Advertisement
ಇತ್ತೀಚಿನ ದಿನಗಳಲ್ಲಿ ಮನೆಯನ್ನು ಮನೆಯಾಗಿರಲು ಬಿಡದೆ, ವಸ್ತು ಸಂಗ್ರಹಾಲಯದಂತೆ ಮಾಡಿಕೊಂಡಿರುವವರೇ ಜಾಸ್ತಿ ಇದ್ದಾರೆ. ಚೆಂದದ ಶೋಕೇಸ್ ಮಾಡಿಸಿ, ಕಪಾಟಿನ ತುಂಬಾ ದೇಶ-ವಿದೇಶಗಳಿಂದ, ಪ್ರವಾಸದಿಂದ ತಂದ ಥರಹೇವಾರಿ ವಸ್ತುಗಳನ್ನು ಅಂದವಾಗಿ ಜೋಡಿಸಿಟ್ಟು ಬಿಡುತ್ತಾರೆ. ಕೆಲವರು ಹೂದಾನಿಯಲ್ಲಿ ಕೃತಕ ಹೂಗುತ್ಛಗಳನ್ನಿಟ್ಟು, ಬಣ್ಣ ಬಳಿದು ಡಿಸೈನ್ ಮಾಡಿದ ಅಗಲದ ತಪ್ಪಲೆಗೆ ನೀರು ಹಾಕಿ, ಪ್ಲಾಸ್ಟಿಕ್ ತಾವರೆ ಹೂವುಗಳನ್ನು ತೇಲಾಡಲು ಬಿಟ್ಟರೆ; ಮತ್ತಿನ್ನಷ್ಟು ಜನ ಬೃಹತ್ ಗಾತ್ರದ ಹುಲಿ, ಸಿಂಹ, ಇನ್ನಿತರ ಪ್ರಾಣಿಗಳ ಗೊಂಬೆಗಳನ್ನು ಒಳಾಂಗಣದಲ್ಲಿ; ಕಾಡುಕೋಣ, ಸಾರಂಗ, ಚಿರತೆ, ಆನೆಯ ಮುಖವಾಡಗಳನ್ನು ಶೋಕಿಗೆಂದು ಗೋಡೆಯ ಮೇಲೆ ನೇತುಹಾಕಿ, ಮನೆಯನ್ನು ಝೂ ರೀತಿ ಕಾಣುವಂತೆ ಸಿಂಗರಿಸುತ್ತಾರೆ.
Related Articles
Advertisement
ಮನೆ ಅಂದ್ರೆ…ಚೆಲ್ಲಾಪಿಲ್ಲಿಯಾಗಿ ಹರಡಿದ ಬಟ್ಟೆಬರೆ, ಮನೆ ಮುಂದೆ ಅಸ್ತವ್ಯಸ್ತವಾಗಿ ಬಿಟ್ಟಿರೋ ಪಾದರಕ್ಷೆಗಳು, ಪಡಸಾಲೆಯಲ್ಲಿ ಬಿದ್ದಿರೋ ಮಕ್ಕಳ ಪುಸ್ತಕಗಳು, ಖಾಲಿಯಿರುವ ಕುರ್ಚಿಗಳ ಮೇಲೆ ಗಾಡಿ/ ಮನೆ ಕೀಲಿಕೈಗಳು..