Advertisement

ನ್ಯಾಯಮಂಡಳಿಗೆ ಪರಿಕ್ಕರ್‌ ಪತ್ರ ಬರೆಯಲಿ: ಸಿದ್ದರಾಮಯ್ಯ

06:50 AM Jan 02, 2018 | Team Udayavani |

ಬೆಂಗಳೂರು: ಮಹದಾಯಿ ವಿಚಾರದಲ್ಲಿ ತಮ್ಮೊಂದಿಗೆ ಮಾತುಕತೆ ನಡೆಸಲು ಇಷ್ಟ ಇಲ್ಲದಿದ್ದರೆ ಕರ್ನಾಟಕಕ್ಕೆ ನೀರು ಬಿಡಲು ಸಿದ್ದ ಎಂದು ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ನ್ಯಾಯಮಂಡಳಿಗೆ ಪತ್ರ ಬರೆಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರು ವಿವಿ ಕುಲಸಚಿವ ಪ್ರೊ. ಬಿ.ಕೆ. ರವಿ ಅವರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಡಿಸೆಂಬರ್‌ 15 ರೊಳಗೆ ಮಹದಾಯಿ ನೀರು ಹರಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದರು. ಹುಬ್ಬಳ್ಳಿ ಸಮಾವೇಶದಲ್ಲಿ ಗೋವಾ ಮುಖ್ಯಮಂತ್ರಿ ಬರೆದ ಪತ್ರವನ್ನೂ ಓದಿದರು. ಮರುದಿನವೇ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದು ಮಾತುಕತೆಗೆ ಸಿದ್ದ ಎಂದು ತಿಳಿಸಿದ್ದೇನೆ. ಆದರೆ, ಅವರಿಂದ ಯಾವುದೇ ಉತ್ತರ ಬರಲಿಲ್ಲ. ನಾನು ಬರೆದ ಎರಡು ಪತ್ರಗಳಿಗೂ ಉತ್ತರ ಸಿಕ್ಕಿಲ್ಲ. ಆದರೆ, ಗೋವಾ ಜಲ ಸಂಪನ್ಮೂಲ ಸಚಿವರು ಪರಿಕ್ಕರ್‌ ಮತ್ತು ಯಡಿಯೂರಪ್ಪ ನಾಟಕವಾಡಿದ್ದಾರೆ ಎಂದಿದ್ದಾರೆ. ಇದು ರಾಜಕೀಯ ಸ್ಟಂಟ್‌ ಎಂದು ಸಿಎಂ ತಿಳಿಸಿದ್ದಾರೆ.

ಈ ಮಧ್ಯೆ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌, ಪರಿಕ್ಕರ್‌ ಯಡಿಯೂರಪ್ಪಗೆ ಬರೆದ ಪತ್ರವನ್ನು ರಾಜ್ಯ ಸರ್ಕಾರ ನ್ಯಾಯಮಂಡಳಿ ಮುಂದೆ ಇಡಲಿ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದಕ್ಕಿಂತ ನಗೆಪಾಟಲಿನ ವಿಚಾರ ಬೇರೊಂದಿಲ್ಲ. ಶೆಟ್ಟರ್‌ ವಕೀಲರಾಗಿದ್ದವರು. ಒಬ್ಬ ಮುಖ್ಯಮಂತ್ರಿ ಮತ್ತೂಬ್ಬ ಮುಖ್ಯಮಂತ್ರಿಗೆ ಪತ್ರ ಬರೆಯಬೇಕು. ಈ ವಿಚಾರವೂ ಶೆಟ್ಟರ್‌ ಅವರಿಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಎಷ್ಟು ಬಾರಿಯಾದರೂ ಕರ್ನಾಟಕಕ್ಕೆ ಬರಲಿ ಅವರು ಏನಾದರೂ ಹೇಳಿಕೊಳ್ಳಲಿ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಲ್ಲಿ ಚಾರ್ಜ್‌ಶೀಟ್‌ ಬಿಡುಗಡೆ ಮಾಡುವಂತೆ ಅಮಿತ್‌ ಷಾ ಹೇಳಿದ್ದಾರೆ. ನನ್ನ ವಿರುದ್ಧ ಚಾರ್ಜ್‌ಶೀಟ್‌ ಬಿಡುಗಡೆ ಮಾಡಿದ್ದೂ ಆಯಿತು. ಹಾವಿಲ್ಲದೇ ಪುಂಗಿ ಊದುತ್ತಿದ್ದಾರೆ ಎಂದು ಸಿಎಂ ಕುಹಕವಾಡಿದರು.

