Advertisement
ನಮ್ಮ ದೇಶದಲ್ಲಿ ಸದೃಢವಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳಿದ್ದರೂ ಸ್ಥಳೀಯ ಸ್ವಯಂ ಆಡಳಿತದ ವಿಚಾರ ನಮಗೆ ಹೊಸತೇನೂ ಅಲ್ಲ. ವೇದಗಳ ಕಾಲದಲ್ಲಿಯೇ ಜನಪದಗಳೆಂಬ ಇಂತಹ ಆಡಳಿತದ ವಿಧಾನ ಚಾಲ್ತಿಯಲ್ಲಿ ದ್ದುದಾಗಿ ತಿಳಿದು ಬರುತ್ತದೆ. ದಕ್ಷಿಣ ಭಾರತದಲ್ಲಿಯೂ ಗ್ರಾಮ ಸಮಿತಿಗಳು ಅಸ್ತಿತ್ವದಲ್ಲಿದ್ದು ಆಡಳಿತಾತ್ಮಕ ನಿರ್ಧಾರ ಗಳನ್ನು ತೆಗೆದುಕೊಳ್ಳುತ್ತಿದ್ದವು. ಇವು ರಾಜ ಪ್ರತಿನಿಧಿ ಗಳೊಂದಿಗೆ ಸೇರಿ ವೈಯಕ್ತಿಕ ಹಾಗೂ ಸಾಮಾಜಿಕ ಆಸ್ತಿಗಳ ಪರಿಶೀಲನೆ ನಡೆಸುತ್ತಿದ್ದವು. ಹೀಗೆ ಅನಾದಿ ಕಾಲದಿಂದಲೂ ಇತಿಹಾಸದ ವಿವಿಧ ಕಾಲಘಟ್ಟ ಗಳಲ್ಲಿ ಸಾಂಕಘಟಕಗಳಾಗಿ ಪಂಚಾಯತ್ ವ್ಯವಸ್ಥೆ ಇದ್ದು ಅದೀಗ ವಿಕಸಿತಗೊಂಡಿದೆ.
Related Articles
Advertisement
ಪ್ರಜಾಪ್ರಭುತ್ವದ ಮುಖ್ಯ ಲಕ್ಷಣವೆಂದರೆ ಜನ ಸಾಮಾನ್ಯರಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತ ವಾಗಿ ವ್ಯಕ್ತಪಡಿಸಲು, ಅಗತ್ಯ ಬಂದರೆ ಆಡಳಿತದ ನಿಲುವಿನ ಕುರಿತಾಗಿ ಸಕಾರಣ ಅಸಮಾಧಾನ ವ್ಯಕ್ತಪಡಿಸಲು ಅವಕಾಶವಿರುವುದು ಮತ್ತು ತನಗಾದ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಸಾಧ್ಯ ವಾಗುವುದು. ಹಿಂದೆ ಎಸೆಸೆಲ್ಸಿ ಪರೀಕ್ಷೆಯಷ್ಟೇ ಪಾಸಾಗಿದ್ದ ಕಾರ್ಯದರ್ಶಿಯವರ ಉಸ್ತುವಾರಿ ಯಲ್ಲಿ ಗ್ರಾಮ ಪಂಚಾಯತ್‌ಗಳು ನಡೆಯುತ್ತಿದ್ದು ಆಡಳಿತ ತೃಪ್ತಿಕರವಾಗಿರಲಿಲ್ಲ ಎಂಬ ಅಭಿಪ್ರಾಯ ವಿತ್ತು. ಆದರೆ ಈಗ ಹಾಗಿಲ್ಲ. ಉನ್ನತೋನ್ನತ ಶಿಕ್ಷಣ ಪಡೆದವರೂ ಇಂದು ಪಿಡಿಒ ಹುದ್ದೆ ಗೆ ಬಂದಿದ್ದಾರೆ. ಆದರೂ ಕೆಲವು ಪಂಚಾಯತ್‌ಗಳಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ. ಜನರ ಅಹವಾಲನ್ನು ತಾಳ್ಮೆಯಿಂದ ಕೇಳುವ, ಅರ್ಜಿಗಳನ್ನು ಓದಿ ಪರಾಮರ್ಶಿಸುವ ಮನಃಸ್ಥಿತಿ, ವ್ಯವಧಾನ ಕೆಲವರಿಗಿಲ್ಲ. ಇದು ತಮ್ಮ ಕರ್ತವ್ಯದ ಅವಿಭಾಜ್ಯ ಅಂಗ ಎಂಬ ಕನಿಷ್ಠ ಅರಿ ವನ್ನು ಹೊಂದಿಲ್ಲ. ವಸ್ತುನಿಷ್ಠ ಬೇಡಿಕೆಗಳನ್ನು ವ್ಯಕ್ತಿನಿಷ್ಠ ಸವಾಲಾಗಿ ಗ್ರಹಿಸುವುದು, ಸಾಮಾಜಿಕ ವಿನಯವಂತಿಕೆಯನ್ನು ದೌರ್ಬಲ್ಯವಾಗಿ ಪರಿಗಣಿಸುವುದು, ಹುದ್ದೆಯ ಅಧಿಕಾರ ಬಲದಿಂದ ದಮನಿಸಲು ಪ್ರಯತ್ನಿಸುವುದು ಮೊದಲಾದವು ಗಳನ್ನು ಕೆಲವು ಕಡೆ ಕಾಣುತ್ತೇವೆ. ಕೆಲವರಂತೂ ತಮ್ಮಲ್ಲಿಗೆ ಬಂದವರನ್ನು ನಿಕೃಷ್ಟ ಭಾವದಿಂದ ಕಾಣುತ್ತಾರೆ. ವಿನಮ್ರತೆ, ಸಜ್ಜನಿಕೆ, ಪ್ರಾಮಾಣಿಕತೆಗಳು ಉಪಯೋಗಕ್ಕೆ ಬಾರದಿದ್ದಾಗ, ಅನಿವಾರ್ಯವಾಗಿ ಜನಸಾಮಾನ್ಯನು ಕಚೇರಿಯಿಂದ ಲಿಖೀತ ದಾಖಲೆ ಗಳನ್ನು ಕೇಳಿದರೆ ಅದನ್ನೇ ಒಂದು ಅಪರಾಧ ವೆಂಬಂತೆ ಪರಿಗಣಿಸಲಾಗುತ್ತದೆ. ನಿಧಾನದ್ರೋಹವೇ ಮೊದಲಾದ ನಕಾರಾತ್ಮಕ ಪ್ರಯೋಗ ಗಳನ್ನು ಮಾಡಲಾಗುತ್ತದೆ.
ಇಂತಹ ಸಂದರ್ಭಗಳಲ್ಲಿ ತಾನು ಪ್ರತಿನಿಧಿಸುವ ಜನರ ಅಹವಾಲುಗಳಿಗೆ ಧ್ವನಿಯಾಗಬೇಕಾದ ಜನಪ್ರತಿನಿಧಿಗಳಲ್ಲಿ ಕೆಲವರು ಅಧಿಕಾರಿಗಳೊಂದಿಗಿನ ಸ್ನೇಹ ಭಾವದಿಂದಲೋ ಸಣ್ಣಪುಟ್ಟ ಟೆಂಡರ್ ಸಿಗುತ್ತದೆಂಬ ಸ್ವಲಾಭ ಚಿಂತನೆಯಿಂದಲೋ ತನ್ನ ಕರ್ತವ್ಯದ ಅರಿವಿನ ಅಜ್ಞಾನದಿಂದಲೋ ಅಥವಾ ಇನ್ಯಾವುದೋ ಅದೃಶ್ಯ ಕಾರಣಗಳಿಂದ ತಟಸ್ಥರಾಗಿ ಬಿಡುತ್ತಾರೆ. ಇದು ಸಾಮಾನ್ಯ ನಾಗರಿಕನ ಹೋರಾಟದ ಹಾದಿಯಲ್ಲಿ ಮುಳ್ಳಾಗಿ ಪರಿಣಮಿಸುವುದು ಮತ್ತು ಸ್ವಲ್ಪ ಮಟ್ಟಿನ ಹಿನ್ನಡೆಗೂ ಕಾರಣವಾಗುವುದು. ಇದು ಜನಪ್ರತಿನಿಧಿಗಳು ತಮಗೆ ಅರಿವಿಲ್ಲದಂತೆಯೇ ಭ್ರಷ್ಟ ಅಧಿಕಾರಿಗೆ ಬೆಂಬಲ ನೀಡಿದಂತಾಗುವುದು.
