Advertisement

ನವಮಾಧ್ಯಮ ವಿಶ್ವಾಸಾರ್ಹತೆ ಉಳಿಸಿಕೊಳ್ಳಲಿ; ಓಂಕಾರ್‌ ಕಾಕಡೆ

06:27 PM Jul 02, 2022 | Team Udayavani |

ಕೊಪ್ಪಳ: ನವಮಾಧ್ಯಮದಿಂದ ಮಾಧ್ಯಮ ಕ್ಷೇತ್ರ ಇಂದು ವಿಸ್ತಾರಗೊಂಡಿದೆ. ಡಿಜಿಟಲ್‌ ಯುಗದಲ್ಲಿ ಮಾಧ್ಯಮಗಳು ವಿಶ್ವಾಸರ್ಹತೆ ಉಳಿಸಿಕೊಂಡು ಸಾಮಾಜಿಕ ಕಳಕಳಿಯ ವರದಿಗಳನ್ನು ಹೆಚ್ಚೆಚ್ಚು ಪ್ರಸಾರ ಮಾಡಲಿ ಎಂದು ವಿಜಯಪುರ ಅಕ್ಕಮಹಾದೇವಿ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಓಂಕಾರ್‌ ಕಾಕಡೆ ಹೇಳಿದರು.

Advertisement

ನಗರದ ತೋಟಗಾರಿಕೆ ಇಲಾಖೆಯ ಸಭಾಂಗಣ ದಲ್ಲಿ ಶುಕ್ರವಾರ ಕೊಪ್ಪಳ ಮೀಡಿಯಾ ಕ್ಲಬ್‌ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಧ್ಯಮಗಳು ಸರ್ಕಾ ರದ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿವೆ. ಜನರ ಧ್ವನಿಯಾಗಿರಲಿ, ಆದರೆ ಕೆಲ ಮಾಧ್ಯಮಗಳು ಸರ್ಕಾರದ ತುತ್ತೂರಿಯಾಗಿಯೂ ಕೆಲಸ ಮಾಡುತ್ತಿವೆ.

ಇದರಿಂದಾಗಿ ಮಾಧ್ಯಮಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿವೆ. ಮಾಧ್ಯಮ ಸಂಸ್ಥೆ ನಡೆಸಬೇಕಾದರೆ ಕೋಟ್ಯಂತರ ರೂ. ಬಂಡವಾಳ ಬೇಕಾಗಿದೆ. ಬಂಡವಾಳ ಹಾಕಿದವರು ವೃತ್ತಿಯನ್ನು ಉದ್ಯಮವಾಗಿ ಪರಿವರ್ತನೆ ಮಾಡಿದ್ದಾರೆ. ಇದರಿಂದ ಸಾಮಾಜಿಕ ಕಳಕಳಿ ಹಿಂದೆ ಸರಿಯುತ್ತಿದೆ ಎಂಬ ಟೀಕೆ ಬರುತ್ತಿವೆ. ಪ್ರಸ್ತುತ ಸುದ್ದಿ ರೂಪದಲ್ಲಿ ಜಾಹೀರಾತು ನೀಡುವ ಪರಿಸ್ಥಿತಿ ಎದುರಾಗಿದೆ. ಸುದ್ದಿ ಹಾಗೂ ಜಾಹೀರಾತುಗಳನ್ನು ಕಲಬೆರಕೆ ಮಾಡಲಾಗುತ್ತಿದೆ ಎಂದರು.

ನವ ಮಾಧ್ಯಮಗಳಿಂದ ಮಾಧ್ಯಮ ಕ್ಷೇತ್ರ ವಿಸ್ತಾರಗೊಂಡಿದೆ. ಈ ಹಿಂದೆ ರೇಡಿಯೋ ಹಾಗೂ ಪತ್ರಿಕೆಗಳಿಂದ ಸುದ್ದಿಗಳು ಬರುತ್ತಿದ್ದವು. ನಂತರ ಎಲೆಕ್ಟ್ರಾನಿಕ್‌ ಮಾಧ್ಯಮ, ಡಿಜಿಟಲ್‌ ಮಾಧ್ಯಮ ವಿಸ್ತರವಾಗಿದೆ. ಇತ್ತೀಚಿಗೆ ಭಾರತದಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ಸಾಮಾನ್ಯವಾಗಿದೆ. ಇದರಿಂದ ಕೋಮ ಸಂಘರ್ಷ ನಡೆಯುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಸುಳ್ಳು ಸುದ್ದಿಗಳು ಬರುತ್ತಿವೆ. ಇದು ಪಿಡುಗಾಗಿ ಪರಿವರ್ತನೆಯಾಗಿದೆ. ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಬಂದ ಸುದ್ದಿ ಗಳಿಗೆ ಮಾಧ್ಯಮಗಳು ಅವಲಂಬಿತವಾಗಿದೆ ಎಂದರು.