ರೂಮಿನಲ್ಲಿ, ಕಿಟಕಿಯಿಂದ ಎದುರು ಗೋಡೆಗೆ ಕಟ್ಟಿದ್ದ ತಂತಿ ಮೇಲೆ ಬೇತಾಳದಂತೆ ನೇತಾಡುವ ಟವೆಲ್‌ಗಳು, ಮಂಚದ ಮೇಲಷ್ಟು ಆಟಿಕೆ, ಚದುರಿದ ಚಾದರ, ಕಿಟಕಿಯ ಸರಳುಗಳಿಗೆ ಸಿಕ್ಕಿಸಿದ ಕ್ಯಾಲೆಂಡರ್, ಮೊಳೆಗಳಿಗಲ್ಲಾ ಜೋತುಬಿದ್ದ ದೇವರ ಫೋಟೋಗಳು… ನನ್ನ ಪ್ರಕಾರ, ಮನೆ ಹೀಗಿದ್ದರೆ ಮಾತ್ರ ಅಲ್ಲಿ ಜನರು ವಾಸಿಸುತ್ತಿದ್ದಾರೆ ಅನ್ನೋ ಫೀಲ್ ಕೊಡುತ್ತೆ. ಎಲ್ಲ ವಸ್ತುಗಳೂ ಅವುಗಳ ಸ್ವಸ್ಥಾನದಲ್ಲಿದ್ದರೆ, ಅದು ಮನೆಯಲ್ಲ, ಮ್ಯೂಸಿಯಮ್ ಅಂತೀನಿ ನಾನು. ಅಡುಗೆ ಮನೆಗೆ ಹೋದರೆ…
ಟೀ ಉಕ್ಕಿ ಸುರಿದು ಕರಕಲಾದ ಒಲೆ, ಕುದಿಸಿದ ಪಾತ್ರೆಗಳಲ್ಲೇ ಠಿಕಾಣಿ ಹೂಡಿದ ಸಾಂಬಾರು, ಹಾಸುಕಲ್ಲ ಮೂಲೆಯಲ್ಲಿ ಸ್ವಲ್ಪವಾದರೂ ಜಿಡ್ಡು ಗಟ್ಟಿದ ಎಣ್ಣೆತುಪ್ಪದ ಡಬ್ಬಿಗಳು, ಚಟ್ನಿಪುಟಿ, ಹುಳಿಪುಡಿ, ಮೆಣಸಿನಪುಡಿ, ಕಡಲೇಬೇಳೆ, ಉದ್ದಿನಬೇಳೆ, ರವೆ ಎಂದೆಲ್ಲಾ ನಾಮಫಲಕ ಹಾಕಿಕೊಂಡ ಸ್ಟೀಲ್ ಡಬ್ಬಿಗಳು, ಸಿಂಕ್‌ನಲ್ಲಿ ಬಿದ್ದಿರುವ ನಾಲ್ಕೈದು ಮುಸುರೆ ಪಾತ್ರೆ, ಕಪಾಟುಗಳಲ್ಲಿ ಜೋಡಿಸಿಟ್ಟ ಸಾಮಾನಿನ ಡಬ್ಬಿ-ಡಬ್ಬಗಳು, ನೀರಿಳಿಯಲೆಂದು ಬೋರಲು ಹಾಕಿದ ಅಡಿಗೆ ಪಾತ್ರೆಗಳು… ಇವೆಲ್ಲಾ ಕಾಣದಿದ್ದರೆ ಅದನ್ನು ಅಡುಗೆ ಮನೆ ಅಂತ ಹೇಗೆ ಕರೆಯಲಾದೀತು? ಅಬ್ಬಬ್ಟಾ, ಅದೇನು ಶಿಸ್ತು?!
