Advertisement

ಕನ್ನಡ ಅನುಷ್ಠಾನ ಸಮರ್ಪಕವಾಗಿ ಜಾರಿಯಾಗಲಿ

11:50 PM Sep 23, 2022 | Team Udayavani |

ರಾಜ್ಯದಲ್ಲಿ ಕನ್ನಡ ಸರಿಯಾಗಿ ಬಳಕೆಯಾಗುತ್ತಿಲ್ಲ, ಸರಕಾರಿ ಕಾರ್ಯಕ್ರಮಗಳಲ್ಲೂ ಕನ್ನಡವನ್ನು ಮರೆತು, ಆಂಗ್ಲ ಭಾಷೆ ಮತ್ತು ಹಿಂದಿಯನ್ನು ಎಗ್ಗಿಲ್ಲದೇ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಲೇ ಇದೆ. ಈ ರೀತಿಯಾದಾಗ ಕನ್ನಡ ಸಂಘಟನೆಗಳು ಈ ಬಗ್ಗೆ ಧ್ವನಿ ಎತ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದು ದೂರು ಕೊಟ್ಟು, ಅದು ಕೂಡ ಕನ್ನಡ ನಿರ್ಲಕ್ಷ್ಯ ಮಾಡಿದವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳುತ್ತದೆ. ಆದರೆ ಇಲ್ಲಿವರೆಗೂ ಕಠಿನ ಕ್ರಮ ಕೈಗೊಳ್ಳುವ ಯಾವ ಅಧಿಕಾರವೂ ಇರಲಿಲ್ಲ. ಈಗ ಕನ್ನಡ ಭಾಷಾ ರಕ್ಷಣೆಗೆ ಮಸೂದೆಯನ್ನು ಮಂಡಿಸುವ ಮೂಲಕ ರಾಜ್ಯ ಸರಕಾರ ಅತ್ಯಂತ ಮಹತ್ವವಾದ ಹಾಗೂ ದಿಟ್ಟ ಹೆಜ್ಜೆಯನ್ನು ಇಟ್ಟಿದೆ.

Advertisement

ಈ ಮಸೂದೆಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಈ ಕಲಾಪದಲ್ಲೇ ಅನುಮೋದನೆ ನೀಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಶಾಸಕರು ಈ ಮಸೂದೆಯನ್ನು ತುರ್ತು ಎಂಬಂತೆ ಪರಿಗಣಿಸಬಹುದು ಎಂಬ ನಿರೀಕ್ಷೆಯೂ ಸಹ ಹುಸಿಯಾಗಿದೆ. ಕರ್ನಾಟಕ ಮತ್ತು ಕನ್ನಡಕ್ಕೆ ಅತ್ಯಂತ ಅಗತ್ಯ ಎನಿಸಿರುವ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಈ ಕುರಿತು ಮುಂದಿನ ಅಧಿವೇಶನದಲ್ಲಿ ದೀರ್ಘ‌ ಚರ್ಚೆ ನಡೆದು ಅನುಮೋದನೆ ಸಿಗುವುದು ಖಚಿತ.