ಸರಕಾರಿ ಕಚೇರಿಗಳಲ್ಲಿ ಇನ್ನೊಂದು ಬಗೆಯ ಅಲಿಖಿತ ನಿಯಮ ಇದ್ದಂತಿದೆ. ಅದೆಂದರೆ ಕೆಲವು ಮೇಲಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಿಗಳು, ನೌಕರರು ಮಾಡಿದ ತಪ್ಪು, ಕರ್ತವ್ಯಲೋಪದ ಬಗ್ಗೆ ಜನರಿಂದ ದೂರು ಬಂದಾಗ, ಅದನ್ನು ಅಲಕ್ಷಿಸಿ, ವಿಚಾರ-ವಿಮರ್ಶೆ ಮಾಡದೇ ತಮ್ಮವರ ಪರ ವಹಿಸುವುದು. ಇದರಿಂದ ಜನತೆಗೆ ಸಿಗ ಬೇಕಾದ ಸಹಜ ನ್ಯಾಯವನ್ನು ನಿರಾಕರಿಸಿದಂತೆ ಮಾತ್ರವಲ್ಲದೇ ಕೆಳಹಂತದ ನೌಕರ, ಅಧಿಕಾರಿಗಳಿಗೆ ಪ್ರಜಾಕಂಟಕರಾಗಿ, ಸ್ವೇಚ್ಛಾಚಾರಿಗಳಾಗಿ ವರ್ತಿಸಲು ಪರವಾನಿಗೆ ನೀಡಿದಂತಾಗುವುದು. ಹೀಗೆ ಎಲ್ಲಿ ಕಾನೂನು, ಕಾನೂನಿನ ಆಡಳಿತ ನಡೆಯುವು ದಿಲ್ಲವೋ ಅಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಅರಾಜಕತೆ ತಾಂಡವವಾಡುವುದು. ಅದು ಸರಕಾರ ದಿಂದ ಅಧಿಕಾರ, ಸಂಬಳ ಪಡೆದು ನಡೆಸುವ ಜಂಗ್ಲೀ ನ್ಯಾಯವಾಗುವುದು.
ಪಂಚಾಯತ್ ಕಾನೂನುಗಳು ಕೇವಲ ದಾಖಲೆಪತ್ರಗಳಿಗೆ ಮಾತ್ರ ಸೀಮಿತವೇ?, ಈ ಕಾನೂನುಗಳನ್ನು ಕಾಗದದ ಹುಲಿಗಳನ್ನಾಗಿ ಮಾಡುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು. ಗ್ರಾಮ ಸ್ವರಾಜ್ಯದ ತಿರುಳನ್ನು ಅರ್ಥೈಸಿಕೊಂಡು ಪಂಚಾಯತ್‌ನ ಆಡಳಿತ ವರ್ಗ ಮತ್ತು ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸುವುದು ಅತ್ಯಗತ್ಯ.
– ಡಾ| ಕೆ.ಎಸ್.ಎನ್.ಉಡುಪ, ಸುಬ್ರಹ್ಮಣ್ಯ