಆಲ್‌. ಅದೇ ಕೆರೆಯ ಮೇಲಿನ ಆಲ್‌ ಕೆಮ್ರಾಲ್‌. (ಮೇಲ್‌ ಎಂಬ ಪ್ರಯೋಗ ತುಳುವಿನಲ್ಲಿಯೂ ಇದೆ ) ಮೂಲ್ಕಿಯ ಬಂದರಿನಿಂದ ಅಕ್ಕಿ ವಿದೇಶಗಳಿಗೆ ರವಾನೆಯಾಗುತ್ತಿದ್ದ ಪ್ರಮುಖ ಉತ್ಪನ್ನ. ಪೋರ್ಚುಗೀಸರ ಅನಂತರ ಗೌಡ ಸಾರಸ್ವತರು ಈ ವ್ಯಾಪಾರವನ್ನು ಮುಂದುವರಿಸಿದ್ದರು. ಕ್ರಿ.ಶ. 1705ರಲ್ಲಿ ಸುರಗಿರಿ ದೇವಸ್ಥಾನದ ಸಮೀಪವಿರುವ ಅಂಗಡಿ ಎಂದು ಗುರುತಿಸುವ ಪ್ರದೇಶದಲ್ಲಿ ಅಕ್ಕಿ ಖರೀದಿ ಕೇಂದ್ರ ಸ್ಥಾಪಿಸಿದರು. ಅದಕ್ಕೆ ಬದಲಾಗಿ ಹಣವನ್ನು ಅಥವಾ ಇತರ ದಿನಸಿ ಸಾಮಗ್ರಿಗಳನ್ನು ನೀಡತೊಡಗಿದರು.

ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನ

800 ವರ್ಷಗಳ ಇತಿಹಾಸ ಹೊಂದಿರುವ ಸುರಗಿರಿ ಮಹಾಲಿಂಗೇಶ್ವರ ಮೂರು ಘಟ್ಟಗಳಲ್ಲಿ ಮೂರು ವಿಭಿನ್ನ ಸಂಪ್ರದಾಯಗಳಿಂದ ಆರಾಧನೆಗೊಂಡಿದೆ. ಶೈವಮೂಲ ಮಹಾದೇವನಾಗಿ ಮಧ್ಯಯುಗ ದಲ್ಲಿ ಆಳ್ವರ ಕಾಲದಲ್ಲಿ ಸ್ಥಾಪಿಸಲ್ಪಟ್ಟ ಲಿಂಗ ಜನಪದರ ಬಾಯಿಯಲ್ಲಿ ದೇಂದಗುಡ್ಡೆಯ ರುದ್ರದೇವನೆಂದು, ದೇಂದಗುಡ್ಡೆಯ ಮಹಾರುದ್ರನೆಂದೂ ಹೆಸರು ಪಡೆದು ಮುಂದೆ ಕೆಳದಿ ಆರಸರ ಕಾಲದಲ್ಲಿ ವೀರಶೈವರ ವಶಕ್ಕೆ ಬಂದು ಲಿಂಗಾಯತ ಧರ್ಮದಂತೆ ಪೂಜಿಸಲ್ಪಟ್ಟ ಅನಂತರ ಮಹಾಲಿಂಗೇಶ್ವರನೆಂದು ಕರೆಸಿಕೊಂಡಿತು. ಮುಂದೆ ಹೈದರಾಲಿ ಮತ್ತು ಟಿಪು¤ ಸುಲ್ತಾನರ ಕಾಲದಲ್ಲಿ (1782-1789ರವರೆಗೆ) ರಾಜಕೀಯ ಕಾರಣಗಳಿಂದ ಕಾಲಗರ್ಭದಲ್ಲಿ ಸೇರಿ, ಬಳಿಕ ಕ್ರಿ.ಶ. 1897ರಿಂದ ಈ ಕ್ಷೇತ್ರದಲ್ಲಿ ಆರಾಧನೆಗಳು ಪಾರಂಭಗೊಂಡವು.

ಹೂಳು ತುಂಬಿದ ಚರಂಡಿ

ನಂದಿನಿ ನದಿ ಸೇರುವ ಚಿಕ್ಕ ಹಳ್ಳ, ತೋಡುಗಳು ಗ್ರಾಮ ವ್ಯಾಪ್ತಿಯಲ್ಲಿದ್ದು, ಅದನ್ನು ಸಂಪರ್ಕಿಸುವ ಚರಂಡಿಗಳಲ್ಲಿ ತ್ಯಾಜ್ಯ ಹೂಳು ತುಂಬಿದ್ದು ಸರಾಗವಾಗಿ ನೀರು ಹರಿಯಲು ತೊಡಕು ಉಂಟಾಗಿದೆ. ಇಲ್ಲಿ ಹೂಳೆತ್ತುವ ಕೆಲಸ ಮೊದಲು ನಡೆಯಬೇಕಿದೆ. ಅಲ್ಲದೇ ಕೆಲವು ಭಾಗಗಳಲ್ಲಿ ಚರಂಡಿ ಬದಿಗಳು ಕುಸಿಯುತ್ತಿದ್ದು, ಇದಕ್ಕೆ ಸೂಕ್ತ ತಡೆಗೋಡೆ ನಿರ್ಮಾಣವಾಗಬೇಕು.

ಸಮಸ್ಯೆ ನಿವಾರಣೆಗೆ ಪ್ರಯತ್ನ: ಬೆಳೆಯುತ್ತಿರುವ ಗ್ರಾಮವಾಗಿರುವ ಕೆಮ್ರಾಲ್‌ನಲ್ಲಿ ರಸ್ತೆ ದುರಸ್ತಿ ಕಾರ್ಯ ತುರ್ತಾಗಿ ನಡೆಯಬೇಕಿದೆ. ಇದನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಾಧ್ಯವಾದಷ್ಟು ಗ್ರಾಮದ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು. – ಲೀಲಾ ಕೃಷ್ಣಪ್ಪ, ಅಧ್ಯಕ್ಷರು, ಕೆಮ್ರಾಲ್‌ ಗ್ರಾಮ ಪಂಚಾಯತ್‌

-ರಘುನಾಥ ಕಾಮತ್‌ ಕೆಂಚನಕೆರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next