ಈಗಿನ ಅಡುಗೆ ಮನೆಗಳ್ಳೋ, ಇವರು ಮನೆಯಲ್ಲಿ ಅಡುಗೆ ಮಾಡ್ತಾರೋ ಇಲ್ಲವೋ ಅನ್ನೋ ಸಂದೇಹ ಹುಟ್ಟುಹಾಕುವಷ್ಟು ಫಳ ಫಳ ಅನ್ನುತ್ತಿರುತ್ತವೆ. ತಿಂಗಳ ಹಿಂದೆ ಗೆಳತಿಯ ಮನೆಗೆ ಹೋಗಿದ್ದೆ. ಅದೇನು ಶಿಸ್ತು ಅಂತೀರಾ? ಎಲ್ಲವೂ ಬಹಳ ಅಚ್ಚುಕಟ್ಟಾಗಿ ಜೋಡಿಸಿಟ್ಟಂತಿತ್ತು. ನನಗೆ ಇದು ಮ್ಯೂಸಿಯಮ್ಮೊà, ಅಡುಗೆಮನೆಯೋ ಅಂತ ಸಂದೇಹ ಶುರುವಾಯಿತು. ಗೆಳತಿ ಅಲ್ಲಿ ಅಡುಗೆ ಮಾಡಿದ್ದಳು ಅನ್ನೋದಕ್ಕೆ ಅಡುಗೆಮನೆಯ ಹಾಸುಕಲ್ಲ ಮೇಲೆ ಸ್ಟವ್, ಜೊತೆಗೆ ಎರಡು ಹಾಟ್‌ಬಾಕ್ಸ್ ಕಾಣಿಸಿತೇ ಹೊರತು ಮತ್ತೇನೂ ಕಾಣಲಿಲ್ಲ.. ಡಬ್ಬಿ, ಪಾತ್ರೆ-ಪಗಟೆಗಳು, ಅಡುಗೆ ಸಾಮಾನು, ಎಣ್ಣೆ, ತುಪ್ಪ, ಎಲ್ಲವೂ ಇಟಾಲಿಯನ್ ಕಿಚನ್‌ನ ಮುಚ್ಚಿದ ಕಪಾಟೊಳಗೆ ಬೆಚ್ಚಗೆ ನಿದ್ರಿಸುತ್ತಿದ್ದವು. ಏಳು ವರ್ಷದ ಹಿಂದೆ ಕಟ್ಟಿಸಿದ ಮನೆಯಂತೆ. ಆದರೂ, ಮೊನ್ನೆ ಗೃಹಪ್ರವೇಶ ಆಗಿದ್ದೇನೋ ಅನ್ನುವಷ್ಟು ಹೊಸದರಂತೆ ನಳನಳಿಸುತ್ತಿತ್ತು. ಅಡಿಗೆಮನೆಯಲ್ಲೂ ಒಂದು ಶೋಕೇಸ್! ಅದರಲ್ಲಿ ಗಾಜಿನ ಪಾತ್ರೆಗಳನ್ನೆಲ್ಲಾ ವಿನ್ಯಾಸವಾಗಿ ಜೋಡಿಸಿಟ್ಟಿದ್ದಳು. ಪಡಸಾಲೆಯ, ಶಯನಾಗೃಹದ ಗೋಡೆಗಳು ವಾಲ್ ಸ್ಟಿಕ್ಕರ್‌ಗಳಿಂದ ಕಂಗೊಳಿಸುತ್ತಿತ್ತು. ಚೊಕ್ಕವಾಗಿ ತೆರೆದ ಕಪಾಟುಗಳಲ್ಲಿ ಜೋಡಿಸಿಟ್ಟ ಅಲಂಕೃತ ಸಾಮಗ್ರಿ, ಟೆಡ್ಡಿ ಬೇರ್‌ಗಳು, ಮೂಲೆಗಳಲ್ಲಿಟ್ಟ ಹೂದಾನಿಗಳು… ಅದೂ ಸಾಲದು ಅಂತ, ವಿದೇಶಕ್ಕೆ ಪ್ರವಾಸ ಹೋದಾಗ ತಂದ ಫ್ರಿಡ್ಜ್ ಮ್ಯಾಗ್ನೆಟ್‌ಗಳು ರೆಫ್ರಿಜರೇಟರ್‌ನ ಬಾಗಿಲ ಮೇಲೆ ರಾರಾಜಿಸುತ್ತಿದ್ದವು. ಅದೊಂದು ಮನೆಯೇ?
