Advertisement

ಪ್ರಧಾನಿ ಮೋದಿಯವರ ವಿಶ್ವಗುರು ಕಲ್ಪನೆಯ ಸಾಕಾರಕ್ಕೆ ಕಾಪು ಜನತೆಯ ಬೆಂಬಲವೂ ದೊರಕಲಿ:ಗುರ್ಮೆ

05:57 PM May 05, 2023 | Team Udayavani |

ಕಟಪಾಡಿ: ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಅವರು ಕಟಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೂಡುಬೆಟ್ಟು ಗ್ರಾಮದ ಸರ್ಕಾರಿ ಗುಡ್ಡೆ ಮತ್ತು ಅಲೆವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿ ಪ್ರದೇಶದಲ್ಲಿ ಮಾತಯಾಚನೆ ಮಾಡಿದರು.

Advertisement

ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಈ ಬಾರಿಯ ಚುನಾವಣೆಯು ರಾಷ್ಟ್ರಧರ್ಮದ ಉಳಿವಿನ ಚುನಾವಣೆಯಾಗಿದೆ. ನರೇಂದ್ರ ಮೋದಿಯವರ ಸಾರಥ್ಯದಲ್ಲಿ ಭಾರತ ವಿಶ್ವಗುರುವನ್ನಾಗಿ ರೂಪಿಸಬೇಕೆಂಬ ಸಂಕಲ್ಪದ ಜತೆಗೆ ಭ್ರಷ್ಟಾಚಾರ, ಸ್ವಹಿತಾಸಕ್ತಿ ರಹಿತವಾಗಿ ದೇಶದ ಅಭಿವೃದ್ಧಿಗಾಗಿ ಅವರು ನೀಡಿರುವ ಕೊಡುಗೆಗಳು ಅಪಾರವಾಗಿವೆ. ಕಾಪು ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದ್ದು ಅದಕ್ಕಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಕಾಪು ವಿಧಾನಸಭಾ ಕ್ಷೇತ್ರದ ಎಲ್ಲ ಹಳ್ಳಿಗಳ ಅಭಿವೃದ್ಧಿಗೂ ಕಳೆದ ಐದು ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ಅನುದಾನ ಒದಗಿಸಲಾಗಿದೆ. ನಮ್ಮ ಯೋಚನೆ-ಯೋಜನೆಯ ಮತ್ತಷ್ಟು ಕಾಮಗಾರಿಗಳು ಅನುಷ್ಟಾನಗೊಳ್ಳಲು ಬಾಕಿಯುಳಿದಿದ್ದು ಅದನ್ನು ಗುರ್ಮೆ ಅವರ ಮೂಲಕವಾಗಿ ನಡೆಸಿಕೊಡುತ್ತೇವೆ. ಗುರ್ಮೆ ಸುರೇಶ್‌ ಶೆಟ್ಟಿಯವರಿಗೆ ಹೆಚ್ಚಿನ ಬೆಂಬಲ ನೀಡಿ ಅವರ ಮೂಲಕವಾಗಿ ಕ್ಷೇತ್ರದ ಅಭಿವೃದ್ಧಿಗೆ ನೀವೂ ಪಾಲುದಾರರಾಗುವಂತೆ ಮತದಾರರಲ್ಲಿ ವಿನಂತಿಸಿದರು.

