Advertisement

ಪತ್ರಕರ್ತರು ಸಮಾಜವನ್ನು ಜಾಗೃತಗೊಳಿಸಲಿ

01:15 PM Sep 16, 2017 | Team Udayavani |

ಮೈಸೂರು: ಪತ್ರಕರ್ತರು ಸದಾ ಕಾಲ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕಿದೆ ಎಂದು ಕಥೆಗಾರ ಅದೀಬ್‌ ಅಖ್ತರ್‌ ಹೇಳಿದರು. ಮೈಸೂರು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮಾನಸಗಂಗೋತ್ರಿ ಸಾಮರ್ಥ್ಯವರ್ಧಿತ ಉತ್ಕೃಷ್ಟಜ್ಞಾನ ಸಂಶೋಧನಾ ಯೋಜನೆ ನಿರ್ದಿಷ್ಟ ಕ್ಷೇತ್ರ-2 ಮತ್ತು ಮೈಸೂರು ಜಿಲ್ಲಾ ಪತ್ರಕರ್ತರ ಸಂಘಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಈಶ್ವರ ದೈತೋಟ ಅವರ “ಅಂತರದೃಷ್ಟಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

Advertisement

ಸೈನಿಕರು ದೇಶವನ್ನು ಕಾಪಾಡುತ್ತಿದ್ದಾರೆ. ಅದೇ ರೀತಿ ಪತ್ರಕರ್ತರು ಸಮಾಜವನ್ನು ಕಾಪಾಡುತ್ತಿದ್ದಾರೆ ಎಂದ ಅವರು, ಹಿಂದಿ ಪತ್ರಿಕೆಯೊಂದರಲ್ಲಿ ಬಂದ ಸಣ್ಣ ಸುದ್ದಿಯೊಂದು ಇಂದು ರಾಮ್‌ ರಹೀಮ್‌ ಜೈಲು ಸೇರುವಂತೆ ಮಾಡಿತು ಎಂದು ಮಹಾ ಭಾರತದಲ್ಲಿ ಭೀಷ್ಮ ಶರಶಯೆಯಲ್ಲಿ ಮಲಗಿದ್ದಾಗ ನಡೆದ ದೃಷ್ಟಾಂತವನ್ನು ಉದಾಹರಿಸಿ ಹೇಳಿದರು. ತಾನು ನಿಮ್ಮಷ್ಟು ಓದಿದವನಲ್ಲ. ಚಪ್ಪಲಿ ಅಂಗಡಿಯಲ್ಲಿ ಕುಳಿತಾಗ ಕನ್ನಡ ಕಲಿತವನು ತಾನು ಎಂದು ಹೇಳಿದರು.

ಕೃತಿ ಲೇಖಕರಾದ ಈಶ್ವರ ದೈತೋಟ ಮಾತನಾಡಿ, ಅಧ್ಯಾಪಕರು, ಪಠ್ಯಪುಸ್ತಕ ಮಾತ್ರವಲ್ಲ, ಜನಸಾಮಾನ್ಯರೂ ತನಗೆ ಪತ್ರಿಕೋದ್ಯಮದ ಪಾಠ ಕಲಿಸಿದ್ದಾರೆಂದರು. ಪತ್ರಕರ್ತರು ಯಾವತ್ತೂ ತಲೆ ಮೇಲೆ ಕೋಡು ಇಟ್ಟುಕೊಳ್ಳಬಾರದು. ವಿಸಿಟಿಂಗ್‌ ಕಾರ್ಡ್‌ ಇಲ್ಲದೆ ಹಳ್ಳಿಗೆ ಹೋಗಿ ಕೇಳಿದರೆ ಪತ್ರಿಕೆ, ಪತ್ರಕರ್ತರ ಬಗ್ಗೆ ಜನ ಏನು ಹೇಳುತ್ತಾರೆ ಎಂಬುದು ಗೊತ್ತಾಗುತ್ತದೆ. ಚುನಾವಣಾ ಸಮೀಕ್ಷೆಯನ್ನು ನಮಗಿಂತ ಚೆನ್ನಾಗಿ ಹಳ್ಳಿಗರು ಮಾಡುತ್ತಾರೆಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಸಮಾಜ ಕೆಟ್ಟುಹೋಗಿದೆ ಎಂಬ ಆತಂಕದಲ್ಲಿದ್ದೇವೆ ಎನ್ನುವ ಸಂದರ್ಭದಲ್ಲಿ ಈಶ್ವರ ದೈತೋಟ ಅವರು ಜೀವನೋತ್ಸಾಹದ ಜತೆಗೆ ಪತ್ರಿಕೋದ್ಯಮವನ್ನು ಹೇಗೆ ನೋಡಬೇಕು ಎಂಬುದನ್ನು ಕಲಿಸಿದರು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನಸಗಂಗೋತ್ರಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷೆ ಡಾ.ಎನ್‌.ಉಷಾರಾಣಿ,

