Advertisement

“ನಮ್ಮ ಕ್ಲಿನಿಕ್‌’ಗೆ ಬೇಗ ಬರಲಿ ಖಾಯಂ ವೈದ್ಯರು

06:31 PM Dec 17, 2022 | Team Udayavani |

ಗದಗ: ರಾಜ್ಯ ಬಿಜೆಪಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನಗರ ಪ್ರದೇಶದ ಬಡವರು ಹಾಗೂ ದುರ್ಬಲ ವರ್ಗದವರಿಗೆ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಡಿ.14ಂದು ಆರಂಭವಾಗಿರುವ “ನಮ್ಮ ಕ್ಲಿನಿಕ್‌’ಗೆ ಖಾಯಂ ವೈದ್ಯರ ನೇಮಕವಾಗ ಬೇಕಿದೆ.

Advertisement

ಗದಗ ನಗರದ ಜವಳಗಲ್ಲಿ, ಮುಂಡರಗಿಯ ದೋಸಗೇರ ಓಣಿ, ನರಗುಂದದ ಜಮಲಾಪುರ ಓಣಿ, ರೋಣದ ಹತ್ತಿಕೇರಿ ಹಾಗೂ ಶಿರಹಟ್ಟಿ ಪಟ್ಟಣದ ಅಂಬೇಡ್ಕರ್‌ ನಗರದಲ್ಲಿ “ನಮ್ಮ ಕ್ಲಿನಿಕ್‌’ಗಳು ಸೇವೆ ಆರಂಭಿಸಿವೆ. ರೋಣದಲ್ಲಿ ಮಾತ್ರ ವೈದ್ಯರ ನೇಮಕವಾಗಿದ್ದು, ಉಳಿದೆಡೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗುತ್ತಿದೆ.

ಇನ್ನುಳಿದಂತೆ 5 “ನಮ್ಮ ಕ್ಲಿನಿಕ್‌’ಗಳಲ್ಲಿ ನರ್ಸಿಂಗ್‌ ಸ್ಟಾಫ್‌, ಲ್ಯಾಬ್‌ ಟೆಕ್ನಿಷಿಯನ್‌ ಹಾಗೂ ಡಿ ದರ್ಜೆ ನೌಕರರು ಸೇವೆಗೆ ನಿಯೋಜನೆಗೊಂಡು ಕೆಲಸ ಆರಂಭಿಸಿದ್ದಾರೆ. ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳು, ರಕ್ತದೊತ್ತಡ, ಮಧುಮೇಹ ಸೇರಿದಂತೆ ಇತರೆ ಕಾಯಿಲೆಗಳಿಗೆ ಔಷ ಧಗಳು ಸಮರ್ಪಕವಾಗಿ ವಿತರಣೆಯಾಗುತ್ತಿವೆ. ಕೆಲವು ಔಷಧಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಬಳಸಿಕೊಳ್ಳಲಾಗುತ್ತಿದೆ.

ನಮ್ಮ ಕ್ಲಿನಿಕ್‌ನಲ್ಲಿ ಸ್ವಾಗತಕಾರರ ಹಾಗೂ ನಿರೀಕ್ಷಣಾ ಸ್ಥಳದ ಕೊಠಡಿ, ಔಷಧ ವಿತರಣಾ ಕೊಠಡಿ, ಪ್ರಯೋಗಾಲಯ, ಚಿಕಿತ್ಸೆಗೆ ಪ್ರತ್ಯೇಕ ಕೊಠಡಿಗಳನ್ನು ತೆರೆಯಲಾಗಿದೆ. ಆದರೆ, ಪ್ರಯೋಗಾಲಯದಲ್ಲಿ ರಕ್ತದೊತ್ತಡ, ಮಧುಮೇಹ ತಪಾಸಣೆಗಳು ಮಾತ್ರ ಲಭ್ಯವಿದೆ. ಲೀವರ್‌ ಸೇರಿ ಇನ್ನೂ 10 ಬಗೆಯ ಟೆಸ್ಟ್‌ಗಳ ಕಿಟ್‌ಗಳು ಬರಬೇಕಿದೆ.

ನಮ್ಮ ಕ್ಲಿನಿಕ್‌ಗೆ ಉತ್ತಮ ಸ್ಪಂದನೆ: ಈಗಾಗಲೇ ಆರಂಭವಾಗಿರುವ ನಮ್ಮ ಕ್ಲಿನಿಕ್‌ನಲ್ಲಿ ಕಳೆದ ಎರಡು ದಿನಗಳಿಂದ ನಿತ್ಯ 25ರಿಂದ 30 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ತದೊತ್ತಡ, ಮಧುಮೇಹದಂತಹ ಮಾತ್ರೆಗಳನ್ನು ಉಚಿತವಾಗಿ ಪಡೆದುಕೊಂಡು ನಮ್ಮ ಕ್ಲಿನಿಕ್‌ನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ| ಜಗದೀಶ ನುಚ್ಚಿನ.