ನನಗೋ ಅದು ಮನೆಯೆಂದೇ ಅನ್ನಿಸಲಿಲ್ಲ. ಯಾವ ವಸ್ತುವನ್ನೂ ಉಪಯೋಗಿಸದೆ ಸ್ವತ್ಛ ಮಾಡಿ ಜೋಡಿಸಿಟ್ಟಂತಿತ್ತು. ಕುತೂಹಲ ತಾಳಲಾರದೇ ಕೇಳಿಯೇಬಿಟ್ಟೆ- “ಲೇ, ನಿನಗೆ ಬೇರೆ ಕೆಲಸ ಇಲ್ಲವೇನೆ? ಇಡೀ ದಿನ ಮನೆಯನ್ನು ಅಚ್ಚುಕಟ್ಟಾಗಿ ಇಡೋದ್ರಲ್ಲೇ ಕಾಲ ಹರಣ ಮಾಡ್ತಾ ಇದ್ದೀಯ? ವಸ್ತು ಸಂಗ್ರಹಾಲಯವ ರೀತಿ ಮನೇನ ಪ್ರದರ್ಶನಕ್ಕೆ ಇಟ್ಟಿದ್ಯಾ? ಮಳೆ ಬಂದಾಗ ಒದ್ದೆಬಟ್ಟೆ ಒಣ ಹಾಕಲು ರೂಮಿನಲ್ಲೆರಡು ತಂತೀನೂ ಕಟ್ಟಿಲ್ವಲ್ಲೇ! ಅಡುಗೆ ಮಾಡಿದ್ದೀನಿ ಅಂತೀಯ, ಕುಕ್ಕರ್, ಸೌಟು, ಬಾಣಲಿ ಏನೂ ಹೊರಗಡೆ ಕಾಣಿಸ್ತಾ ಇಲ್ಲ.. ಮನೇನ ಮನೆಯಂತಿರಲು ಬಿಡೆ’- ಅದಕ್ಕವಳು ನನ್ನನ್ನು ವಿಚಿತ್ರವಾಗಿ ನೋಡಿ, ಸುಮ್ಮನಾದಳು. ಕೊಳಕು ಮಾಡಿ ಅಂತಿಲ್ಲ…
ಅಯ್ಯೋ, ಏನು ಕೊಳಕಿಯಪ್ಪಾ ಇವಳು ಅಂದುಕೊಳ್ಳಬೇಡಿ! ಮನೆಯನ್ನು ಕೊಳಕು ಕೊಳಕಾಗಿ ಇಟ್ಟುಕೊಳ್ಳಿ ಅಂತ ಹೇಳುತ್ತಿಲ್ಲ. ಎಷ್ಟು ಬೇಕೋ, ಅಷ್ಟು ಶುಚಿಯಾಗಿ ಇಟ್ಟುಕೊಂಡರೆ ಸಾಕು. ದುಬಾರಿ ಹಣ ಕೊಟ್ಟು ಆ್ಯಂಟಿಕ್, ಯುನಿಕ್ ಅಂತೆಲ್ಲಾ ಕೃತಕ ವಸ್ತುಗಳನ್ನು, ಪ್ಲಾಸ್ಟಿಕ್‌ನ ಅಲಂಕಾರಿಕ ವಸ್ತುಗಳನ್ನು, ವಾಲ್ ಸ್ಟಿಕ್ಕರ್‌ಗಳನ್ನು ಖರೀದಿಸುವ ಬದಲಿಗೆ ಬಾಲ್ಕನಿಯಲ್ಲೋ, ಹಿಂದಣ ಅಥವಾ ಮುಂದಣ ಖಾಲಿ ಜಾಗದಲ್ಲೋ, ಪುಟ್ಟದಾಗಿ ಗಾರ್ಡೆನಿಂಗ್ ಮಾಡಿ. ಕೃತಕ ವಸ್ತುಗಳ ಸ್ವತ್ಛತೆಗೆ ವಹಿಸುವ ಸಮಯ, ಶ್ರಮವನ್ನೇ ಉದ್ಯಾನಕ್ಕೆ ಮಾಡಿದರೆ, ಮನಸ್ಸಿಗೂ ಮುದ ಪರಿಸರಕ್ಕೂ ಪ್ರಿಯ…ಏನಂತೀರಾ!? -ಅರ್ಚನಾ ಎಚ್.