ಬದಿಯಡ್ಕ: ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ಅನುಗ್ರಹ ದೊಂದಿಗೆ ಮುಳ್ಳೇರಿಯ ಮಂಡಲದ ಪೆರಡಾಲ ವಲಯ ವಿದ್ಯಾರ್ಥಿ ವಾಹಿನಿಯ ಸಂಯೋಜನೆಯಲ್ಲಿ ಮುಳ್ಳೇರಿಯ ಮಂಡಲದ 10 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾಥಿಗಳಿಗಾಗಿ “ವ್ಯಕ್ತಿಯನ್ನು ಶಕ್ತಿಯಾಗಿಸೋಣ’ ಒಂದು ದಿನದ ವಿಶೇಷ ಶಿಬಿರವು ರವಿವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯಿತು.
ಹಿರಿಯ ಅಧ್ಯಾಪಕರಾದ ವೆಂಕಟ್ರಮಣ ಭಟ್ ಪೆರ್ಮುಖ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಮಕ್ಕಳ ಬೌದ್ಧಿಕ ಹಾಗೂ ಶಾರೀರಿಕ ವಿಕಾಸಕ್ಕೆ ಇಂತಹ ಶಿಬಿರಗಳು ಸಹಕಾರಿ. ಶಿಬಿರಗಳನ್ನು ಅಲ್ಲಲ್ಲಿ ಆಯೋಜಿಸುವುದು ಮಕ್ಕಳನ್ನು ಸಂಸ್ಕಾರಯುತ ಪರಿಸರಕ್ಕೆ ಕೊಂಡೊಯ್ಯಲು ಸಹಕಾರಿ ಯಾಗಲಿದೆ. ಎಳವೆಯಲ್ಲಿಯೇ ಸಂಸ್ಕಾರಯುತ ಜೀವನಕ್ಕೆ ಹೊಂದಿಕೊಳ್ಳವಂತಹ ವಾತಾವರಣದಲ್ಲಿ ಹಿರಿಯರು ಮಕ್ಕಳನ್ನು ಬೆಳೆಸಬೇಕು ಎಂದರು.
ಪೆರಡಾಲ ವಲಯ ಅಧ್ಯಕ್ಷ ಹರಿಪ್ರಸಾದ್ ಪೆರ್ಮುಖ ಧ್ವಜಾರೋಹಣಗೈದರು. ಕಾರ್ಯದರ್ಶಿ ಮುರಳಿ ಪಿ.ಕೆ. ಶಂಖನಾದಗೈದು ಸಾಮೂಹಿಕ ಗುರುವಂದನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಶಿಬಿರದಲ್ಲಿ ಶಾರದಾ ಎಸ್.ಭಟ್. ಕಾಡಮನೆ ಅವರಿಂದ ಪ್ರಾಣಾಯಾಮ, ಏಕಾಗ್ರತೆ ಸಾಧನೆ, ಗೋವಿಂದ ಭಟ್ ಬಳ್ಳಮೂಲೆ ಅವರಿಂದ ಸಂಸ್ಕೃತಿ ಸ್ವಾಭಿಮಾನ, ಬಾಲಕೃಷ್ಣ ಶರ್ಮ ಕುಂಬಳೆ ಅವರಿಂದ ಆಚಾರ ವಿಚಾರ ಆಹಾರ, ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅವರಿಂದ ನಾಯಕತ್ವ, ಡಾ| ಬೇ.ಸೀ. ಗೋಪಾಲಕೃಷ್ಣ ಭಟ್ ಅವರಿಂದ ಸಾಮಾಜಿಕ ಸಂಬಂಧದ ಕುರಿತು ತರಗತಿಯನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳು ಅತ್ಯುತ್ತಮ ವಿಚಾರಗಳನ್ನು ಮಕ್ಕಳಿಗೆ ತಲುಪಿಸುವಲ್ಲಿ ಯಶಸ್ವಿಯಾದರು.
ಮುಳ್ಳೇರಿಯ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನ ಕೇಶವಪ್ರಸಾದ ಎಡಕ್ಕಾನ, ಸಂಸ್ಕಾರ ಪ್ರಧಾನ ನವನೀತಪ್ರಿಯ ಕೈಪಂಗಳ, ಶಿಷ್ಯ ಮಾಧ್ಯಮ ವಿಭಾಗದ ಸರಳಿ ಮಹೇಶ, ವಲಯ ಮಾತೃ ವಿಭಾಗದ ಪ್ರಧಾನ ಸರೋಜ ವಳಕ್ಕುಂಜ, ವಿವಿಧ ವಲಯಗಳ ವಿದ್ಯಾರ್ಥಿವಾಹಿನಿ ಪ್ರಮುಖರು ಹಾಗೂ ಶ್ರೀ ಮಠದ ಕಾರ್ಯಕರ್ತರು ಉಪಸ್ಥಿತರಿದ್ದರು. ಜೀವಿಕಾ, ಸಂಸ್ಕಾರ, ಮಾತೃ ವಿಭಾಗಗಳ ಸಹಕಾರದೊಂದಿಗೆ ಶಿಬಿರ ಆಯೋಜಿಸಲಾಗಿತ್ತು. ಪೆರಡಾಲ ವಲಯ ವಿದ್ಯಾರ್ಥಿವಾಹಿನಿ ಪ್ರಧಾನ ಶ್ರೀಶ ಕುಮಾರ ಪಂಜಿತ್ತಡ್ಕ ನಿರ್ವಹಿಸಿದರು.