ಒತ್ತಡ, ಕೋವಿಡ್‌ನಿಂದ ಜೀವಹಾನಿ: ಕೋವಿಡ್‌ ವೇಳೆ ಮಾಧ್ಯಮ ಕ್ಷೇತ್ರದಲ್ಲಿ ಶೇ. 42ರಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇವರ ಕೆಲಸ ಉಳಿದ ಶೇ. 58ರಷ್ಟು ಜನರು ನಿರ್ವಹಿಸುತ್ತಿದ್ದಾರೆ. ಜಿಲ್ಲಾ ವರದಿಗಾರರು ಸಾಮಾಜಿಕ ಜಾಲತಾಣ, ಡಿಜಿಟಲ್‌ಗ‌ೂ ಸುದ್ದಿ ಅಪ್ಲೋಡ್‌ ಮಾಡಬೇಕು.

Advertisement

ಪತ್ರಕರ್ತರಿಗೆ ಒಂದೇ ಕೆಲಸವಲ್ಲ. ಕೆಲಸದ ಒತ್ತಡ ಹಾಗೂ ಕೋವಿಡ್‌ನಿಂದ ನೂರಾರು ಪತ್ರಕರ್ತರು ಜೀವ ಕಳೆದುಕೊಂಡಿದ್ದಾರೆ. ಒತ್ತಡಗಳ ನಡುವೆ ಸಮಾಜಮುಖೀ ಸುದ್ದಿಗಳು ಪ್ರಸಾರ ವಾಗುತ್ತಿವೆ. ಎಷ್ಟೋ ಪತ್ರಕರ್ತರು ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.

ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಮಾತನಾಡಿ, ಅಹಂಕಾರ ಅಳಕಿಸಿ ಜ್ಞಾನ ನೀಡುವುದು, ಸಮಾಜದಲ್ಲಿ ಪ್ರತಿಯೊಬ್ಬರಿಗೆ ಪ್ರಜ್ಞೆ ಮೂಡಿಸುತ್ತಿರುವುದು ಪತ್ರಿಕಾ ಮಾಧ್ಯಮವಾಗಿದೆ. ಇದ್ದಿದ್ದನ್ನು ಇದ್ದ ಹಾಗೆ ಬರೆಯಬೇಕು. ಸಮಾಜವನ್ನು ಎಚ್ಚರಿಸುವುದು ಮಾಧ್ಯಮ. ಪತ್ರಕರ್ತರಿಗೆ ಎಲ್ಲಿಯ ವರೆಗೆ ಆತ್ಮವಿಶ್ವಾಸ ಇರುತ್ತದೆಯೋ ಅಲ್ಲಿಯವರೆಗೆ ಧೈರ್ಯ ಕುಂದುವುದಿಲ್ಲ. ತಪ್ಪು ಮಾಡಿದವರ ಬಗ್ಗೆ ವರದಿ ಮಾಡಿದರೂ, ಶಿಕ್ಷೆ ಆಗುತ್ತಿರುವ ಪ್ರಮಾಣ ಕಡಿಮೆಯಾಗಿದೆ ಎಂದರು.

ಹಿರಿಯ ವರದಿಗಾರ ಸೋಮರಡ್ಡಿ ಅಳವಂಡಿ ಮಾತನಾಡಿ, ಪ್ರತಿದಿನ ಎಲ್ಲರ ಕಾರ್ಯಕ್ರಮಕ್ಕೆ ಹೋಗಿ ವೇದಿಕೆ ಮುಂಭಾಗ ಕುಳಿತುಕೊಂಡು ವರದಿ ಮಾಡುತ್ತೇವೆ. ಈ ದಿನ ಪತ್ರಕರ್ತರು ವೇದಿಕೆ ಹಂಚಿಕೊಳ್ಳುತ್ತಾರೆ. ಈ ಹಿಂದೆ ಪತ್ರಿಕಾ ಧರ್ಮ ಆಗಿತ್ತು, ಈಗ ಉದ್ಯಮವಾಗಿದೆ. ಪ್ರಸ್ತುತ ಪತ್ರಕರ್ತರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.

