Advertisement

ಅಲೆಮಾರಿಗಳು ಸಾಭಿಮಾನದಿಂದ ಬದುಕಲಿ

02:05 PM Jun 10, 2022 | Team Udayavani |

ಕಲಬುರಗಿ: ಮುಂಬರುವ ದಿನಗಳಲ್ಲಿ ಅಲೆಮಾರಿ ಮತ್ತು ಅರೆ-ಅಲೆಮಾರಿ ಜನರು ಬೇರೆ ಸಮಾಜಕ್ಕಿಂತ ನಾವು ಯಾವುದರಲ್ಲಿಯೂ ಕಡಿಮೆ ಇಲ್ಲ ಎಂಬಂತೆಅಲೆಮಾರಿಗಳು ಸಾಭಿಮಾನದಿಂದ ಬದುಕಲಿ ಎಂದು ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಕರೆ ನೀಡಿದರು.

Advertisement

ಗುರುವಾರ ಕಲಬುರಗಿ ಐವಾನ್‌-ಇ- ಶಾಹಿ ಹೊಸ ಅತಿಥಿಗೃಹದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಧ್ವನಿ ಇಲ್ಲದ ಅಲೆಮಾರಿ ಜನರ ಸೇವೆಯನ್ನು ಸಲ್ಲಿಸಲು ಆಗಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಮತ್ತು ನನ್ನ ಪಕ್ಷ ನನಗೆ ಅವಕಾಶ ಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ. ಅಲೆಮಾರಿ ಮತ್ತು ಅರೆ-ಅಲೆಮಾರಿ ಜನರಿಗೆ ಆಸರೆಯಾಗಿ ನಿಲ್ಲುತ್ತೇನೆ ಎಂದು ನುಡಿದರು.

ಅಲೆಮಾರಿ ಹಿಂದುಳಿದ ಪ್ರವರ್ಗ ಒಂದರ ಅಡಿಯಲ್ಲಿ ಬರುವ ಗೊಲ್ಲ, ಜೋಗಿ, ದೊಂಬಿದಾಸ, ಘಿಸಾಡಿ, ಹಾವಾಡಿಗ, ಗೊಂದಲಿ, ಕಟುಬು, ಬೆಸ್ತರ್‌ ಸಮಾಜ ಮುಂತಾದ 46 ಜಾತಿಗಳನ್ನು ಒಳಗೊಂಡಿದೆ. ಸಾಮಾಜಿಕ ನ್ಯಾಯ ವ್ಯವಸ್ಥೆಯಲ್ಲಿ ಅತ್ಯಂತ ಶೋಚನೀಯ ರೀತಿಯಲ್ಲಿ ಜೀವನ ಸಾಗಿಸುತ್ತಿರುವ ಇವರು, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಲ್ಲದೇ ಎಲ್ಲ ಕ್ಷೇತ್ರದಲ್ಲಿ ಹಿಂದುಳಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಲ್ಲಿ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಘಟಕ ವೆಚ್ಚ 2ಲಕ್ಷ ರೂ.ಗಳಲ್ಲಿ ಒಂದು ಕೊಳವೆ ಬಾವಿ ಕೊರೆಯಿಸಿ, ಪಂಪ್‌ಸೆಟ್‌ ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ಅಲೆಮಾರಿ ಮತ್ತು ಅರೆ-ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 2022-23ನೇ ಸಾಲಿಗೆ ರಾಜ್ಯ ಸರ್ಕಾರದಿಂದ 6 ಕೋಟಿ ರೂ. ಅನುದಾನ ಬಂದಿದೆ. ಅದರಲ್ಲಿ 2020-21 ನೇ ಸಾಲಿನ 2ಕೋಟಿ ರೂ. ಉಳಿಕೆ ಸೇರಿಸಿ ಒಟ್ಟು 8,020,8000ರೂ. ಕ್ರಿಯಾ ಯೋಜನೆ ಸಿದ್ಧಪಡಿಸಿದ್ದೇವೆ ಎಂದರು.

Advertisement

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ವ್ಯಾಪ್ತಿಗೆ ಬರುವ ನಿಗಮಗಳಿಗೆ ಕೊಡುವ ರೀತಿಯಲ್ಲಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಸಹಾಯಕ ಪ್ರಬಂಧಕರಾದ ನಾರಾಯಣ ಮೆರಲಿ, ಡಿ. ದೇವರಾಜ್‌ ಅರಸ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಪ್ರಿಯದರ್ಶಿನಿ, ಅಲೆಮಾರಿ ಸಮಾಜದ ಮುಖಂಡ ಸಂತೋಷ ಶಿಂಧೆ, ಸಮಾಜದ ಮುಖಂಡರಾದ ಅಂಕಿತ ಹೆಳವರ, ಸಾಯಬಣ್ಣ ಹೆಳವರ ಮತ್ತಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next