Advertisement

ನಮ್ಮ ಕ್ಲಿನಿಕ್‌ ಸೇವೆಗಳು: ತಾಯಿ ಆರೋಗ್ಯ-ಗರ್ಭಿಣಿ ಹಾಗೂ ಬಾಣಂತಿ ಸೇವೆಗಳು, ನವಜಾತ ಶಿಶು ಆರೈಕೆ ಹಾಗೂ ಚುಚ್ಚುಮದ್ದು ಸೇವೆಗಳು, ಮಕ್ಕಳು ಹಾಗೂ ಹದಿಹರೆಯದವರಿಗೆ ನೀಡುವ ಆರೋಗ್ಯ ಸೇವೆಗಳು, ಕುಟುಂಬ ಕಲ್ಯಾಣ ಯೋಜನೆಗಳ ಹಾಗೂ ಎಲ್ಲ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ, ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ನಿರ್ವಹಣೆ, ಮಧುಮೇಹ, ರಕ್ತದೊತ್ತಡ, ಕಣ್ಣು, ದಂತ ಹಾಗೂ ಮಾನಸಿಕ ಆರೋಗ್ಯ ಸೇವೆಗಳು ಮತ್ತು ತುರ್ತು ವೈದ್ಯಕೀಯ ಸೇವೆಗಳು ನಮ್ಮ ಕ್ಲಿನಿಕ್‌ನಲ್ಲಿ ದೊರೆಯಲಿವೆ. ಜೊತೆಗೆ 14 ವಿಧದ ಪ್ರಯೋಗಗಳು ನಡೆಯಲಿವೆ. ನಮ್ಮ ಕ್ಲಿನಿಕ್‌ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9ರಿಂದ ಸಂಜೆ 4.30ರ ವರೆಗೆ ಸೇವೆ ಸಲ್ಲಿಸಲಿದ್ದು, ಭಾನುವಾರ ರಜೆ ಇರಲಿದೆ.

11 ನಮ್ಮ ಕ್ಲಿನಿಕ್‌ಗಳಲ್ಲಿ 5 ಆರಂಭ: ಜಿಲ್ಲೆಯಲ್ಲಿ ಗಜೇಂದ್ರಗಡ 2, ರೋಣ 2, ನರಗುಂದ 2, ಶಿರಹಟ್ಟಿ 2, ಗದಗ, ಲಕ್ಷ್ಮೇಶ್ವರ ಹಾಗೂ ಮುಂಡರಗಿಯಲ್ಲಿ ತಲಾ 1 ಸೇರಿ ಒಟ್ಟು 11 ನಮ್ಮ ಕ್ಲಿನಿಕ್‌ಗಳು ಮಂಜೂರಾಗಿದ್ದು, 5 ಮಾತ್ರ ಆರಂಭಗೊಂಡಿವೆ. ಇನ್ನುಳಿದಂತೆ ನರಗುಂದ ಪಟ್ಟಣದ ಜಮಲಾಪೂರ, ರೋಣ ಪಟ್ಟಣದ ಜಗಜೀವನರಾಮ್‌ ನಗರ, ಗಜೇಂದ್ರಗಡ ಪಟ್ಟಣದ ಲಮಾಣಿ ಚಾಳ ಮತ್ತು ಜಿ.ಎಸ್‌. ಪಾಟೀಲ ನಗರ, ಶಿರಹಟ್ಟಿ ಪಟ್ಟಣದ ಕೆಳಗರ ಓಣಿ ಮತ್ತು ಲಕ್ಷೆ ¾àಶ್ವರ ಪಟ್ಟಣದ ಹರಿಜನ ಕೇರಿಯಲ್ಲಿ ನಮ್ಮ ಕ್ಲಿನಿಕ್‌ಗಳು ಆರಂಭಗೊಳ್ಳಬೇಕಿದೆ.

ಜಿಲ್ಲೆಯ ನಗರ ಪ್ರದೇಶದಲ್ಲಿನ ಬಡ ಹಾಗೂ ದುರ್ಬಲ ವರ್ಗದವರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಗುರಿಯೊಂದಿಗೆ ಆರಂಭಿಸಲಾಗುತ್ತಿರುವ ನಮ್ಮ ಕ್ಲಿನಿಕ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಸ್ತುತ 5 ನಮ್ಮ ಕ್ಲಿನಿಕ್‌ಗಳು ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಉಳಿದ 6 ನಮ್ಮ ಕ್ಲಿನಿಕ್‌ ಗಳನ್ನು ತೆರೆಯಲಾಗುವುದು.
ಡಾ|ಜಗದೀಶ ನುಚ್ಚಿನ, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ

ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next