Advertisement

ಕರ್ನಾಟಕದಲ್ಲೂ ಪ್ರಶಸ್ತಿ ಸಂಖ್ಯೆ ಇಳಿಮುಖವಾಗಲಿ

12:11 AM Nov 24, 2022 | Team Udayavani |

ಪ್ರಶಸ್ತಿಗಳ ಸಂಖ್ಯೆಗೊಂದು ಮಿತಿ ಇರಬೇಕು ಎಂಬ ಮನೋಭಾವದಿಂದ ಕೇಂದ್ರ ಸರಕಾರ, ಶಿಕ್ಷಣ, ಸಿನೆಮಾ, ಸಂಗೀತ, ನಾಟಕ, ಸಾಹಿತ್ಯ ಸೇರಿದಂತೆ ಪ್ರಮುಖ ಪ್ರಶಸ್ತಿಗಳ ಸಂಖ್ಯೆಯನ್ನು ಇಳಿಕೆ ಮಾಡಲು ಮುಂದಾಗಿರುವುದು ಶ್ಲಾಘನೀಯ. ಸದ್ಯ ಈ ಬಗ್ಗೆ ಕೇಂದ್ರ ಸರಕಾರದಿಂದ ಅಧಿಕೃತ ಆದೇಶ ಹೊರಬೀಳದಿದ್ದರೂ ಇಂಥದ್ದೊಂದು ಚಿಂತನೆ ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಎಂದೇ ಹೇಳಬಹುದು.

Advertisement

ಪ್ರಶಸ್ತಿ ಪುರಸ್ಕಾರಗಳ ಸಂಖ್ಯೆ ಕಡಿಮೆ ಇದ್ದಷ್ಟೂ ಗೌರವ ಹೆಚ್ಚು ಮತ್ತು ಅರ್ಹರಿಗೆ ಸಿಗುವ ಸಾಧ್ಯತೆ ಹೆಚ್ಚು. ಸಂಖ್ಯೆ ಬೇಕಾಬಿಟ್ಟಿ ಹೆಚ್ಚಿದ ಹಾಗೆ ಅದು ತನ್ನ ಗುಣಮಟ್ಟವನ್ನು ಕಳೆದುಕೊಳ್ಳುವ ಅಪಾಯ ಇದೆ. ಈ ವಿಚಾರದಲ್ಲಿ ಮೊದಲಿನಿಂದಲೂ ಒಂದೇ ಆಕ್ಷೇಪವಿದ್ದೇ ಇದೆ. ಲಾಬಿ ಹಾಗೂ ರಾಜಕೀಯ ಒತ್ತಡಗಳಿಂದ ಪ್ರಶಸ್ತಿ ಪಡೆಯುವವರ ನಡುವೆ, ಸಮರ್ಥರು ಮತ್ತು ಅರ್ಹರ ಹೆಸರು ಮಸುಕಾಗಿಬಿಡುವ ಅಪಾಯ ಇದೆ. ಆದರೂ ಸದ್ಯ ಕೇಂದ್ರ ಮತ್ತು ರಾಜ್ಯದ ಮಟ್ಟದಲ್ಲಿ ಪದ್ಮ ಪ್ರಶಸ್ತಿಗಳು ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ತೆರೆಮರೆಯ ಸಾಧಕರಿಗೆ ನೀಡುವ ಮೂಲಕ ಪ್ರಶಸ್ತಿಗಳ ಮೌಲ್ಯ ಹೆಚ್ಚಳ ಮಾಡಿರುವುದು ಕೊಂಚ ಮಟ್ಟಿನ ಸಮಾಧಾನಕರ ಅಂಶ. ಆದರೆ ಇಂಥ ಕಾರ್ಯ ಕೇವಲ ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ, ಕರ್ನಾಟಕ ರತ್ನ, ಕನ್ನಡ ರಾಜ್ಯೋತ್ಸವದಂಥ ಪ್ರಶಸ್ತಿಗಳಿಗೆ ಸೀಮಿತವಾಗಬಾರದು. ಇದು ಎಲ್ಲ ರಂಗಕ್ಕೂ ಮುಟ್ಟಬೇಕು. ಆಗಲೇ ಪ್ರಶಸ್ತಿ ಪಡೆದವರಿಗೆ ಮತ್ತು ಪ್ರಶಸ್ತಿ ನೀಡಿದವರಿಗೆ ಗೌರವ ಹೆಚ್ಚಲು ಸಾಧ್ಯ.