ಕನ್ನಡದ ಸಾರ್ವಭೌಮತ್ವ ಕಾಪಾಡಲು ಈ ಮಸೂದೆಯಲ್ಲಿ ಹಲವು ಪ್ರಮುಖ ಅಂಶಗಳನ್ನು ಸೇರಿಸಿಕೊಳ್ಳಲಾಗಿದೆ. ಕನ್ನಡ ಅನುಷ್ಠಾನದಲ್ಲಿ ಯಾವುದೇ ನಿರ್ಲಕ್ಷ್ಯ ತೋರಿದರೆ ಮೊದಲ ಬಾರಿ ತಪ್ಪಿಗೆ 5 ಸಾವಿರ, ಎರಡನೇ ಬಾರಿಗೆ 10 ಸಾವಿರ ಮತ್ತು ಮೂರನೇ ಬಾರಿಗೆ 20 ಸಾವಿರ ರೂ. ದಂಡ ವಿಧಿಸುವ ಬಗ್ಗೆ ರಾಜ್ಯ ಸರಕಾರದ ಪ್ರಸ್ತಾವಿತ ಮಸೂದೆಯಲ್ಲಿ ಉಲ್ಲೇಖೀಸಲಾಗಿದೆ. ಕನ್ನಡ ಅನುಷ್ಠಾನದಲ್ಲಿ ತಪ್ಪೆಸಗುವ ಸರಕಾರಿ ಅಧಿಕಾರಿಗಳಿಗೂ ಈ ದಂಡದ ರುಚಿ ತೋರಿಸುವ ಅನಿವಾರ್ಯತೆ ಪ್ರಸ್ತುತದಲ್ಲಿ ಇದೆ.

ಇದರ ಜತೆಗೆ ಕನ್ನಡ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉನ್ನತ, ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ ನೀಡುವುದು, ನ್ಯಾಯಾಲಯದಲ್ಲಿ ಕನ್ನಡ ಬಳಕೆ, ಪ್ರಸಾರಕ್ಕೆ ಪ್ರತ್ಯೇಕ ನೀತಿ ತರುವಂಥ ಕ್ರಮಗಳನ್ನೂ ಪ್ರಸ್ತಾವಿತ ಮಸೂದೆಯಲ್ಲಿ ಸೇರಿಸಲಾಗಿದೆ. ಸದ್ಯದ ಮಟ್ಟಿಗೆ ಈ ಎಲ್ಲ ಸಂಗತಿಗಳು ಕನ್ನಡ ನಾಡು-ನುಡಿಯ ಬೆಳವಣಿಗೆಗೆ ಪೂರಕವಾಗಿರಲಿ.

ಈ ಮಸೂದೆ ಅನುಮೋದನೆಗೊಂಡು ನಾಳೆ ಕಾಯ್ದೆಯಾಗಲಿದೆ. ಆದರೆ ಅದರ ಅನುಷ್ಠಾನ ಸಮರ್ಪಕವಾದಲ್ಲಿ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ವಿಚಿತ್ರವೆಂದರೆ ರಾಜ್ಯದ ಅನ್ನ ನೀಡುವ ಭಾಷೆಯಾಗಿರುವ ಕನ್ನಡವನ್ನು ಎಲ್ಲೆಡೆ ಬಳಕೆ ಮಾಡಿ ಎಂದು ಹೇಳುವ ಸ್ಥಿತಿ ಬಂದಿರುವುದೇ ನಾಚಿಕೆಗೇಡಿನ ವಿಚಾರ.

Advertisement

ಇತ್ತೀಚೆಗೆ ಆಂಗ್ಲ ಭಾಷೆಯ ವ್ಯಾಮೋಹ ಕಡಿಮೆಯಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಮಸ್ಯೆಯಾಗುತ್ತಿರುವುದು ಹಿಂದಿ ಬಳಕೆಯಿಂದ. ಕೇಂದ್ರ ಸರಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಈಗಾಗಲೇ ಹಲವಾರು ಬಾರಿ ಕನ್ನಡವನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ. ಈ ಸಂಬಂಧ ಸಂಬಂಧಪಟ್ಟವರ ಬಳಿ ಸ್ಪಷ್ಟನೆ ಕೇಳಿದ್ದಾಗ್ಯೂ ಅವರಿಂದ ಸರಿ ಉತ್ತರ ಬಂದಿಲ್ಲ. ಆದರೆ ಈ ನೆಲದಲ್ಲಿ ಕಾರ್ಯಕ್ರಮ ಮಾಡುವುದು ಕನ್ನಡ ಮರೆಯುವುದೇ ದೊಡ್ಡ ಅಪರಾಧವೆನ್ನಲೇಬೇಕಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next