ಬೋಧನೆ-ಸಂಶೋಧನೆ- ಪ್ರಕಟಣೆಗಳು ವಿಶ್ವವಿದ್ಯಾಲಯಗಳ ಬೆಳವಣಿಗೆಗೆ ಕಾರಣ ಎಂದಿದ್ದರು ಕುವೆಂಪು ಅವರು. ಅದೇ ದಾರಿಯಲ್ಲಿ ಮೈಸೂರು ವಿವಿ ಸಾಗುತ್ತಿದೆ ಎಂದರು. ಪತ್ರಿಕೆಗಳು ಮಡಿವಂತಿಕೆ ಬಿಟ್ಟಿದ್ದು, ಮುಖ್ಯವಾಹಿನಿ ಪತ್ರಿಕೆಗಳು ಮಡಿವಂತಿಕೆಯಿಂದ ಮುಕ್ತವಾಗಿವೆ. ಮಾಧ್ಯಮ ವಾಣಿಜ್ಯೀಕರಣಗೊಂಡಿದ್ದರೂ ಅಭ್ಯುದಯದ ಕೆಲಸ ಮರೆತಿಲ್ಲ ಎಂದು ಹೇಳಿದರು.

Advertisement

“ಉದಯವಾಣಿ’ ಪ್ರತಿನಿಧಿಯಾಗಿದ್ದ ವೇಳೆ ಪ್ರವಾಸ ಸ್ಮರಿಸಿದ ದೈತೋಟ
ಮೈಸೂರು: ಪ್ರಧಾನಿ ಜತೆ ಪರ್ತಕರ್ತರ ವಿದೇಶ ಪ್ರವಾಸ ಎಂದರೆ ಎಲ್ಲರೂ ಪುಕ್ಸಟ್ಟೆ ಪ್ರವಾಸ ಎಂದು ತಿಳಿದುಕೊಂಡು ಬಿಡುತ್ತಾರೆ. ಆದರೆ, ಪ್ರಧಾನಿ ಪಯಣಿಸುವ ವಿಮಾನದಲ್ಲಿ 10 ಆಸನಗಳನ್ನು ಪತ್ರಕರ್ತರಿಗೆ ಮೀಸಲಿಡುವುದು ಬಿಟ್ಟರೆ ಉಳಿದೆಲ್ಲಾ ಖರ್ಚು ನಮ್ಮದೇ ಎಂದು 1988ರಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರ ಜತೆ “ಉದಯವಾಣಿ’ ಪ್ರತಿನಿಧಿಯಾಗಿ ರಷ್ಯಾ ಪ್ರವಾಸ ಕೈಗೊಂಡಿದ್ದನ್ನು ಪತ್ರಕರ್ತ ಈಶ್ವರ ದೈತೋಟ ಸ್ಮರಿಸಿದರು. ದೆಹಲಿಯ ಇಂಗ್ಲಿಷ್‌ ಪತ್ರಕರ್ತರು ತಮ್ಮನ್ನು ಕಡೆಗಣಿಸಿದರೂ ವಿಮಾನದ ಗಗನಸಖೀಯರು ತನ್ನ ಮುಖ ಚಹರೆಯಿಂದ ಮಂಗಳೂರಿನವರೆಂದು ಗುರುತು ಹಿಡಿದು ತನಗೆ ಸಹಾಯ ಮಾಡಿದ್ದನ್ನು ಮೆಲುಕು ಹಾಕಿದರು. 

Advertisement

Udayavani is now on Telegram. Click here to join our channel and stay updated with the latest news.

Next