ಚುನಾವಣಾ ಉಸ್ತುವಾರಿ ಸುಲೋಚನಾ ಭಟ್‌, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್‌ ನಾಯಕ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಎಂ. ಸುವರ್ಣ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಅಭ್ಯರ್ಥಿ ಪ್ರಮುಖ್‌ ಅನಿಲ್‌ ಕುಮಾರ್‌, ಶಕ್ತಿ ಕೇಂದ್ರ ಪ್ರಮುಖ್‌ ಸಂತೋಷ್‌ ಮೂಡುಬೆಳ್ಳೆ, ಶಕ್ತಿ ಕೇಂದ್ರ ಅಧ್ಯಕ್ಷ ನಿತೇಶ್‌ ಶೇರಿಗಾರ್‌, ಮಾರ್ಪಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹೇಮಂತ್‌ ಶೆಟ್ಟಿ, ಉದ್ಯಾವರ ಗ್ರಾ.ಪಂ. ಉಪಾಧ್ಯಕ್ಷೆ ಬೇಬಿ ನಾಯಕ್‌, ಕಟಪಾಡಿ ಗ್ರಾ.ಪಂ. ಸದಸ್ಯರಾದ ದೀಕ್ಷಿತಾ, ಶಾಲಿನಿ ಚಂದ್ರ ಪೂಜಾರಿ, ಅಲೆವೂರು ಗ್ರಾ.ಪಂ. ಸದಸ್ಯರಾದ ಪುಷ್ಪಲತಾ, ಶಾಂತ ನಾಯಕ್‌, ಪ್ರಮುಖರಾದ ಅವಿನಾಶ್‌ ಶೆಟ್ಟಿಗಾರ್‌, ಆಶಿಕ್‌, ಅಕ್ಷಯ್‌, ನಿತಿನ್‌ ಶೇರಿಗಾರ್‌, ರಘುಪತಿ ಆಚಾರ್ಯ ಹಾಗೂ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದಿಂದ ಸ್ಪಷ್ಟನೆ

Advertisement

ಪಡುಕುತ್ಯಾರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನಕ್ಕೆ ಅನೇಕ ಮಂದಿ ಅಭ್ಯರ್ಥಿಗಳು ಆಗಮಿಸಿ, ಜಗದ್ಗುರುಗಳವರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದ್ದಾರೆ. ಹೆಚ್ಚಿನ ಉಮೇದ್ವಾರರ ಪರಿಚಯ ಇರುವುದರಿಂದ ಎಲ್ಲರೊಡನೆ ಕುಶಲೋಪರಿ, ವಿಚಾರ ವಿನಿಮಯ ನಡೆಸಿ ಶುಭವಾಗಲಿ ಎಂದು ಆಶೀರ್ವದಿಸಿ ಅನುಗ್ರಹ ಮಂತ್ರಾಕ್ಷತೆಯನ್ನು ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ನೀಡಿರುತ್ತಾರೆ.

ರಾಜಕೀಯ ಪಕ್ಷಗಳು ಇದನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿ ತಮಗೇ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಪತ್ರಿಕಾ ವರದಿ, ಸಮೂಹ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದಲ್ಲಿ ಆನೆಗುಂದಿ ಮಹಾಸಂಸ್ಥಾನವು ಅದಕ್ಕೆ ಜವಾಬ್ದಾರರಾಗುವುದಿಲ್ಲ ಎಂದು ಪಡುಕುತ್ಯಾರು ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಮಹಾಸಂಸ್ಥಾನ ಕಟಪಾಡಿ ಇದರ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ. ಬಿ. ಆಚಾರ್‌ ಕಂಬಾರು ತಿಳಿಸಿದ್ದಾರೆ.

ಜಗದ್ಗುರುಗಳು ಮಹಾ ಸಂಸ್ಥಾನದ ವತಿಯಿಂದ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾದ ಬೆಂಬಲ ನೀಡಿಲ್ಲ, ಆಶ್ವಾಸನೆಯನ್ನು ನೀಡಿಲ್ಲ ಅಲ್ಲದೆ ನಿರ್ದಿಷ್ಟ ಪಕ್ಷವನ್ನು ಬೆಂಬಲಿಸಬೇಕು ಎನ್ನುವ ಕರೆಯನ್ನೂ ಸಮಾಜಕ್ಕೆ ನೀಡಿಲ್ಲ. ಹಾಗೆ ಏನಾದರೂ ಪತ್ರಿಕೆಗಳಲ್ಲಿ, ಸಮೂಹ ಮಾದ್ಯಮಗಳಲ್ಲಿ ಪ್ರಕಟವಾಗಿದ್ದಲ್ಲಿ ಅದು ಅವರ ವೈಯುಕ್ತಿಕ ಅಭಿಪ್ರಾಯವಾಗಿರುತ್ತದೆ. ಅಲ್ಲದೆ ಇದಕ್ಕೆ ಆನೆಗುಂದಿ ಮಹಾ ಸಂಸ್ಥಾನವು ಜವಾಬ್ದಾರಿಯಾಗುವುದಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ. ಬಿ. ಆಚಾರ್‌ ಕಂಬಾರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next