ಬಿಜೆಪಿಯಲ್ಲಿ ಗುಂಪುಗಾರಿಕೆ ಶುರುವಾಗಿದೆ. ಯಡಿಯೂರಪ್ಪ ಅವರ ಪರಿವರ್ತನಾ ಯಾತ್ರೆಗೆ ಶೋಭಾ ಕರಂದ್ಲಾಜೆಯೇ ಹೋಗುತ್ತಿಲ್ಲ. ಹೋದ ಕಡೆಯಲ್ಲಾ ಯಡಿಯೂರಪ್ಪ ಅಭ್ಯರ್ಥಿಗಳ ಘೋಷಣೆ ಮಾಡುತ್ತಿದ್ದಾರೆ. ಈ ಸಂಬಂಧ ಪಕ್ಷದ ನಾಯಕರು ಅಮಿತ್‌ ಷಾಗೆ ದೂರು ನೀಡಿದ್ದಾರೆ. ಹೀಗಾಗಿ ಅಮಿತ್‌ ಷಾ ಅಭ್ಯರ್ಥಿಗಳನ್ನು ಯಾರೂ ಘೋಷಣೆ ಮಾಡುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ. ಈ ಮೂಲಕ ಯಡಿಯೂರಪ್ಪ ಬಾಯಿಗೆ ಬೀಗ ಹಾಕಿದ್ದಾರೆ ಎಂದು ಹೇಳಿದರು.

Advertisement

ಹೋದ ಕಡೆಯಲ್ಲೆಲ್ಲಾ ಜನರು ಪ್ರಶ್ನೆ ಮಾಡುತ್ತಾರೆ ಎಂದು ಯಡಿಯೂರಪ್ಪ ಪರಿಕ್ಕರ್‌ ಅವರು ಬರೆದ ಪತ್ರ ಓದಿದ್ದಾರೆ.ಈ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದರು.

ಗೌಡರದು ರಾಜಕೀಯ ಹೇಳಿಕೆ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಕ್ಷದ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಮಾಜಿ ಪ್ರಧಾನಿ ದೇವೇಗೌಡ ಅವರ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಸರ್ಕಾರದ ಹಣ ಬಳಕೆ ಮಾಡಿದರೆ ಅದು ಹೇಗೆ ದುರುಪಯೋಗವಾಗುತ್ತದೆ ಎಂದು ಪ್ರಶ್ನಿಸಿದರು.

ಡಿನೋಟಿಫೀಕೇಶನ್‌ ಮಾಡಿಲ್ಲ: ಭೂಪಸಂದ್ರದಲ್ಲಿ ಡಿ ನೊಟಿಫೀಕೇಶನ್‌ ಮಾಡಿದ್ದೇನೆ ಎಂದು ಬಿಜೆಪಿಯವರು ದಾಖಲೆ ತೋರಿಸಲಿ, ಶಾಸಕ ವಸಂತ ಬಂಗೇರ ನೀಡಿರುವ ಮನವಿ ಮೇಲೆ ಪರಿಶೀಲಿಸಿ ಎಂದು ಬರೆದಿದ್ದೇನೆ ಅದನ್ನೇ ಡಿ ನೋಟಿಫೀಕೇಶನ್‌ ಎಂದು ಬಿಜೆಪಿಯವರು ಭಾವಿಸಿದ್ದಾರೆ. ಇಡೀ ಕಡತದಲ್ಲಿ ನನ್ನ ಸಹಿ ಇಲ್ಲ. ಸುಳ್ಳು ದೂರು ತೆಗೆದುಕೊಂಡು ಹೋದರೆ, ಯಾರು ತನಿಖೆಗೆ ಒಪ್ಪಿಗೆ ಸೂಚಿಸುತ್ತಾರೆ. ಯಡಿಯೂರಪ್ಪ ಅವಧಿಯಲ್ಲಿ ಬರೀ ಡಿ ನೊಟಿಫಿಕೇಶನ್‌ ಮಾಡಿದ್ದರಿಂದ ನಾನೂ ಅದನ್ನೇ ಮಾಡಿರಬಹುದೆಂದು ಊಹಿಸಿಕೊಂಡು ಬಿಜೆಪಿಯವರು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next