ದಶಕದ ಹಿಂದಿನ ಮಾತು ಕೂಡ ಹೀಗೆಯೇ ಇತ್ತು. ತಮಗೆ ಬೇಕಾದವರಿಗೆ ಮಾತ್ರ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂಬ ಆರೋಪಗಳು, ಯಾವುದೇ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ ತತ್‌ಕ್ಷಣ ಕೇಳಿಬರುತ್ತಿತ್ತು. ಇದಕ್ಕೀಗ ಒಂದು ಮಟ್ಟಿನ ನಿಯಂತ್ರಣ ಸಿಕ್ಕಿದೆ. ಉದಾಹರಣೆಗೆ ರಾಜ್ಯೋತ್ಸವ ಪ್ರಶಸ್ತಿ. ಹಿಂದೆ ಲೆಕ್ಕವಿಲ್ಲದಷ್ಟು ಜನರಿಗೆ ರಾಜ್ಯೋತ್ಸವ ಪಟ್ಟಿ ನೀಡಲಾಗುತ್ತಿತ್ತು. ಇನ್ನೇನು ಪ್ರಶಸ್ತಿ ವಿತರಣ ಸಮಾರಂಭ ಶುರುವಾಗಬೇಕು ಎಂಬುವಷ್ಟರಲ್ಲಿಯೂ ಹೆಸರುಗಳು ಸೇರ್ಪಡೆಯಾಗಿದ್ದ ಉದಾಹರಣೆಗಳಿದ್ದವು. ಆದರೆ ಇದಕ್ಕೊಂದು ಅಂತ್ಯ ಹಾಡಿ, ಕರ್ನಾಟಕ ರಾಜ್ಯೋತ್ಸವದ ವಾರ್ಷಿಕೋತ್ಸವದ ಲೆಕ್ಕಾಚಾರದಲ್ಲಿ ಈಗ ಪ್ರಶಸ್ತಿ ನೀಡಲಾಗುತ್ತಿದೆ. ಇದು ಉತ್ತಮ ನಿರ್ಧಾರವೇ ಆಗಿದೆ.

ಈಗ ಕೇಂದ್ರ ಸರಕಾರದ ಮಟ್ಟದಲ್ಲಿಯೂ ಅಕಾಡೆಮಿಗಳಲ್ಲಿ ನೀಡಲಾಗುವ ಪ್ರಶಸ್ತಿಗಳನ್ನು ಇಳಿಕೆ ಮಾಡುವ ಚಿಂತನೆ ಶುರುವಾಗಿದೆ. ಇದು ಶಿಕ್ಷಣ ಇಲಾಖೆಯಿಂದ ಆರಂಭಿಸುವ ಇರಾದೆಯೂ ಇದೆ. ಸದ್ಯ ಶಿಕ್ಷಣ ಇಲಾಖೆಯಲ್ಲಿ 45-47 ಮಂದಿಗೆ ಶ್ರೇಷ್ಠ ಶಿಕ್ಷಕ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. ಇದನ್ನು ಕೆಟಗೆರಿ ವಿಭಾಗದಲ್ಲಿ 2ರಿಂದ 3 ಪ್ರಶಸ್ತಿ ನೀಡುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಈ ನಿರ್ಧಾರ ಕೇವಲ ಕೇಂದ್ರದ ಮಟ್ಟದಲ್ಲಿ ಅಲ್ಲ, ರಾಜ್ಯದ ಮಟ್ಟದಲ್ಲಿಯೂ ಆಗಬೇಕಾಗಿದೆ.

ರಾಜ್ಯದಲ್ಲಿಯೂ ಇದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಜಾನಪದ, ಸಿನೆಮಾ, ಮಾಧ್ಯಮ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಸೇರಿದಂತೆ ಹಲವಾರು ಅಕಾಡೆಮಿಗಳಿವೆ. ಈ ಎಲ್ಲ ಅಕಾಡೆಮಿಗಳಲ್ಲಿಯೂ ಪ್ರತೀ ವರ್ಷವೂ ಸಾಕಷ್ಟು ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಆದರೆ ಈ ಪ್ರಮಾಣದ ಪ್ರಶಸ್ತಿಗಳು ಬೇಕೇ ಎಂಬ ಪ್ರಶ್ನೆಗಳೂ ಮೂಡಿವೆ. ಕೇಂದ್ರದಂತೆಯೇ ಏಕ ಪ್ರಶಸ್ತಿ ಮಾಡಿದರೆ ಅರ್ಹರಿಗೆ ಸಮ್ಮಾನ ಮಾಡಿದಂತಾಗುತ್ತದೆ. ಈ ಬಗ್ಗೆ ರಾಜ್ಯ ಸರಕಾರ ಚಿಂತನೆ ನಡೆಸಬಹುದು.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next