ಪಬ್ಲಿಕ್‌ ಟಿವಿ ಕ್ಯಾಮೆರಾಮ್ಯಾನ್‌ ವಿನಾಯಕ ಶ್ರೀವಾಸ್ತವ್‌ ಸೇರಿ ಜನಪ್ರತಿನಿಧಿಗಳು, ಗಣ್ಯರು, ನ್ಯಾಯವಾದಿಗಳು ಸೇರಿ ಹಲವರು ಪಾಲ್ಗೊಂಡಿದ್ದರು. ಪತ್ರಕರ್ತ ಶ್ರೀಕಾಂತ್‌ ಅಕ್ಕಿ ಸ್ವಾಗತಿಸಿದರು. ಪ್ರಮೋದ್‌ ಜಿ.ಕೆ. ಮತ್ತು ಜಗದೀಶ ಚಟ್ಟಿ ಅತಿಥಿಗಳ ಪರಿಚಯ ಮಾಡಿದರು. ವಿ.ಕೆ. ರವೀಂದ್ರ ನಿರೂಪಿಸಿದರು. ಖಾಸಿಂ ನದಾಫ್‌ ಅವರು ವಂದಿಸಿದರು. ಶಕುಂತಲಾ ಬೆನ್ನಾಳ ತಂಡದವರು ಪ್ರಾರ್ಥಿಸಿದರು. ಸಾಧಕ ಪತ್ರಕರ್ತರು ಹಾಗೂ ಹಿರಿಯ ಪತ್ರಕರ್ತರನ್ನು
ಸನ್ಮಾನಿಸಲಾಯಿತು.

ಮಾಧ್ಯಮ ಕ್ಷೇತ್ರ ಗೊಂದಲದಲ್ಲಿದೆ. ಕಟು ಟೀಕೆಯನ್ನು ಪತ್ರಕರ್ತರು ಎದುರಿಸುತ್ತಿದ್ದಾರೆ. ಟೀಕೆ ನಡುವೆ ಸಾಮಾಜಿಕ ಬದ್ಧತೆಯಿಂದ ಕೆಲಸ ನಿರ್ವಹಿಸಬೇಕಿದೆ. ಪತ್ರಕರ್ತರ ಹಾಗೂ ಮಾಧ್ಯಮ ಕ್ಷೇತ್ರದ ಮನೋಧರ್ಮ ಬದಲಾಗುತ್ತಿದೆ. ಸಾಮಾಜಿಕ ಜಾಲತಾಣ ಆಧಾರವಾಗಿಟ್ಟುಕೊಂಡು ಸುದ್ದಿ ಮಾಡುವ ಸ್ಥಿತಿಯಲ್ಲಿ ನಾವಿದ್ದೇವೆ. ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್‌ ಮಾಧ್ಯಮ ವಿಸ್ತಾರವಾಗಿದ್ದು, ಈ ವೇಳೆ ಪತ್ರಿಕೆ ಓದುವವರು, ಟಿವಿ ನೋಡುವವರಿದ್ದಾರೆ. ಪತ್ರಕರ್ತರು
ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.
ಶರಣಪ್ಪ ಬಾಚಲಾಪುರ
ಮೀಡಿಯಾ ಕ್ಲಬ್‌ ಅಧ್ಯಕ್ಷ

ಮಾಧ್ಯಮ ಕ್ಷೇತ್ರ ಉದ್ಯಮವಾಗಿ ಬದಲಾಗಿದೆ. ಪತ್ರಿಕಾ ಧರ್ಮ ಹಾಗೂ ಲಾಭದ ಗಳಿಕೆ ನಡುವೆ ಸಾಮಾಜಿಕ ಹೊಣೆಯನ್ನು ಪತ್ರಕರ್ತರು ನಿಭಾಯಿಸಬೇಕಿದೆ. ಮಾಧ್ಯಮ ವಿಮರ್ಶೆ, ಟೀಕೆ ಒಳಗಾಗುತ್ತಿದೆ. ಡಿಜಿಟಲ್‌ ಮಾಧ್ಯಮ ಶಕ್ತಿಯುತವಾಗಿ ಬೆಳೆಯುತ್ತಿದೆ. ಸಾಮಾಜಿಕ ಮಾಧ್ಯಮಗಳು ಪತ್ರಕರ್ತರಿಗೆ ಸವಾಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಅಭದ್ರತೆ ಕಾಡುತ್ತಿದೆ
ಬಿ.ವಿ. ತುಕಾರಾಮ್‌, ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next